ವಿಚ್ಛೇದನದ ಬಳಿಕ ಪುತ್ರಿ ಐಶ್ವರ್ಯಾ ನಿರ್ದೇಶಿಸಿದ ಸಿನಿಮಾ ನೋಡಿ ರಜನಿ 'ಚಿಂತೆ ಬೇಡ' ಎಂದಿದ್ದೇಕೆ?
ಸೂಪರ್‌ಸ್ಟಾರ್ ರಜನಿಕಾಂತ್ ಒಂದು ಫ್ರೇಮ್‌ನಲ್ಲಿ ಬಂದು ಹೋದ್ರೂ ಅದರ ಖದರ್ ಬೇರೆನೇ ಇರುತ್ತೆ. ಆ ಸಿನಿಮಾ ನೋಡುವುದಕ್ಕೆ ಅವರ ಅಭಿಮಾನಿಗಳು ಥಿಯೇಟರ್ ಮುಂದೆ ಕ್ಯೂ ನಿಲ್ಲುತ್ತಾರೆ. ಅದರಲ್ಲೂ 'ಜೈಲರ್' ಸಿನಿಮಾ ತೆರೆಕಂಡ ಬಳಿಕ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ.
ಈ ಮಧ್ಯೆ ರಜನಿಕಾಂತ್ ತಮ್ಮ ಹಿರಿಯ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸಿದ 'ಲಾಲ್ ಸಲಾಂ' ಸಿನಿಮಾದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ರಜನಿ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದರು. ಗೆಸ್ಟ್ ರೋಲ್ ಆಗಿದ್ದರೂ, ಪವರ್‌ಫುಲ್ ಪಾತ್ರವಿರುತ್ತೆ ಅಂತ ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ.

ಐಶ್ವರ್ಯಾ ರಜನಿಕಾಂತ್ ನಿರ್ದೇಶನದ 'ಲಾಲ್ ಸಲಾಂ' ಸಿನಿಮಾದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ಇದೇ ಪೊಂಗಲ್‌ಗೆ ಬಿಡುಗಡೆ ಮಾಡುವ ತರಾತುರಿಯಲ್ಲಿ ಇದ್ದರು. ಆದರೆ, ಅಂದುಕೊಂಡಂತೆ ಸಿನಿಮಾ ರಿಲೀಸ್ ಮಾಡುವುದಕ್ಕೆ ಸಾಧ್ಯವಾಗಿಲ್ಲ.
ಆದರೆ, 'ಲಾಲ್ ಸಲಾಂ' ಸಿನಿಮಾವನ್ನು ಸೂಪರ್‌ಸ್ಟಾರ್ ರಜನಿಕಾಂತ್ ಈಗಾಗಲೇ ವೀಕ್ಷಿಸಿದ್ದಾರೆ ಅನ್ನೋ ಸಂಗತಿ ಹೊರಬಿದ್ದಿದೆ. 'ಜೈಲರ್' ಬಳಿಕ ರಜನಿಕಾಂತ್ ಮತ್ತೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅತಿಥಿ ಪಾತ್ರದಲ್ಲಿ ನಟಿಸಿದ್ದರೂ, ತಮ್ಮ ಇಮೇಜ್‌ಗೆ ತಕ್ಕಂತೆಯೇ ಇರಬೇಕು. ಹೀಗಾಗಿ ಖುದ್ದಾಗಿ ಸಿನಿಮಾವನ್ನು ವೀಕ್ಷಿಸಿದ್ದಾರೆ ಎನ್ನಲಾಗಿದೆ.
'ಲಾಲ್ ಸಲಾಂ' ಸಿನಿಮಾದಲ್ಲಿ ರಜನಿಕಾಂತ್ ಮೊಯ್ದೀನ್ ಭಾಯ್ ಅನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬೈ ದಾದಾ ಪಾತ್ರದಲ್ಲಿ ರಜನಿ ತೆರೆಮೇಲೆ ಎಂಟ್ರಿ ಕೊಡುತ್ತಾರೆ ಎನ್ನಲಾಗಿದೆ. ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಇಬ್ಬರನ್ನು ಒಂದು ಸಮಸ್ಯೆಯಿಂದ ಪಾರು ಮಾಡುವ ದೃಶ್ಯಗಳಿವೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಈ ಸಿನಿಮಾದಲ್ಲಿ ಕಪಿಲ್ ದೇವ್ ಕೂಡ ನಟಿಸಿರೋದು ವಿಶೇಷ.

ರಜನಿಕಾಂತ್ ಅತಿಥಿ ಪಾತ್ರದಲ್ಲಿ ನಟಿಸಿರೋದೇನೊ ನಿಜ. ಆದರೆ, ಎಷ್ಟು ನಿಮಿಷಗಳು ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ? ಅನ್ನೋ ಪ್ರಶ್ನೆಗೆ ಹುಟ್ಟುಹಬ್ಬದಂದೇ ಉತ್ತರ ಸಿಕ್ಕಿತ್ತು. ಲಾಲ್ ಸಿನಿಮಾದಲ್ಲಿ ರಜನಿ ಸುಮಾರು 50 ನಿಮಿಷಗಳ ಕಾಲ ಇರುತ್ತಾರೆ ಎಂದು ವರದಿಯಾಗಿವೆ. ಅಲ್ಲದೆ ರಜನಿ ಬರ್ತ್‌ಡೇಗೆ ರಿಲೀಸ್ ಆಗಿದ್ದ ಟೀಸರ್ ಕೂಡ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಹೀಗಾಗಿ ರಜನಿಕಾಂತ್ ಸಿನಿಮಾ ನೋಡಿ ಏನಂದ್ರು? ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲೇ ಇದೆ.
ಐಶ್ವರ್ಯಾ 'ಲಾಲ್ ಸಲಾಂ' ಸಿನಿಮಾ ಕಂಪ್ಲೀಟ್ ಆಗಿ ಮುಗಿಸಿ, ತಂದೆ ರಜನಿಕಾಂತ್‌ಗೆ ಸಿನಿಮಾ ತೋರಿಸಿದ್ದಾರೆ ಎನ್ನಲಾಗಿದೆ. ಸಿನಿಮಾ ನೋಡಿದ ಬಳಿಕ ರಜನಿ ಚಿಂತಿಸಬೇಡ ಅಂತನೂ ಅಂದಿದ್ದಾರಂತೆ. "ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಯಾವುದರ ಬಗ್ಗೆನು ಚಿಂತೆ ಮಾಡಬೇಡ. ಈ ಸಿನಿಮಾ ಖಂಡಿತವಾಗಿಯೂ ಹಿಟ್ ಆಗಲಿದೆ" ಎಂದು ರಜನಿ ತಮ್ಮ ಮಗಳಿಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ರಜನಿಕಾಂತ್ ಸಿನಿಮಾ ನೋಡಿ ಬೇಸರಗೊಂಡಿದ್ದರೆಂಬ ಸುದ್ದಿ ಕೂಡ ಹರಿದಾಡಿತ್ತು.
'ಲಾಲ್ ಸಲಾಂ' ಇದೇ ಪೊಂಗಲ್‌ಗೆ ರಿಲೀಸ್ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನವನ್ನು ಮುಂದೂಡಲಾಗಿದೆ. ಸಿನಿಮಾದ ಕೆಲವು ಚಿಕ್ಕ ಪುಟ್ಟ ಕೆಲಸಗಳು ಬಾಕಿ ಉಳಿದಿದ್ದು,ಈ ಕಾರಣಕ್ಕಾಗಿಯೇ ತಡವಾಗಿ ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಇದೇ ತಿಂಗಳ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications











