Allu Arjun: ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರಕ್ಕೆ 400 ಕೋಟಿ ಆಫರ್: ಡೀಲ್ ಓಕೆ ಆಯ್ತಾ?
2021 ಅಲ್ಲು ಅರ್ಜುನ್ ಪಾಲಿಗೆ ಮರೆಯಲಾಗದ ವರ್ಷ. ಸ್ಟೈಲಿಶ್ ಸ್ಟಾರ್ ಆಗಿದ್ದ ಅಲ್ಲು ಐಕಾನ್ ಸ್ಟಾರ್ ಆದ ವರ್ಷ. ಇದೇ ವರ್ಷದಲ್ಲಿ ಟಾಲಿವುಡ್ ಸ್ಟಾರ್ ಮೀಸಲಾಗಿದ್ದ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದರು. ಅದಕ್ಕೆ ಕಾರಣ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'. ಈ ಸಿನಿಮಾ ಕೇವಲ ಟಾಲಿವುಡ್ ಅಷ್ಟೇ ಅಲ್ಲ. ಬಾಲಿವುಡ್ ಬಾಕ್ಸಾಫೀಸ್‌ನಲ್ಲೂ ತನ್ನ ಖದರ್ ಏನು ಅನ್ನೋದನ್ನು ತೋರಿಸಿ ಕೊಟ್ಟಿತ್ತು.
ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್' ಒಂದೊಂದು ಚಿತ್ರರಂಗದಲ್ಲೂ ಒಂದೊಂದು ಹೊಸ ದಾಖಲೆ ಬರೆದು ಮುನ್ನುಗಿದೆ. ವಿಶ್ವದಾದ್ಯಂತ ಪುಷ್ಪ ಸಿನಿಮಾ 350 ಕೋಟಿ ಅಧಿಕ ಗಳಿಕೆ ಕಂಡಿದೆ. ಈ ಕಾರಣಕ್ಕೆ ಐಕಾನ್ ಸ್ಟಾರ್ 2021 ಅನ್ನು ಮರೆಯುವ ಹಾಗೆಯೇ ಇಲ್ಲ.
'ಪುಷ್ಪ: ದಿ ರೈಸ್' ಸಿನಿಮಾ ಹವಾ ಹೇಗಿತ್ತು ಅಂದ್ರೆ, ಸಿನಿಮಾ ಬಿಡುಗಡೆಯಾಗಿ ಮೂರು ತಿಂಗಳಾದರೂ ಬಾಕ್ಸಾಫೀಸ್‌ನಲ್ಲಿ ಅದರ ಸದ್ದು ನಿಂತಿರಲಿಲ್ಲ. ಈ ಸಿನಿಮಾ ಕೇವಲ ಒಂದು ತಿಂಗಳ ಅಂತರದಲ್ಲಿ ಒಟಿಟಿಗೆ ಲಗ್ಗೆ ಇಟ್ಟಿತ್ತು. ಆದರೂ, ಥಿಯೇಟರ್‌ನಲ್ಲಿ ಜಗ್ಗದೇ ನಿಂತಿತ್ತು. ಇದೇ ಕಾರಣಕ್ಕೆ 'ಪುಷ್ಪ 2' ಸಿನಿಮಾಗೆ ಬೇಡಿಕೆ ಹೆಚ್ಚಿದೆಯಂತೆ. ಹೆಸರಾಂತ ವಿತರಣಾ ಕಂಪನಿಯೊಂದು 400 ಕೋಟಿ ಆಫರ್ ಮಾಡಿದೆಯಂತೆ.

ಅಲ್ಲು ಅರ್ಜುನ್ 'ಪುಷ್ಪ 2'ಗೆ ಬಿಗ್ ಆಫರ್
'ಪುಷ್ಪ 2' ಕಲೆಕ್ಷನ್ ನೋಡಿ ಬಾಲಿವುಡ್ ಮಂದಿಗೆ ಕಂಗಾಲಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಲು ಅರ್ಜುನ್ ನೇಮ್ ಹಾಗೂ ಫೇಮ್ ಅರಿತಿರುವ ವಿತರಕರು 'ಪುಷ್ಪ 2' ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರಂತೆ. ದೊಡ್ಡ ವಿತರಣಾ ಸಂಸ್ಥೆಯೊಂದು 'ಪುಷ್ಪ 2'ಗೆ ಬರೋಬ್ಬರಿ 400 ಕೋಟಿ ಡೀಲ್ ಮಾಡಿದ್ಯಂತೆ. ಆದರೆ, 'ಪುಷ್ಪ 2' ಸಿನಿಮಾ ನಿರ್ಮಾಣ ಮಾಡುತ್ತಿರುವ ಮೈತ್ರಿ ಮೂವಿ ಮೇಕರ್ಸ್ ಮಾತ್ರ ಇಷ್ಟು ದೊಡ್ಡ ಡೀಲ್ ಅನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ ಎನ್ನುತ್ತಿದೆ ಟಾಲಿವುಡ್.

