ಕೂಲ್ ವಿವಾದ; ಪರಿಹಾರ ಬೇಡ ಅಂದ್ರು ಮಹೇಶ್
ಗೋಲ್ಡನ್ ಸ್ಟಾರ್ ಗಣೇಶ್ ಸ್ವಂತ ನಿರ್ಮಾಣದ ಚಿತ್ರ 'ಕೂಲ್' ವಿವಾದ ಕಡೆಗೂ ಕೂಲಾಗಿ ಬಗೆಹರಿದಿದೆ. ಚಿತ್ರದ ನಿರ್ದೇಶನದ ಜವಾಬ್ದಾರಿ ಗಣೇಶ್ ಹೆಗಲಿಗೆ ಬಿದ್ದಿದೆ. ಮುಸ್ಸಂಜೆ ಮಹೇಶ್ ಚಿತ್ರದಿಂದ ಹೊರಬಂದಿದ್ದಾರೆ. ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್ ಮತ್ತು ನಿರ್ದೇಶಕ ಮಹೇಶ್ ನಡುವಿನ ತಿಕ್ಕಾಟಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆರೆ ಎಳೆದಿದೆ.
ಚಿತ್ರದ ನಿರ್ದೇಶಕ ಮುಸ್ಸಂಜೆ ಮಹೇಶ್ ಮತ್ತು ಛಾಯಾಗ್ರಾಹಕ ರತ್ನವೇಲು ನಡುವೆ ಅಂಥಹ ಯಾವ ಸಮಸ್ಯೆಯೂ ಇರಲಿಲ್ಲ. ಚಿತ್ರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಅದೊಂದು ಸಣ್ಣ ಸಮಸ್ಯೆಯಷ್ಟೆ ಎಂದು ಕೆಎಫ್ ಸಿಸಿ ಅಧ್ಯಕ್ಷ ಬಸಂತ್ ಕುಮಾರ್ ಹೇಳುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದರು.
'ಕೂಲ್' ಚಿತ್ರದಿಂದ ಮುಸ್ಸಂಜೆ ಮಹೇಶ್ ಹೊರಬರಲು ಒಪ್ಪಿದ್ದಾರೆ. ಇದಕ್ಕೆ ನಿರ್ಮಾಪಕಿ ಶಿಲ್ಪಾ ಗಣೇಶ್ ಸಹಮತ ಸೂಚಿಸಿದ್ದಾರೆ. ಇಬ್ಬರೂ ಈಗ ರಾಜಿಯಾಗಿದ್ದು ಈ ವಿಚಾರವಾಗಿ ಮಾಧ್ಯಮದ ಮುಂದೆ ಮಾತನಾಡುವಂತಿಲ್ಲ ಎಂದಿದ್ದಾರೆ ಬಸಂತ್ ಕುಮಾರ್ ಪಾಟೀಲ್.
ಸೃಜನಶೀಲತೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಮೂಡಿತ್ತು. ಈಗ ಎಲ್ಲವೂ ಬಗೆಹರಿದಿದೆ ಎಂದು ಮಹೇಶ್ ಪ್ರತಿಕ್ರಿಯಿಸಿದ್ದಾರೆ.ಶಿಲ್ಪಾ ಗಣೇಶ್ ಮಾತನಾಡುತ್ತಾ, ನಮ್ಮ ಚಿತ್ರದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿತ್ತು. ಆದರೆ ಹೊಂದಣಿಕೆ ಇಲ್ಲದೆ ಈ ಸಮಸ್ಯೆ ಎದುರಾಯಿತು. ವಾಣಿಜ್ಯ ಮಂಡಳಿ ತೀರ್ಪಿಗೆ ಬದ್ಧರಾಗಿದ್ದೇವೆ ಎಂದು ಹೇಳಿದರು.
ಮುಸ್ಸಂಜೆ ಮಹೇಶ್ ಅವರಿಗೆ ಪರಿಹಾರವಾಗಿ ರು.2 ಲಕ್ಷಗಳನ್ನು ನೀಡಲಾಗಿದೆ. ಚಿತ್ರದ ಆರಂಭ ಹಂತದಲ್ಲಿ ರು.1 ಲಕ್ಷ ತೆಗೆದುಕೊಂಡಿರುವ ಮಹೇಶ್ ನನಗೆ ಇನ್ಯಾವ ಹಣವು ಬೇಡ ಎಂದಿದ್ದಾರೆ. ನನಗೆ ಇಲ್ಲಿಯವೆರೆಗೂ ಸಿಕ್ಕಿರುವ ಮರ್ಯಾದೆಯೇ ಸಾಕು ಎಂದು ಬಾಕಿ ಹಣವನ್ನು ನಿರಾಕರಿಸಿದ್ದಾರೆ. ವಾಣಿಜ್ಯ ಮಂಡಳಿ ತೀರ್ಪಿಗೆ ಬದ್ಧರಾಗಿರುವುದಾಗಿ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ sms ಎಕ್ಸ್ ಪ್ರೆಸ್


Click it and Unblock the Notifications











