5 ವರ್ಷದಿಂದ ಈ ಸಿನಿಮಾಗೆ ಹೀರೊನೇ ಸಿಗುತ್ತಿಲ್ಲ: ಅಲ್ಲು ಅರ್ಜುನ್ ಆದ್ರೂ ಗ್ರೀನ್ ಸಿಗ್ನಲ್ ಕೊಡ್ತಾರಾ?
'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ಬಾಲಿವುಡ್ ಬಾಕ್ಸಾಫೀಸ್ ಅನ್ನೇ ಅಲುಗಾಡಿಸಿತ್ತು. ಈ ಸಿನಿಮಾ ಮೂಲಕ ವಿಕ್ಕಿ ಕೌಶಾಲ್ ಬಾಲಿವುಡ್‌ನಲ್ಲಿ ಸ್ಟಾರ್ ನಟನಾಗಿ ಮೆರೆಯುತ್ತಿದ್ದಾರೆ. ಇದೇ ಸಿನಿಮಾದ ನಿರ್ದೇಶಕ ಆದಿತ್ಯಧರ್ 'ಇಮ್ಮಾರ್ಟಲ್ ಅಶ್ವತ್ಥಾಮ' ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡುವುದಕ್ಕೆ ಹೊರಟಿದ್ದಾರೆ.
ಕಳೆದ ಐದು ವರ್ಷಗಳಿಂದ ಇದೊಂದೇ ಸಿನಿಮಾ ಮೇಲೆ ಆದಿತ್ಯಧರ್ ಕೆಲಸ ಮಾಡುತ್ತಿದ್ದಾರೆ. ಮಹಾಭಾರತದಿಂದ ಪ್ರೇರಣೆ ಪಡೆದು ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ. ಆದರೆ, ಕಳೆದ ಐದು ವರ್ಷಗಳಿಂದ ಈ ಸಿನಿಮಾಗೆ ಒಬ್ಬನೇ ಒಬ್ಬ ಹೀರೊ ಸಿಗುತ್ತಿಲ್ಲ.

ಇತ್ತೀಚೆಗೆ ವಿಕ್ಕಿ ಕೌಶಾಲ್ ಕೂಡ ಈ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಚಿತ್ರತಂಡ ಮತ್ತೊಬ್ಬ ಹೀರೊ ಹುಡುಕುತ್ತಿದೆ. ಈ ವೇಳೆನೇ ಬಾಲಿವುಡ್‌ನಲ್ಲಿ ಸುದ್ದಿಯೊಂದು ಓಡಾಡುತ್ತಿದ್ದು, ಅಲ್ಲು ಅರ್ಜುನ್ ಜೊತೆ ಮಾತುಕತೆ ನಡೆಯುತ್ತಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.
ಅಲ್ಲು ಅರ್ಜುನ್‌ಗೆ ಜಿಯೋ ಸ್ಟುಡಿಯೋ ಕರೆ?
ನಿರ್ದೇಶಕ ಆದಿತ್ಯಧರ್ ಡ್ರೀಮ್ ಪ್ರಾಜೆಕ್ಟ್ 'ಇಮ್ಮಾರ್ಟಲ್ ಆಶ್ವತ್ಥಾಮ'. ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಜಿಯೋ ಸ್ಟುಡಿಯೋ ಮುಂದೆ ಬಂದಿದೆ. ಇಲ್ಲಿ ಅಶ್ವತ್ಥಾಮನ ಪಾತ್ರ ಮಾಡುವುದಕ್ಕೆ ಅಲ್ಲು ಅರ್ಜನ್ ಜೊತೆ ಜಿಯೋ ಸ್ಟುಡಿಯೋ ಮಾತುಕತೆ ನಡೆಸುತ್ತಿದೆ ಅನ್ನೋ ಸುದ್ದಿ ಓಡಾಡುತ್ತಿದೆ.
ಕಳೆದ ಕೆಲವು ದಿನಗಳಿಂದ ಅಲ್ಲು ಅರ್ಜುನ್ ಹಾಗೂ ಜಿಯೋ ಸ್ಟುಡಿಯೋ ಹಲವು ಬಾರಿ ಮಾತುಕತೆ ನಡೆಸಿದ್ದು, ಯಾವ ನಿರ್ಧಾರಕ್ಕೆ ಬಂದಿದ್ದಾರೆ? ಅನ್ನೋ ಸುಳಿವು ಸಿಕ್ಕಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ವಿಷಯ ಬಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಸಿನಿಮಾ
'ಇಮ್ಮಾರ್ಟಲ್ ಅಶ್ವತ್ಥಾಮ' ಸಿನಿಮಾ ಬಗ್ಗೆ ದೇಶಾದ್ಯಂತ ಸಂಚಲ ಸೃಷ್ಟಿಯಾಗಿದೆ. ಅಲ್ಲು ಅರ್ಜುನ್ ಸೇರಿಕೊಂಡ ಮೇಲೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಬಿಗ್ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಅಂದುಕೊಂಡಂತೆ ಎಲ್ಲವೂ ಕೈ ಹಿಡಿದರೆ, ಭಾರತೀಯ ಚಿತ್ರರಂಗ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಸಾಕ್ಷಿಯಾಗಲಿದೆ.
ಹೀಗಾಗಿ ಜಿಯೋ ಸ್ಟುಡಿಯೋ 'ಪುಷ್ಪ' ಸ್ಟಾರ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದರಿಂದ ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ಸಂಚಲನ ಸೃಷ್ಟಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಅಲ್ಲು ಅರ್ಜುನ್ ಕೈ ತುಂಬಾ ಸಿನಿಮಾ
'ಇಮ್ಮಾರ್ಟಲ್ ಅಶ್ವತ್ಥಾಮ' ಸಿನಿಮಾವನ್ನು ಎರಡು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗುತ್ತೆ. ಇದಕ್ಕಾಗಿಯೇ ಜಿಯೋ ಸ್ಟುಡಿಯೋ ದೊಡ್ಡ ಮೊತ್ತವನ್ನು ತೆಗೆದಿಟ್ಟಿದೆ ಎನ್ನಲಾಗಿದೆ. ಆದರೆ, 'ಪುಷ್ಪ 2' ಬಳಿಕ ಅಲ್ಲು ಅರ್ಜುನ್ ಕೆಲವು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅವನ್ನು ಬಿಟ್ಟು ಈ ಸಿನಿಮಾ ಒಪ್ಪಿಕೊಳ್ಳುತ್ತಾರಾ? ಅನ್ನೋದೇ ಪ್ರಶ್ನೆ.
ಅಲ್ಲು ಅರ್ಜುನ್ ಈಗಾಗಲೇ ತ್ರಿವಿಕ್ರಮ್, 'ಅರ್ಜುನ್ ರೆಡ್ಡಿ' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಹಾಗೂ ತಮಿಳು ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡಲು ಒಪ್ಪಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಇವುಗಳ ಮಧ್ಯೆ 'ಇಮ್ಮಾರ್ಟಲ್ ಅಶ್ವತ್ಥಾಮ' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುತ್ತಾರಾ? ಅಂತ ಚಿತ್ರರಂಗ ಕುತೂಹಲದಿಂದ ನೋಡುತ್ತಿದೆ.


Click it and Unblock the Notifications