400 ಕೋಟಿ ಡೀಲ್ ಲೆಕ್ಕಚಾರವೇನು?
'ಪುಷ್ಪ' ಎಲ್ಲಾ ಭಾಷೆಯಲ್ಲೂ ಭರ್ಜರಿ ಬ್ಯುಸಿನೆಸ್ ಮಾಡಿತ್ತು. ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಭರ್ಜರಿ ಗಳಿಕೆ ಮಾಡಿದೆ. ಈ ಕಾರಣಕ್ಕೆ ಐದೂ ಭಾಷೆಯ ವಿತರಣೆ ಹಕ್ಕನ್ನು 400 ಕೋಟಿಗೆ ಖರೀದಿ ಮಾಡಲು ಸಂಸ್ಥೆಯೊಂದು ಮುಂದಾಗಿತ್ತು ಎನ್ನಲಾಗಿದೆ. ಆದರೆ, ಮೊದಲ ಭಾಗವೇ 350 ಕೋಟಿ ಗಳಿಕೆ ಕಂಡಿದ್ದು, ನಿರ್ಮಾಪಕರು 400 ಕೋಟಿಗೆ ಮನಸ್ಸು ಮಾಡಿಲ್ಲ ಅನ್ನೋದು ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ.

ಒಟಿಟಿ, ಸ್ಯಾಟಲೈಟ್ ಲೆಕ್ಕಕ್ಕಿಲ್ಲ
ಅಂದಹಾಗೆ, 'ಪುಷ್ಪ 2' ಡೀಲ್‌ಗೆ ಕೂತಿದ್ದು, ಕೇವಲ ವಿತರಣೆ ಹಕ್ಕಿಗಾಗಿ ಎಂದು ಟಾಲಿವುಡ್‌ನಲ್ಲಿ ಸುದ್ದಿಯಾಗಿದೆ. ಇನ್ನೂ, ಆಡಿಯೋ, ಟಿವಿ ಹಾಗೂ ಒಟಿಟಿ ಹಕ್ಕುಗಳ ಬಗ್ಗೆ ಚರ್ಚೆಯಾಗಿಲ್ಲ. ಈ ಎಲ್ಲಾ ಹಕ್ಕುಗಳು ಅಂದಾಜು 200 ರಿಂದ 250 ಕೋಟಿಗೆ ಡೀಲ್ ಆಗಬಹುದು ಎಂದು ಅಂದಾಜಿಸಲಾಗಿದೆ. 400 ಕೋಟಿ ಡೀಲ್‌ಗೆ ಒಪ್ಪಿಕೊಂಡಿದ್ದರೂ, ಎಲ್ಲಾ ಡೀಲ್‌ಗಳು ಸೇರಿ 'ಪುಷ್ಪ 2' ಕಮ್ಮಿ ಅಂದರೂ 650 ಕೋಟಿ ಡೀಲ್ ಮಾಡುತ್ತಿತ್ತು. ಆದರೆ, ನಿರ್ಮಾಪಕರು ಈ ಡೀಲ್ ತಿರಸ್ಕರಿಸಿದ್ದರಿಂದ ದೊಡ್ಡ ಮೊತ್ತದ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ.

'ಪುಷ್ಪ 2' ಮೇಲೆ ಭಾರಿ ನಿರೀಕ್ಷೆ
'ಪುಷ್ಪ: ದಿ ರೈಸ್' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಅಚ್ಚರಿಯೆಂಬಂತೆ 100 ಕೋಟಿ ಗಳಿಕೆ ಕಂಡಿತ್ತು. 'ಪುಷ್ಪ 2' ಇನ್ನೂ ದೊಡ್ಡ ಮಟ್ಟದ ಕಲೆಕ್ಷನ್ ಮಾಡಲಿದೆ ಎನ್ನಲಾಗಿದೆ. ಹೀಗಾಗಿಯೇ 400 ಕೋಟಿ ಆಫರ್ ಅನ್ನು 'ಪುಷ್ಪ' ನಿರ್ಮಾಪಕರು ತಿರಸ್ಕರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಬಾಲಿವುಡ್ ಬಾಕ್ಸಾಫೀಸ್ ಮತ್ತಷ್ಟು ಕೊಳ್ಳೆಹೊಡೆಯಲಿದೆ ಎಂಬ ಆತ್ಮವಿಶ್ವಾಸದಲ್ಲಿಯೇ ಈ ಆಫರ್ ಅನ್ನು ತಿರಸ್ಕರಿಸಲಾಗಿದೆ ಎನ್ನಲಾಗಿದೆ.


Click it and Unblock the Notifications











