ಅಬ್ಬಬ್ಬಾ ಲಾಟರಿ.. ನಟಿ ತ್ರಿಷಾಗೆ ಸಿಕ್ತು 12 ಕೋಟಿ ರೂ. ಬಂಪರ್ ಆಫರ್?
ಕಳೆದ ಕೆಲ ದಿನಗಳಿಂದ ತಮಿಳು ನಟಿ ತ್ರಿಷಾ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಚೆನ್ನೈ ಚೆಲುವೆ ರಾಜಕೀಯರಂಗ ಪ್ರವೇಶಿಸುತ್ತಾರೆ ಎನ್ನಲಾಗ್ತಿದೆ. ಆದರೆ ಸದ್ಯಕ್ಕೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೂರ್ಯ ಜೊತೆ ನಟಿಸಿರುವ 'ಕರುಪ್ಪು' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ತಮಿಳುನಾಡು ಸಿಎಂ ವಿಜಯ್ ಜೊತೆ ತ್ರಿಷಾ ಕೂಡ ರಾಜಕೀಯರಂಗಕ್ಕೆ ಬರ್ತಾತೆ. ತಿರುಚ್ಚಿ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಚುನಾವಣೆ ಫಲಿತಾಂಶದ ದಿನ ವಿಜಯ್ ಮನೆಗೆ ಭೇಟಿ ನೀಡಿ ತ್ರಿಷಾ ಅಭಿನಂದನೆ ತಿಳಿಸಿದ್ದರು. ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿ ಆಗಿ ಮಿಂಚಿದ್ದರು. ಹಾಗಾಗಿ ಏನು ಬೇಕಾದರೂ ಆಗಬಹುದು ಎನ್ನುವ ಚರ್ಚೆ ಶುರುವಾಗಿದೆ. ಇದೆಲ್ಲದರ ನಡುವೆ ತ್ರಿಷಾ 10-12 ಕೋಟಿ ರೂ. ಬಂಪರ್ ಆಫರ್ ಬಂದಿದೆ ಎನ್ನಲಾಗ್ತಿದೆ.

ತ್ರಿಷಾ ಚಿತ್ರರಂಗಕ್ಕೆ ಬಂದು 25 ವರ್ಷ ಕಳೆದಿದೆ. ಇವತ್ತಿಗೂ ನಾಯಕಿಯಾಗಿಯೇ ಮಿಂಚುತ್ತಿದ್ದಾರೆ. ವಯಸ್ಸು 40 ದಾಟಿದ್ರು, ಆಕೆಯ ಚೆಲುವು 25ರ ನಟಿಯರನ್ನು ನಾಚಿಸುವಂತಿದೆ. ಇನ್ನು ಸೀನಿಯರ್ ಹೀರೊಗಳ ಸಿನಿಮಾಗಳಿಗೆ ಮೊದಲ ಆಯ್ಕೆ ಎನ್ನುವಂತಾಗಿದೆ. ರಜನಿಕಾಂತ್ ಹಾಗೂ ಕಮಲ್ ಹಾಸನ್ ನಟನೆಯ ಮಲ್ಟಿಸ್ಟಾರರ್ ಚಿತ್ರಕ್ಕೆ ತ್ರಿಷಾ ನಾಯಕಿಯಾಗುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.
ನೆಲ್ಸನ್ ನಿರ್ದೇಶನದ ಇನ್ನು ಹೆಸರಿಡದ ಈ ಸಿನಿಮಾ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ರೆಡ್ ಜೈಂಟ್ ಸಂಸ್ಥೆ ಈ ಬಹುಕೋಟಿ ವೆಚ್ಚದ ಚಿತ್ರವನ್ನು ನಿರ್ಮಾಣ ಮಾಡಲಿದೆ. ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ. ರಜನಿಕಾಂತ್ ಹಾಗೂ ಕಮಲ್ ಎದುರು ತ್ರಿಷಾ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ವಿಚಾರ ಕುತೂಹಲ ಮೂಡಿಸಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಚಿತ್ರಕ್ಕಾಗಿ 10-12 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಕಳೆದ ವರ್ಷ ತ್ರಿಷಾ ನಟಿಸಿದ 4 ಸಿನಿಮಾಗಳು ತೆರೆಗೆ ಬಂದಿದ್ದವು. 'ವಿಡಾಮುಯರ್ಚಿ' ಹಾಗೂ 'ಗುಡ್ ಬ್ಯಾಡ್ ಅಗ್ಲಿ' ಚಿತ್ರಗಳಲ್ಲಿ ಅಜಿತ್ ಜೋಡಿಯಾಗಿ ಮಿಂಚಿದ್ದರು. ಆದರೆ ಕಮಲ್ ಹಾಸನ್ ಜೊತೆ ನಟಿಸಿದ 'ಥಗ್ ಲೈಫ್' ಸಿನಿಮಾ ಹೀನಾಯವಾಗಿ ಸೋತಿತ್ತು. ಮಣಿರತ್ನಂ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ನಿರಾಸೆ ಮೂಡಿಸಿತ್ತು. ತೆಲುಗಿನ 'ವಿಶ್ವಂಭರ' ಚಿತ್ರದಲ್ಲಿ ಚಿರಂಜೀವಿ ಜೋಡಿಯಾಗಿ ತ್ರಿಷಾ ನಟಿಸುತ್ತಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ 'ರಾಮ್' ಚಿತ್ರಕ್ಕೂ ನಾಯಕಿಯಾಗಿದ್ದಾರೆ.
