'ಜವಾನ್' ಬಳಿಕ ಮಲ್ಟಿಸ್ಟಾರರ್ ಸಿನಿಮಾಗೆ ಕೈ ಹಾಕಿದ ಅಟ್ಲೀ? ಒಂದೇ ಸಿನಿಮಾದಲ್ಲಿ ಶಾರುಖ್-ವಿಜಯ್?
ತಮಿಳಿನ ಸ್ಟಾರ್ ಡೈರೆಕ್ಟರ್ ಅಟ್ಲೀ 'ಜವಾನ್' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಶಾರುಖ್ ಖಾನ್‌ಗೆ ಆಕ್ಷನ್ ಕಟ್ ಹೇಳಿ ಗೆದ್ದಿದ್ದೂ ಆಗಿದೆ. ಅಟ್ಲೀ ಹಾಗೂ ಶಾರುಖ್ ಖಾನ್ ಮೊದಲ ಕಾಂಬಿನೇಷನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಮೆಗಾ ಹಿಟ್ ಅಂತ ಸಾಬೀತು ಮಾಡಿದೆ.
ಅಟ್ಲೀ ತಾನಷ್ಟೇ ಅಲ್ಲ. ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾರನ್ನು ಬಾಲಿವುಡ್‌ಗೆ ಕರೆದುಕೊಂಡು ಹೋಗಿದ್ದರು. ಪ್ರಿಯಾಮಣಿ, ವಿಜಯ್ ಸೇತುಪತಿ ಸೇರಿದಂತೆ ದಕ್ಷಿಣ ಭಾರತದ ಸ್ಟಾರ್ ನಟರೇ 'ಜವಾನ್' ಸಿನಿಮಾದಲ್ಲಿ ಇದ್ದರು. ಬಾಕ್ಸಾಫೀಸ್‌ನಲ್ಲಿ 1100 ಕೋಟಿ ರೂಪಾಯಿ ಗಳಿಸಿ ಹೊಸ ದಾಖಲೆಯನ್ನೇ ನಿರ್ಮಿಸಿತ್ತು.

ಹೀಗಾಗಿ ಈಗ ಬಾಲಿವುಡ್‌ನಲ್ಲೂ ಅಟ್ಲೀ ಕ್ರೇಜ್ ಹೆಚ್ಚಾಗಿದೆ. ಇನ್ನೂ ಹೆಚ್ಚು ಬಾಲಿವುಡ್ ಸಿನಿಮಾಗಳನ್ನು ನಿರ್ದೇಶನ ಮಾಡ್ಬೇಕು ಅನ್ನೋ ಒತ್ತಡ ಹೆಚ್ಚಾಗಿದೆ. ಇದೇ ಗ್ಯಾಪ್‌ನಲ್ಲಿ ಬಾಲಿವುಡ್‌ನಲ್ಲೊಂದು ಸುದ್ದಿ ಹರಿದಾಡುತ್ತಿದೆ. ಅಟ್ಲೀ ಬಾಲಿವುಡ್ ಹಾಗೂ ಕಾಲಿವುಡ್ ಎರಡೂ ಚಿತ್ರರಂಗವನ್ನು ಒಂದು ಮಾಡೋಕೆ ಹೊರಟಿದ್ದಾರೆ. ಶಾರುಖ್ ಖಾನ್ ಹಾಗೂ ದಳಪತಿ ವಿಜಯ್ ಇಬ್ಬರನ್ನೂ ಒಂದೇ ಸಿನಿಮಾದಲ್ಲಿ ಸೇರಿಸೋಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ.
'ಜವಾನ್' ಸಿನಿಮಾ ಬಿಡುಗಡೆಗೂ ಮುನ್ನ ಇಂತಹದ್ದೇ ಒಂದು ಸುದ್ದಿ ಸದ್ದು ಮಾಡಿತ್ತು. ಶಾರುಖ್ ಖಾನ್ ಸಿನಿಮಾದಲ್ಲಿ ತಮಿಳಿನ ಸ್ಟಾರ್ ಹೀರೊ ದಳಪತಿ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದರೆ, ಸಿನಿಮಾ ನೋಡಿದ ಬಳಿಕ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಈಗ ಅದೇ ಕಾಂಬಿನೇಷನ್ ಇಟ್ಟುಕೊಂಡಿ ಅಟ್ಲೀ ಹೊಸ ಸಿನಿಮಾಗೆ ಸ್ಕೆಚ್ ಹಾಕಿದ್ದಾರಂತೆ.
