Yash-Toxic: 'ಟಾಕ್ಸಿಕ್'ಗಾಗಿ ಮುಗಿಬಿದ್ದ ಅಮೆಜಾನ್ ಪ್ರೈಂ-ಜೀ ಟಿವಿ: ಯಶ್ ಬೇಡಿಕೆ ಇಟ್ಟಿದ್ದೆಷ್ಟು?
ರಾಕಿಂಗ್ ಸ್ಟಾರ್ ಯಶ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಟಾಕ್ಸಿಕ್' ಸೌಂಡ್ ಮಾಡುವುದಕ್ಕೆ ಶುರು ಮಾಡಿದೆ. ಸಿನಿಮಾ ರಿಲೀಸ್‌ಗೆ ಹೆಚ್ಚು-ಕಡಿಮೆ ಇನ್ನೊಂದು ತಿಂಗಳು ಇರುವಂತೆಯೇ ನಿರ್ಮಾಣ ಸಂಸ್ಥೆಗಳು ಬ್ಯುಸಿನೆಸ್‌ಗೆ ಕೂತಿವೆ. 'ಟಾಕ್ಸಿಕ್' ಬಹು ಕೋಟಿ ವೆಚ್ಚದ ಸಿನಿಮಾ ಆಗಿದ್ದರಿಂದ ವ್ಯವಹಾರ ಕೂಡ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ.
₹1000 ಕೋಟಿ ಪ್ರೀ-ರಿಲೀಸ್ ಬ್ಯುಸಿನೆಸ್ ಟಾರ್ಗೆಟ್ ಇಟ್ಟುಕೊಂಡಿರುವ 'ಟಾಕ್ಸಿಕ್' ಟೀಮ್ ಈಗಾಗಲೇ ಅದನ್ನು ಸಮೀಪದಲ್ಲಿದೆ ಎನ್ನಲಾಗಿದೆ. ಈಗಾಗಲೇ ಸಿನಿಮಾದ ಬ್ಯುಸಿನೆಸ್ ಬಗ್ಗೆ ಸಂಬಂಧ ಪಟ್ಟವರ ಬಳಿ ಮಾತುಕತೆ ನಡೆಸಲಾಗುತ್ತಿದೆ. 'ಟಾಕ್ಸಿಕ್' ಬೇಡಿಕೆ ಹೆಚ್ಚು ಇರುವುದರಿಂದ ಪ್ರೀ-ರಿಲೀಸ್ ಬ್ಯುಸಿನೆಸ್ ಎಷ್ಟಾಗುತ್ತೆ? ಅನ್ನೋ ಕುತೂಹಲದಲ್ಲಿ ಇಡೀ ಭಾರತೀಯ ಚಿತ್ರರಂಗವಿದೆ.

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಇಂಟ್ರೆಸ್ಟಿಂಗ್ ಸುದ್ದಿಯೊಂದು ಓಡಾಡುತ್ತಿದೆ. ಯಶ್ 'ಟಾಕ್ಸಿಕ್' ಖರೀದಿಗೆ ಓಟಿಟಿ ಸಂಸ್ಥೆಗಳು ಹಾಗೂ ಸ್ಯಾಟಲೈಟ್ ಹಕ್ಕುಗಳಿಗಾಗಿ ಟಿವಿ ಸಂಸ್ಥೆಗಳು ಮುಗಿಬಿದ್ದಿವೆ ಅನ್ನೋ ಮಾತು ಕೇಳಿ ಬರುತ್ತಿದೆ. ಇವುಗಳಲ್ಲಿ ಓಟಿಟಿ ಕ್ಷೇತ್ರದಿಂದ ಅಮೆಜಾನ್ ಪ್ರೈಂ ಅತಿ ಹೆಚ್ಚು ಹಣ ನೀಡಲು ಮುಂದೆ ಬಂದಿದೆ. ಇತ್ತ ಜೀ ಟಿವಿ ಇದೇ ಸಾಲಿನಲ್ಲಿ ಇದ್ದು, ಯಶ್ ಇನ್ನೂ ಹೆಚ್ಚಿನ ಬೇಡಿಕೆ ಇಟ್ಟಿದ್ದಾರೆಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.
