'ಘಾಟಿ' ಸಿನಿಮಾ ಪ್ರಚಾರ ಮಾಡುತ್ತಿಲ್ಲ ಅನುಷ್ಕಾ ಶೆಟ್ಟಿ; ಇನ್ನೂ ಸರಿ ಹೋಗಿಲ್ವಾ ಆರೋಗ್ಯ ಸಮಸ್ಯೆ?
ದಕ್ಷಿಣ ಭಾರತದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಬಹಳ ದಿನಗಳ ಬಳಿಕ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಬಾಹುಬಲಿ' ಬಳಿಕ ಅನುಷ್ಕಾ ಶೆಟ್ಟಿ ಸಿನಿಮಾ ಮಾಡುವ ವೇಗವನ್ನು ಕಡಿಮೆ ಮಾಡಿದ್ದರು. ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟ ಬಳಿಕವೂ ಅನುಷ್ಕಾ ಶೆಟ್ಟಿ ಯಾಕೆ ಕಾಣಿಸಿಕೊಳ್ಳುತ್ತಿಲ್ಲ ಅನ್ನೋದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಆಗೊಂದು ಈಗೊಂದು ಸಿನಿಮಾದಲ್ಲಿ ನಟಿಸಿದರೂ, ಅದು ಅವರ ಅಭಿಮಾನಿಗಳಿಗೆ ತೃಪ್ತಿಕೊಟ್ಟಿಲ್ಲ.
ಆದ್ರೀಗ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳನ್ನು ಮುಗಿಸಿದ್ದಾರೆ. ಅದರಲ್ಲೊಂದು ತೆಲುಗು ಸಿನಿಮಾ, ಇನ್ನೊಂದು ಮಲಯಾಳಂ ಸಿನಿಮಾ. ಎರಡೂ ಸಿನಿಮಾಗಳ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಅದಕ್ಕೆ ಕಾರಣ ಅನುಷ್ಕಾ ಶೆಟ್ಟಿಯ ಲುಕ್. ಮಾಸ್ ಅವತಾರದಲ್ಲಿ ಹಲವು ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ತೆಲುಗು ಸಿನಿಮಾ 'ಘಾಟಿ'ಯಲ್ಲಿ ಸ್ವೀಟಿ ಸ್ವೀಟ್ ಅಂತ ಅನಿಸೋದಿಲ್ಲ. ಆ ಮಟ್ಟಿಗೆ ಮಾಸ್ ಆಗಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ.

ಇನ್ನು ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ, ಅನುಷ್ಕಾ ಶೆಟ್ಟಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾ ತಂಡ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ, ಅವರೊಂದಿಗೆ ಅನುಷ್ಕಾ ಬರಲಿಲ್ಲ. ಹೀಗಾಗಿ ಟಾಲಿವುಡ್‌ನಲ್ಲಿ ಮತ್ತೆ ಊಹಾ-ಪೋಹಾಗಳು ಹುಟ್ಟಿಕೊಂಡಿವೆ. ಅನುಷ್ಕಾ ಶೆಟ್ಟಿ ತನ್ನ ಸಿನಿಮಾವನ್ನು ಯಾಕೆ ಪ್ರಚಾರ ಮಾಡುತ್ತಿಲ್ಲ? ಅನುಷ್ಕಾ ಶೆಟ್ಟಿಗೆ ಏನಾದರೂ ಸಮಸ್ಯೆ ಆಗಿದೆಯೇ? ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ತೆಲುಗು ಮಾಧ್ಯಮಗಳು ಕೂಡ ಅನುಷ್ಕಾ ಆರೋಗ್ಯ ಸಮಸ್ಯೆ ಬಗ್ಗೆ ಪ್ರಶ್ನೆ ಎತ್ತಿವೆ.
'ಘಾಟಿ' ಪ್ರಚಾರಕ್ಕೆ ಅನುಷ್ಕಾ ಅನುಪಸ್ಥಿತಿ
ಇತ್ತೀಚೆಗೆ ಜನಪ್ರಿಯ ನಟಿಯರು ಪ್ರಚಾರದಲ್ಲಿ ಭಾಗಿಯಾಗಲ್ಲ. ಅದರಲ್ಲಿ ಸೌತ್ ಸೂಪರ್‌ಸ್ಟಾರ್ ನಯನತಾರಾ ಕೂಡ ಒಬ್ಬರು. ಈಗ ಅನುಷ್ಕಾ ಶೆಟ್ಟಿ ಕೂಡ 'ಘಾಟಿ' ಪ್ರಚಾರದಲ್ಲಿ ಭಾಗಿಯಾಗುತ್ತಿಲ್ಲ. ಚಿತ್ರತಂಡ ಕೂಡ ಯಾವುದೇ ಸಮಸ್ಯೆ ಇಲ್ಲ. ಯಾಕಂದ್ರೆ, ಈ ಪ್ರಾಜೆಕ್ಟ್ ಆರಂಭಕ್ಕೂ ಮುನ್ನವೇ ಅನುಷ್ಕಾ ಶೆಟ್ಟಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದರಂತೆ. ಹೀಗಾಗಿ ಸಿನಿಮಾ ತಂಡಕ್ಕೂ ಯಾವುದೇ ತಕರಾರು ಇಲ್ಲ. ಅದೇನೋ ಸರಿ ತಮ್ಮದೇ ಸಿನಿಮಾವನ್ನು ಯಾಕೆ ಪ್ರಚಾರ ಮಾಡುತ್ತಿಲ್ಲ?