ಅಟ್ಲೀ ಈಗಾಗಲೇ ಸ್ಕ್ರಿಪ್ಟ್ ಕೆಲಸವನ್ನು ಶುರು ಮಾಡಿದ್ದಾರೆ. ಇಬ್ಬರೂ ನಟರಿಗೆ ಸರಿಹೊಂದುವಂತಹ ಕಥೆಯನ್ನೇ ಆಯ್ಕೆ ಮಾಡಿರೋ ಬಗ್ಗೆ ಸುದ್ದಿ ಓಡಾಡುತ್ತಿದೆ. ಇತ್ತೀಚೆಗೆ ಅಟ್ಲೀ ಸಂದರ್ಶನವೊಂದರಲ್ಲಿ ಖುದ್ದಾಗಿ ಶಾರುಖ್ ಖಾನ್ ಹಾಗೂ ದಳಪತಿ ವಿಜಯ್ ಹಾಕಿಕೊಂಡು ಸಿನಿಮಾ ಮಾಡುವ ಬಗ್ಗೆ ಹೇಳಿಕೊಂಡಿದ್ದಾರೆಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚೆಗಿನ ವರದಿ ಪ್ರಕಾರ, " ಶಾರುಖ್ ಖಾನ್ ಹಾಗೂ ದಳಪತಿ ವಿಜಯ್ ಇಬ್ಬರೂ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದರು. ಆ ವೇಳೆ ನನ್ನ ಸಿನಿಮಾಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಮುಂದೆ ಮಲ್ಟಿಸ್ಟಾರರ್ ಸಿನಿಮಾ ಮಾಡೋ ಪ್ಲ್ಯಾನ್ ಇದ್ದರೆ ಒಟ್ಟಿಗೆ ನಟಿಸೋಣ ಎಂದಿದ್ದಾರೆ. ಅದಕ್ಕೆ ಮಲ್ಟಿಸ್ಟಾರರ್ ಸಿನಿಮಾ ಮಾಡೋಣ ಅಂತ ಅನಿಸುತ್ತಿದ್ದು, ಅದೇ ನನ್ನ ಮುಂದಿನ ಸಿನಿಮಾ." ಎಂದು ಹೇಳಿದ್ದಾರೆಂಬ ಬಗ್ಗೆ ವರದಿಯಾಗಿದೆ.
ಶಾರುಖ್ ಖಾನ್ ಹಾಗೂ ದಳಪತಿ ವಿಜಯ್ ಇಬ್ಬರನ್ನೂ ಒಟ್ಟಿಗೆ ತೆರೆಮೇಲೆ ತಂದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ 3 ಸಾವಿರ ಕೋಟಿ ರೂಪಾಯಿ ಬಾಚಿಕೊಳ್ಳುತ್ತೆ ಎಂದೂ ಅಟ್ಲೀ ಭರವಸೆಯ ಮಾತುಗಳನ್ನಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಶಾರುಖ್ ಖಾನ್, ವಿಜಯ್ ಎಲ್ಲೂ ಹೇಳಿಕೆ ಕೊಟ್ಟಿಲ್ಲ.
ಶಾರುಖ್ ಖಾನ್ ಸದ್ಯಕ್ಕೀಗ 'ಡಂಕಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ ಈ ಸಿನಿಮಾ ಡಿಸೆಂಬರ್ 22ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅದೇ ದಿನ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ಸಿನಿಮಾ 'ಸಲಾರ್' ಕೂಡ ಬಿಡುಗಡೆಯಾಗಲಿದೆ. ಒಂದು ವೇಳೆ ಅಟ್ಲೀ, ಶಾರುಖ್ ಖಾನ್, ದಳಪತಿ ವಿಜಯ್ ಒಟ್ಟಿಗೆ ಒಂದೇ ಸಿನಿಮಾಗೆ ಕೆಲಸ ಮಾಡಿದರೆ, ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಯಾಗುವ ಸಾಧ್ಯತೆಯಿದೆ.


Click it and Unblock the Notifications











