ಕೂಲ್ ವಿವಾದ; ಗಣೇಶನಿಗೆ ಬೆಣ್ಣೆ, ಮಹೇಶನಿಗೆ ಸುಣ್ಣ
'ಕೂಲ್' ಚಿತ್ರದ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಬುಧವಾರ ವಿಚಾರಣೆ ನಡೆಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೋಲ್ಡನ್ ಸ್ಟಾರ್ ಗಣೇಶ್ ಅವರೆ 'ಕೂಲ್' ಚಿತ್ರವನ್ನು ನಿರ್ದೇಶಿಸುವಂತೆ ಸೂಚಿಸಿದೆ. ಹಾಗೆಯೇ ಚಿತ್ರದ ನಿರ್ದೇಶಕ ಮುಸ್ಸಂಜೆ ಮಹೇಶ್ ಗೆ ರು.1 ಲಕ್ಷ ಪರಿಹಾರ ನೀಡುವಂತೆ ಆಜ್ಞಾಪಿಸಿದೆ.
ಚಲನಚಿತ್ರ ವಾಣಿಜ್ಯ ಮಂಡಳಿಯ ನಿಲುವಿಗೆ ತಾವು ಬದ್ಧರಾಗಿರುವುದಾಗಿ ನಟ ಗಣೇಶ್ ಹಾಗೂ 'ಕೂಲ್' ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್ ತಿಳಿಸಿದ್ದಾರೆ. ಆದರೆ ಮುಸ್ಸಂಜೆ ಮಹೇಶ್ ಮಾತ್ರ ಅಪಸ್ವರ ಮಿಡಿದಿದ್ದು, ವಾಣಿಜ್ಯ ಮಂಡಳಿ ಗಣೇಶ್ ಪರ ನಿಲುವು ತಳೆದಿದೆ ಹಾಗೂ ಏಕಪಕ್ಷೀಯವಾಗಿ ವರ್ತಿಸಿದೆ ಎಂದು ದೂರಿದ್ದಾರೆ.
'ಕೂಲ್' ಚಿತ್ರದ ಚಿತ್ರೀಕರಣ ಕೇರಳದಲ್ಲಿ ನಡೆಯುತ್ತಿದ್ದ ವೇಳೆ ಛಾಯಾಗ್ರಾಹಕ ರತ್ನವೇಲು ಹಾಗೂ ಮುಸ್ಸಂಜೆ ಮಹೇಶ್ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಈ ಘಟನೆ ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್ ರೊಂದಿಗೆ ವೈಮನಸ್ಯಕ್ಕೂ ಕಾರಣವಾಗಿತ್ತು. ಹಾಗಾಗಿ ಚಿತ್ರದ ನಿರ್ದೇಶಕ ಮಹೇಶ್ ಹೊರಬಿದ್ದಿದ್ದರು.
ಬಳಿಕ ಗಣೇಶ್ ಹಾಗೂ ಮಹೇಶ್ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲು ಹತ್ತಿದ್ದರು. ಇಬ್ಬರ ವಾದವನ್ನೂ ಆಲಿಸಿದ ಮಂಡಳಿ ಚಿತ್ರವನ್ನು ಗಣೇಶ್ ಅವರೇ ನಿರ್ದೇಶಿಸಬಹುದು ಎಂದು ಗ್ರೀನ್ ಸಿಗ್ನಲ್ ಕೊಟ್ಟಿದೆ. ಮಂಡಳಿಯ ಈ ನಿರ್ಧಾರಕ್ಕೆ ಮಹೇಶ್ ಚಕಾರವೆತ್ತಿದ್ದಾರೆ. ಶಿಲ್ಪಾ ಗಣೇಶ್ ತಮ್ಮನ್ನು ಅವಮಾನಿಸಿದ್ದಾರೆ ಎಂದೂ ಮಹೇಶ್ ನಿರ್ದೇಶಕರ ಸಂಘಕ್ಕೆ ದೂರು ನೀಡಿದ್ದಾರೆ.


Click it and Unblock the Notifications