ಆರೋಗ್ಯ ಸಮಸ್ಯೆನಾ?
ಅನುಷ್ಕಾ ಶೆಟ್ಟಿ ಘಾಟಿ ಸಿನಿಮಾದ ಪ್ರಚಾರದಲ್ಲಿ ಕಾಣಿಸಿಕೊಳ್ಳದೇ ಇರೋದು ಹಲವು ಅನುಮಾನಕ್ಕೆ ಕಾರಣವಾಗಿವೆ. ತೆಲುಗಿನ ಕೆಲವು ಮಾಧ್ಯಮಗಳು ಇನ್ನೂ ಆರೋಗ್ಯ ಸಮಸ್ಯೆಯಿಂದ ಅನುಷ್ಕಾ ಶೆಟ್ಟಿ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ಮಾಧ್ಯಮಗಳ ಮುಂದೆ ಬರುವುದಕ್ಕೆ ಹಿಂದೇಟು ಹಾಕುತ್ತಿರಬಹುದೆಂದು ವರದಿ ಮಾಡಿವೆ. ಹೀಗಾಗಿ ಅನುಷ್ಕಾ ಶೆಟ್ಟಿ ಅಭಿಮಾನಿಗಳು ಆತಂಕ ಪಡುವಂತೆ ಆಗಿದೆ.
ಅನುಷ್ಕಾ ಶೆಟ್ಟಿಗೆ ಏನು ಸಮಸ್ಯೆ?
ಗ್ರೇಟ್ ಆಂಧ್ರ ವರದಿ ಮಾಡಿರುವಂತೆ ಅನುಷ್ಕಾ ಶೆಟ್ಟಿ 2017 ರಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರೊಂದಿಗೆ ತೂಕದ ಸಮಸ್ಯೆ ಕೂಡ ಇದೆ. ಈ ಸಮಸ್ಯೆಗಳಿಗೆ ಅನುಷ್ಕಾ ಶೆಟ್ಟಿ ಚಿಕಿತ್ಸೆ ಪಡೆಯುತ್ತಿದ್ದರೂ ಇನ್ನೂ ಸಂಪೂರ್ಣವಾಗಿ ಸರಿ ಹೋಗಿಲ್ಲ. ಅಲ್ಲದೆ ಹಿಂದಿದ್ದ ದೇಹವನ್ನು ಮರಳಿ ಪಡೆಯುವುದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಅನುಷ್ಕಾ ಶೆಟ್ಟಿ 'ಘಾಟಿ' ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗುತ್ತಿಲ್ಲ ಎಂದು ವರದಿ ಮಾಡಲಾಗಿದೆ.
ಕಮ್ ಬ್ಯಾಕ್ ಸಿನಿಮಾ
'ಘಾಟಿ' ಅನುಷ್ಕಾ ಶೆಟ್ಟಿಯ ಕಮ್ ಬ್ಯಾಕ್ ಸಿನಿಮಾ ಆಗಬಹುದೆಂಬ ನಿರೀಕ್ಷೆಯಿದೆ. ಟಾಲಿವುಡ್ ಮಂದಿ ಕೂಡ ಇದನ್ನೇ ಎದುರು ನೋಡುತ್ತಿದ್ದಾರೆ. ಮತ್ತೆ ಡಿ ಗ್ಲಾಮರ್ ರೋಲ್‌ನಲ್ಲಿ ಅನುಷ್ಕಾ ಶೆಟ್ಟಿಯ ಪವರ್‌ಫುಲ್ ಪರ್ಫಾಮೆನ್ಸ್ ಅನ್ನು ಈ ಸಿನಿಮಾದಲ್ಲಿ ನೋಡಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದು ನಿಜ ಆಗುತ್ತಾ ಅನ್ನೋದು ಸೆಪ್ಟೆಂಬರ್ 5ರಂದು ಗೊತ್ತಾಗಲಿದೆ.


Click it and Unblock the Notifications