ಸಿನಿಮಾ ಇಂಡಸ್ಟ್ರಿನೇ ಹಾಗೆ, ಒಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಬಿಗ್ ಬಜೆಟ್ ಸಿನಿಮಾ ರಿಲೀಸ್ ಆಗುತ್ತಿದೆ ಅಂದ್ರೆ, ಅದರ ಬಗ್ಗೆ ನೂರೆಂಟು ಮಾತುಗಳು ಹುಟ್ಟಿಕೊಳ್ಳುತ್ತವೆ. ಇನ್ನು ನಾಲ್ಕು ವರ್ಷಗಳ ಬಳಿಕ ರಿಲೀಸ್ ಆಗುತ್ತಿರುವ ಯಶ್ ಸಿನಿಮಾ ಬಗ್ಗೆ ಲೆಕ್ಕಾಚಾರ ಹಾಕದೆ ಇರುತ್ತಾರಾ? 'ಟಾಕ್ಸಿಕ್' ಸಿನಿಮಾದ ಬ್ಯುಸಿನೆಸ್ ಬಗ್ಗೆನೂ ಸದ್ಯ ಇಂತಹದ್ದೇ ಆಧಾರ ರಹಿತ ಸುದ್ದಿಗಳು ಗಾಂಧಿನಗರದ ಗಲ್ಲಿ ಗಲ್ಲಿಯೊಳಗೆ ಓಡಾಡುತ್ತಿದೆ.
'ಟಾಕ್ಸಿಕ್' ಖರೀದಿಗೆ ದೈತ್ಯ ಓಟಿಟಿ ಸಂಸ್ಥೆಗಳು ಮುಗಿಬಿದ್ದಿವೆ ಎನ್ನಲಾಗುತ್ತಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ಅಂತ ಸಂಸ್ಥೆಗಳು 'ಟಾಕ್ಸಿಕ್' ಖರೀದಿ ಮಾಡುವುದಕ್ಕೆ ಪೈಪೋಟಿ ನಡೆಸುತ್ತಿವೆ. ಈ ಸಂಸ್ಥೆಗಳೊಂದಿಗೆ 'ಟಾಕ್ಸಿಕ್' ತಂಡ ಈಗಾಗಲೇ ಮಾತುಕತೆಯನ್ನು ನಡೆಸುತ್ತಿದೆ. ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ, ಅಮೆಜಾನ್ ಪ್ರೈಂ ಅತೀ ಹೆಚ್ಚು ಹಣ ನೀಡುವುದಕ್ಕೆ ಮುಂದೆ ಬಂದಿದೆ. ಸುಮಾರು ₹180 ಕೋಟಿವರೆಗೂ ಆಫರ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಅದೇ ಇನ್ನೊಂದು ಕಡೆ 'ಟಾಕ್ಸಿಕ್' ಸ್ಯಾಟಲೈಟ್ ರೈಟ್ಸ್ ಖರೀದಿಗೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಹಲವು ಸಂಸ್ಥೆಗಳು ಸ್ಯಾಟಲೈಟ್ ಹಕ್ಕುಗಳನ್ನು ಖರೀದಿ ಮಾಡುವುದಕ್ಕೆ ಮುಗಿಬಿದ್ದಿವೆ. ಅದರಲ್ಲೂ ಜೀ ಟಿವಿ ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಜೀ ಸಂಸ್ಥೆ ಸುಮಾರು ₹72 ಕೋಟಿವರೆಗೂ ಆಫರ್ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಒಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳ ಖರೀದಿಗೆ ಬಂದಿರೋ ಆಫರ್ ಯಶ್‌ಗೆ ಕಡಿಮೆ ಅನಿಸಿದ್ದು, ಮಾತುಕತೆ ನಡೆಸುತ್ತಿದ್ದಾರೆಂಬುದು ಸುದ್ದಿ.
ಮೂಲಗಳ ಪ್ರಕಾರ, 'ಟಾಕ್ಸಿಕ್' ಪ್ರೀ-ರಿಲೀಸ್ ಬ್ಯುಸಿನೆಸ್ ಅನ್ನು ₹1000 ಕೋಟಿ ಇಟ್ಟುಕೊಂಡಿದೆ. ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್‌ನಿಂದ ₹300 ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡುವ ಪ್ಲ್ಯಾನ್ ಇದ್ದು, ಓಟಿಟಿಯಿಂದ ₹180 ಕೋಟಿ ಹಾಗೂ ಟಿವಿ ಹಕ್ಕುಗಳಿಂದ ₹72 ಕೋಟಿ ಸೇರಿದ ₹152 ಕೋಟಿ ಆಗಲಿದೆ. ಹೀಗಾಗಿ ₹50 ಕೋಟಿಗೆ ಮಾತುಕತೆ ನಡೆಯುತ್ತಿದೆ ಎಂಬ ಚರ್ಚೆ ಶುರುವಾಗಿದೆ. ಇದು ಸಿನಿಮಾ ಮಂದಿ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿ. ಅಧಿಕೃತ ಮಾಹಿತಿ ಇನ್ನೂ ಹೊರಬೀಳಬೇಕಿದೆ.


Click it and Unblock the Notifications











