ಆಸ್ಕರ್ ವೇದಿಕೆ ಮೇಲೆ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಡ್ಯಾನ್ಸ್?
ಭಾರತದ ಮೂವೀ ಮಾಂತ್ರಿಕ ಎಸ್ ಎಸ್ ರಾಜಮೌಳಿಯ ಮೆಗಾ ಮೂವಿ RRR ಬಾಕ್ಸಾಫೀಸ್‌ನಲ್ಲಿ ಮತ್ತೊಂದು ಇತಿಹಾಸವನ್ನೇ ಸೃಷ್ಟಿಸಿತ್ತು. ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಕಾಂಬಿನೇಷನ್ ಒಂದು ಕಡೆಯಾದರೆ, ಇನ್ನೊಂದು ಕಡೆ ಬಾಹುಬಲಿ ಸಿನಿಮಾ ಮೂಲಕ ರಾಜಮೌಳಿ ನಿರ್ದೇಶಿಸಿದ ಸಿನಿಮಾ ಆಗಿತ್ತು. ಈ ಕಾರಣಕ್ಕೆ ಕುತೂಹಲ ಗರಿಗೆದರಿತ್ತು.
ಮೂವರು ದಿಗಜ್ಜರು ಒಟ್ಟಿಗೆ ಸೇರಿ ನಿರ್ಮಿಸಿದ್ದ ಈ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲೂ ಸೌಂಡ್ ಮಾಡಿತ್ತು.ಆದರೆ, ಓಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ RRR ರಿಲೀಸ್ ಆದ ಬಳಿಕ ಅಮೆರಿಕದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಲಿವುಡ್ ಮಂದಿನೇ ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು.

RRR ಅತೀ ದೊಡ್ಡ ಓಪನಿಂಗ್
ರಾಜಮೌಳಿ ನಿರ್ದೇಶಿಸಿದ RRR ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದು ಮೊದಲ ದಿನವೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿ ಸೇರಿಕೊಂಡಿದೆ. ಭಾರತದಲ್ಲಿ ಮೊದಲ ದಿನ RRR ಗಳಿಸಿದ್ದು ಬರೋಬ್ಬರಿ 223 ಕೋಟಿ ರೂ. ಇನ್ನು ವಿಶ್ವದಾದ್ಯಂತ ಈ ಸಿನಿಮಾ ಸುಮಾರು 1100 ಕೋಟಿ ರೂಪಾಯಿ ಗಳಿಸಿದೆ. ಇಷ್ಟೇ ಅಲ್ಲ RRR ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿಯೇ ಸುಮಾರು 250 ಕೋಟಿ ರೂಪಾಯಿಗೂ ಅಧಿಕ ಗಳಿಸಿತ್ತು. ಆ ಬಳಿಕ ಓಟಿಟಿಯಲ್ಲಿ ರಿಲೀಸ್ ಆದ್ಮೇಲೆ ವಿದೇಶಗಳಲ್ಲೂ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಾಗಿತ್ತು. ಹಾಲಿವುಡ್ ಫಿಲ್ಮ್ ಮೇಕರ್ಸ್‌ಗೂ RRR ಮೆಚ್ಚುಗೆ ಗಳಿಸಿತ್ತು.

ಆಸ್ಕರ್‌ಗೆ RRR ಸಿನಿಮಾ
RRR ಸಿನಿಮಾಗೆ ಸಿಕ್ಕ ಜನಪ್ರಿಯತೆಯನ್ನು ಕಂಡು ಜನರೇ ಈ ಸಿನಿಮಾ ಆಸ್ಕರ್‌ಗೆ ಹೋಗಬೇಕು ಎಂದು ಒತ್ತಾಯಿಸಿದ್ದರು. ಆದರೆ, ಭಾರತದಿಂದ RRR ಅಧಿಕೃತವಾಗಿ ಆಸ್ಕರ್‌ಗೆ ಕಳಿಸಲಿಲ್ಲ. ಗುಜರಾತಿ ಸಿನಿಮಾವನ್ನು ಆಸ್ಕರ್ ಪ್ರಶಸ್ತಿಗೆ ಕಳುಹಿಸಿಕೊಡಲಾಗಿದೆ. ಆದರೂ, RRR ಎಫ್‌ವೈಸಿ ವಿಧಾನದ ಮೂಲಕ ಆಸ್ಕರ್‌ಗೆ ನಾಮಿನೇಷನ್ ಅನ್ನು ಕಳುಹಿಸಿಕೊಟ್ಟಿದೆ. ಸುಮಾರು 14 ವಿಭಾಗಗಳಲ್ಲಿ ಆಸ್ಕರ್ ನಾಮಿನೇಷನ್ ಕಳುಹಿಸಿದ್ದು, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ಅತ್ಯುತ್ತಮ ಸಾಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಪೈಪೋಟಿ ನೀಡಲಿದೆ.

ಎನ್‌ಟಿಆರ್-ರಾಮ್ ಚರಣ್ ಡ್ಯಾನ್ಸ್?
RRR ಸಿನಿಮಾವನ್ನು ಸುಮಾರು 400 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಸಂಗೀತದಿಂದ ಹಿಡಿದು, ಸಿನಿಮಾದಲ್ಲಿದ್ದ ಪ್ರತಿಯೊಬ್ಬರೂ ಅದ್ಭುತವಾಗಿ ಕೆಲಸ ಮಾಡಿದ್ದರು. ಅದಕ್ಕೀಗ ಪ್ರತಿಫಲ ಸಿಕ್ಕಿದೆ. ಇನ್ನೊಂದು ಕಡೆ ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜಾ ಇಬ್ಬರೂ ಆಸ್ಕರ್ ವೇದಿಕೆ ಮೇಲೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ಆಸ್ಕರ್ ವೇದಿಕೆ ಮೇಲೆ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಇಬ್ಬರೂ RRR ಸಿನಿಮಾದ 'ನಾಟು ನಾಟು' ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ, ಭಾರತೀಯ ಚಿತ್ರರಂಗಕ್ಕೆ ಇದೊಂದು ಹೆಮ್ಮೆ ಅಂತಲೇ ಹೇಳಬಹುದು.

ಬಾಲಿವುಡ್ ಸ್ಟಾರ್ ನಟರ ಎಂಟ್ರಿ
RRR ಸಿನಿಮಾದಲ್ಲಿ ಕೇವಲ ತೆಲುಗು ನಟರಷ್ಟೇ ಅಲ್ಲ, ಬಾಲಿವುಡ್‌ನ ಸ್ಟಾರ್ ನಟರು ಕೂಡ ನಟಿಸಿದ್ದರು. ಸೀತಾ ಪಾತ್ರದಲ್ಲಿ ಆಲಿಯಾ ಭಟ್ ನಟಿಸಿದ್ದರೆ, ಇನ್ನೊಂದು ಕಡೆ ಅಜಯ್ ದೇವಗನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗೇ ಹಾಲಿವುಡ್ ನಟಿ ಓಲಿವಿಯಾ ಮೋರೀಸ್ ಕೂಡ ಸಿನಿಮಾದ ಭಾಗವಾಗಿದ್ದರು. ಇನ್ನುಳಿದಂತೆ, ಶ್ರಿಯಾ ಸರಣ್, ಸಮುಥಿರಕಣಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











