ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ ದರ್ಶನ್ ನಟಿಸೋ 2 ಸಿನಿಮಾಗಳು ಇವೇನೆ? ಗ್ರೀನ್ ಸಿಗ್ನಲ್ ಕೊಟ್ಟಿದ್ಯಾರಿಗೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ಕಳೆದ ವರ್ಷ ರಿಲೀಸ್ ಆಗಿತ್ತು. ಸದ್ಯ 25 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ದರ್ಶನ್ ಅಭಿಮಾನಿಗಳು ಕೂಡ 25 ದಿನಗಳನ್ನು ಪೂರೈಸಿದ ಖುಷಿಯಲ್ಲಿದ್ದಾರೆ. ಆದರೆ, ಈ ವೇಳೆ ಅವರ ನೆಚ್ಚಿನ ನಟ ಜೊತೆಯಲ್ಲಿ ಇದ್ದಿದ್ದರೆ ಸಂಭ್ರಮ ಇನ್ನೂ ಜೋರಾಗಿ ಇರುತ್ತಿತ್ತು. ಆದರೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 2ನೇ ಆರೋಪಿಯಾಗಿ ದರ್ಶನ್ ಜೈಲಿನಲ್ಲಿದ್ದು, ಹೊರ ಬರುವುದನ್ನೇ ಎದುರು ನೋಡುತ್ತಿದ್ದಾರೆ.
'ಡೆವಿಲ್' ರಿಲೀಸ್ ಆದ ಮೊದಲ ವಾರ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಆದರೆ, ಎರಡನೇ ವಾರದಿಂದ ಸಿನಿಮಾ ಕಲೆಕ್ಷನ್‌ನಲ್ಲಿ ಡ್ರಾಪ್ ಕಾಣಿಸಿಕೊಂಡಿತ್ತು. 'ಡೆವಿಲ್' ಸಿನಿಮಾ ರಿಲೀಸ್‌ಗೂ ಒಂದು ವಾರ ಮುನ್ನ 'ಧುರಂಧರ್' ರಿಲೀಸ್ ಆಗಿತ್ತು. ಇದು ಕರ್ನಾಟಕದಲ್ಲೂ ಉತ್ತಮ ಕಲೆಕ್ಷನ್ ಮಾಡುವುದಕ್ಕೆ ಶುರು ಮಾಡಿತ್ತು. ಇನ್ನು 'ಡೆವಿಲ್' ತೆರೆಕಂಡ ವಾರವೇ ತೆಲುಗಿನ ಬಾಲಕೃಷ್ಣ ನಟನೆಯ 'ಅಖಂಡ 2' ರಿಲೀಸ್ ಆಯ್ತು. ಹೀಗಾಗಿ ಕರ್ನಾಟಕದಲ್ಲಿಯೇ ಎರಡನೇ ವಾರದಿಂದ ಪೈಪೋಟಿ ಮಾಡಬೇಕಾಗಿತ್ತು.

