ತಮಿಳಿಗೆ ರೀಮೇಕ್ ಆಗಲಿದೆಯೇ ಕನ್ನಡದ 'ಬೀರ್ ಬಲ್'?: ಸ್ಟಾರ್ ನಟ ನಾಯಕ?
'ಟೋಪಿವಾಲಾ' ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಎಂಜಿ ಶ್ರೀನಿವಾಸ್ (ಶ್ರೀನಿ) ಬಳಿಕ ತಾವೇ ಅಖಾಡಕ್ಕಿಳಿದು ನಟರಾಗಿಯೂ ಹೆಸರು ಮಾಡಿದವರು. ಅವರ ನಿರ್ದೇಶನದ 'ಬೀರ್ ಬಲ್ ಟ್ರೈಲಜಿ'ಯ ಮೊದಲ ಭಾಗ ಚಿತ್ರಮಂದಿರಗಳಲ್ಲಿ ಗೆಲ್ಲದಿದ್ದರೂ, ಒಟಿಟಿಯಲ್ಲಿ ಭರ್ಜರಿ ಯಶಸ್ಸು ಕಂಡಿದೆ.
ಚಿತ್ರದ ಆರಂಭದಲ್ಲಿಯೇ ಇದು ಮೂರು ಭಾಗಗಳನ್ನು ಹೊಂದಿರುವ ಚಿತ್ರ ಎಂದು ಶ್ರೀನಿ ತಿಳಿಸಿದ್ದರು. ಅದರಂತೆ ಉಳಿದ ಎರಡು ಭಾಗಗಳ ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆಸಿರುವುದಾಗಿಯೂ ಅವರು ಹೇಳಿದ್ದಾರೆ. ಎರಡನೆಯ ಭಾಗ 'ಅವ್ರನ್ ಬಿಟ್, ಇವ್ರನ್ ಬಿಟ್ ಅವರ್ಯಾರು?'ಕ್ಕೆ ತಯಾರಿ ಶುರುಮಾಡಿದ್ದಾರೆ. 'ಬೀರ್‌ಬಲ್' ಕನ್ನಡ ಮಾತ್ರವಲ್ಲದೆ ಪರಭಾಷೆಯ ಸಿನಿಮಾ ಪ್ರೇಮಿಗಳಿಗೂ ಇಷ್ಟವಾಗಿದೆ. ಬೀರ್ ಬಲ್ ಕುರಿತಾದ ವಿಮರ್ಶೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಅದು ತಮಿಳಿಗೂ ರೀಮೇಕ್ ಆಗಲಿದೆ ಎಂಬ ಸುದ್ದಿ ಬಂದಿದೆ. ಮುಂದೆ ಓದಿ...

ತಮಿಳಿಗೆ ರೀಮೇಕ್
ಕನ್ನಡದ ಅತ್ಯುತ್ತಮ ಕ್ರೈಂ ಥ್ರಿಲ್ಲರ್ ಸಿನಿಮಾಗಳಲ್ಲಿ 'ಬೀರ್ ಬಲ್' ಎಂದು ಅನೇಕರು ಶ್ಲಾಘಿಸಿದ್ದಾರೆ. ಈ ಚಿತ್ರ ನಮ್ಮ ಭಾಷೆಗೂ ಬರಬೇಕು ಎಂದು ಇತರೆ ಭಾಷೆಯ ಸಿನಿಮಾ ಅಭಿಮಾನಿಗಳು ಹೇಳುತ್ತಿದ್ದಾರೆ. ತಮಿಳಿಗರೂ ಸಿನಿಮಾ ಇಷ್ಟಪಟ್ಟು ಮೆಚ್ಚುಗೆ ಮಾತನಾಡುತ್ತಿದ್ದಾರೆ. ಈ ನಡುವೆ 'ಬೀರ್ ಬಲ್' ತಮಿಳಿಗೂ ರೀಮೇಕ್ ಆಗಲಿದೆ ಎಂಬ ಸುದ್ದಿ ಬಂದಿದೆ.

ಶ್ರೀನಿ ಅವರದೇ ನಿರ್ದೇಶನ
'ಬೀರ್‌ಬಲ್'ನಲ್ಲಿ ಮುಖ್ಯಪಾತ್ರದಲ್ಲಿ ನಟಿಸಿರುವ ಶ್ರೀನಿ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದರು. ಅವರ ನಿರ್ದೇಶನದ ತಂತ್ರಗಳು ಪ್ರಶಂಸೆಗೆ ಒಳಗಾಗಿದೆ. ಹೀಗಾಗಿ ತಮಿಳಿನಲ್ಲಿಯೂ ಶ್ರೀನಿ ಅವರೇ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ.

ವಿಜಯ್ ಸೇತುಪತಿ ನಾಯಕ?
ಹಾಗಾದರೆ ನಾಯಕ ಯಾರು? ಮೂಲಗಳ ಪ್ರಕಾರ ಸ್ಟಾರ್ ನಟರೊಬ್ಬರು ಶ್ರೀನಿ ನಿರ್ವಹಿಸಿದ್ದ ಪಾತ್ರವನ್ನು ನಿಭಾಯಿಸಲಿದ್ದಾರೆ. ಈ ಪಾತ್ರಕ್ಕೆ ವಿಜಯ್ ಸೇತುಪತಿ ಹೆಸರು ಕೇಳಿಬಂದಿದೆ. ಇದರ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಇದು ಸತ್ಯವಾದರೆ ಶ್ರೀನಿ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್ ಯಾವ ರೀತಿ ಕೆಲಸ ಮಾಡಲಿದೆ ಎನ್ನುವುದು ಕುತೂಹಲ ಹೆಚ್ಚಿಸಲಿದೆ.

ಹಿಂದಿಯಲ್ಲಿ ಖುರಾನಾ?
ಬೀರ್ ಬಲ್ ಚಿತ್ರದ ಟ್ರೇಲರ್ ನೋಡಿಯೇ ಇಷ್ಟಪಟ್ಟಿದ್ದ ಹಿಂದಿಯ ಖ್ಯಾತ ನಟ ಆಯುಷ್ಮಾನ್ ಖುರಾನಾ ಈ ಚಿತ್ರವನ್ನು ಬಾಲಿವುಡ್‌ಗೆ ರೀಮೇಕ್ ಮಾಡಲು ಬಯಸಿದ್ದಾರೆ ಎನ್ನಲಾಗಿತ್ತು. ಸದ್ಯ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿಲ್ಲವಾದ್ದರಿಂದ ಹಿಂದಿಯ ರೀಮೇಕ್ ತಡವಾಗಬಹುದು.


Click it and Unblock the Notifications