ದಶಕಗಳ ಬಳಿಕ ಕಮಲ್ ಹಾಸನ್ ಹಾಗೂ ರಜನಿಕಾಂತ್ ಒಟ್ಟಿಗೆ ನಟಿಸುತ್ತಿದ್ದಾರೆ. ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಸ್ಟಾರ್ ನಟರಿಬ್ಬರೂ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ. ಹಾಗಾಗಿ ಬಜೆಟ್ ಹೆಚ್ಚಲಿದೆ. ಅದಕ್ಕೆ ತಕ್ಕಂತೆ ನಾಯಕಿಯಾಗಿ ನಟಿಸುವ ತ್ರಿಷಾಗೂ ಒಳ್ಳೆ ಸಂಭಾವನೆ ಸಿಗುತ್ತದೆ. ಆಗಸ್ಟ್‌ನಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗುತ್ತದೆ ಎಂದು ರಜನಿಕಾಂತ್ ಹೇಳಿದ್ದರು. ಬಳಿಕ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ರಜನಿಕಾಂತ್ ಹಾಗೂ ಕಮಲ್ ಸಿನಿಮಾ ಭವಿಷ್ಯದ ಬಗ್ಗೆ ಅನುಮಾನ ಮೂಡಿದೆ.
ಚುನಾವಣೆಯಲ್ಲಿ ಡಿಎಂಕೆ ಪಕ್ಷ ಹೀನಾಯವಾಗಿ ಸೋತಿದೆ. ಸ್ಟಾಲಿನ್ ತಮ್ಮದೇ ಕ್ಷೇತ್ರದಲ್ಲಿ ಸೋತಿದ್ದಾರೆ. ಮಗ ಉದಯನಿಧಿ ಸ್ಟಾಲಿನ್ ಗೆದ್ದು ವಿರೋಧಪಕ್ಷದ ನಾಯಕನ ಸ್ಥಾನದಲ್ಲಿ ಕೂತಿದ್ದಾರೆ. ರೆಡ್ ಜೈಂಟ್ ಸಂಸ್ಥೆ ಸ್ಥಾಪಕ ಉದಯನಿಧಿ ಸ್ಟಾಲಿನ್. ಸದ್ಯ ತಮ್ಮ ಪಕ್ಷ ಅಧಿಕಾರ ಕಳೆದುಕೊಂಡಿರುವುದರಿಂದ ಇಷ್ಟು ದೊಡ್ಡ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸುವ ಧೈರ್ಯ ಮಾಡ್ತಾರಾ ಎನ್ನುವ ಗುಸುಗುಸು ಶುರುವಾಗಿದೆ. ಸಾಕಷ್ಟು ದೊಡ್ಡ ಸಿನಿಮಾಗಳನ್ನು ಸಂಸ್ಥೆ ನಿರ್ಮಿಸಿದೆ, ವಿತರಣೆ ಮಾಡಿದೆ. ವಿಜಯ್ ಜೊತೆ ಶೀತಲ ಸಮರ ನಡೆಯುತ್ತಿರುವುದರಿಂದ ತಮ್ಮ ಚಿತ್ರಕ್ಕೆ ತ್ರಿಷಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡುತ್ತಾರಾ ಎನ್ನುವ ಗೊಂದಲ ಮೂಡಿದೆ.


Click it and Unblock the Notifications