ದರ್ಶನ್ ಜೈಲಿನಲ್ಲಿ ಇದ್ದರೂ ಸಿನಿಮಾ ಅವರೇಜ್ ಬ್ಯುಸಿನೆಸ್ ಮಾಡುವಲ್ಲಿ ಯಶಸ್ವಿಯಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ, 'ಡೆವಿಲ್' ಸಿನಿಮಾ 25 ದಿನಗಳಲ್ಲಿ ₹30 ಕೋಟಿ ಆಸು-ಪಾಸಿನಲ್ಲಿ ಕಲೆಕ್ಷನ್ ಆಗಿದೆಂದು ವರದಿ ಮಾಡಿದೆ. ಈಗ 'ಡೆವಿಲ್' ಮುಗಿದ ಅಧ್ಯಾಯ. ಆದರೆ, ದರ್ಶನ್ ಜೈಲಿನಿಂದ ರಿಲೀಸ್ ಆದ ಬಳಿಕ ಕೈಗೆತ್ತಿಕೊಳ್ಳುವ ಎರಡು ಸಿನಿಮಾಗಳ್ಯಾವು ಅನ್ನೋದು ಗೊತ್ತೇ?
ಸ್ಯಾಂಡಲ್‌ವುಡ್‌ನಲ್ಲಿ 'ಡೆವಿಲ್' ದರ್ಶನ್ ನಟಿಸುವ ಸಿನಿಮಾಗಳ ಬಗ್ಗೆ ಚರ್ಚೆಯಾಗುತ್ತಿದೆ. ದರ್ಶನ್ ಜೈಲಿನಲ್ಲಿ ಇದ್ದರೂ ಅವರ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ಕೆಲವು ನಿರ್ಮಾಪಕರು ದರ್ಶನ್ ಹೊರ ಬರುವುದನ್ನೇ ಎದುರು ನೋಡುತ್ತಿದ್ದಾರೆ. ಜಾಮೀನು ಸಿಗುತ್ತಿದ್ದಂತೆ ದರ್ಶನ್ ಜೊತೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ಆ ಇಬ್ಬರು ನಿರ್ಮಾಪಕರ ಬಗ್ಗೆ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ.
ಅಂದ್ಹಾಗೆ ದರ್ಶನ್‌ಗೆ ಇನ್ನು ಆರೇಳು ತಿಂಗಳಲ್ಲಿ ಜಾಮೀನು ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಸದ್ಯ ಟ್ರಯಲ್ ನಡೆಯುತ್ತಿದ್ದು, ಒಂದು ವೇಳೆ ರೇಣುಕಾಸ್ವಾಮಿ ಹತ್ಯೆಯಲ್ಲಿ ದರ್ಶನ್ ಭಾಗಿಯಾಗಿಲ್ಲ ಎಂದು ಸಾಬೀತಾದರೆ ಜಾಮೀನು ಸಿಗುತ್ತೆ. ಇದೇ ನಿರೀಕ್ಷೆಯಲ್ಲಿ ಅವರ ಆಪ್ತರು ಹಾಗೂ ಕುಟುಂಬ ಇದೆ. ಈ ಬೆನ್ನಲ್ಲೇ ದರ್ಶನ್ ಹೊರ ಬಂದ್ಮೇಲೆ ಯಾವ ಸಿನಿಮಾ ಮಾಡಬಹುದೆಂಬ ಚರ್ಚೆ ಕೂಡ ನಡೆಯುತ್ತಿದೆ.

ಸದ್ಯಕ್ಕೆ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ದರ್ಶನ್ ಎರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಮೊದಲು ಶೈಲಜಾ ನಾಗ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ನಟಿಸುತ್ತಾರೆ. ಇದರ ಜೊತೆಗೆ ತೆಲುಗು ನಿರ್ಮಾಪಕರೊಬ್ಬರು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಎರಡೂ ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ನಟಿಸುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇನ್ನು ಜೋಗಿ ಪ್ರೇಮ್ ನಿರ್ದೇಶಿಸ ಬೇಕಿದ್ದ ಸಿನಿಮಾ ಪೋಸ್ಟ್‌ಪೋನ್ ಆಗಿದೆ ಅನ್ನೋ ಮಾತು ಕೇಳಿಬರುತ್ತಿವೆ. ಸುದೀಪ್‌ಗೆ ಸಿನಿಮಾ ಮಾಡುವ ಬಗ್ಗೆ ಪ್ರೇಮ್ ವೇದಿಕೆ ಅನೌನ್ಸ್ ಮಾಡುತ್ತಿದ್ದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಸಿನಿಮಾ ಮುಗಿಸಿ ಬನ್ನಿ ಎಂದು ಹೇಳಿದ್ದಾರಂತೆ. ಸುದೀಪ್ ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಆದ್ಮೇಲೆ ಮಾಡೋಣ ಎಂದು ಸಂದೇಶ ರವಾನಿಸಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಇದು ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿ. ಯಾರೂ ಅಧಿಕೃತವಾಗಿ ಮಾಹಿತಿಯನ್ನು ಎಲ್ಲಿಯೂ ಹಂಚಿಕೊಂಡಿಲ್ಲ.


Click it and Unblock the Notifications











