'ಗುಂಟೂರು ಖಾರಂ' ಕೊನೆ ಹೊಸ ಸಿನಿಮಾ ಒಪ್ಪಿಕೊಳ್ತಿಲ್ಲ ಶ್ರೀಲೀಲಾ; ಯಾಕೀ ನಿರ್ಧಾರ?
ಟಾಲಿವುಡ್‌ನಲ್ಲಿ ಕನ್ನಡದ ನಟಿಯರು ದರ್ಬಾರ್ ಜೋರಾಗಿಯೇ ನಡೆಯುತ್ತಿದೆ. ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸದ್ದು ಮಾಡಿದ ಬಳಿಕ ಶ್ರೀಲೀಲಾ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಟಾಲಿವುಡ್‌ನಲ್ಲಿ ಈ ನಟಿಗೆ ಸ್ವಾಗತನೂ ಅದ್ಧೂರಿಯಾಗೇ ಸಿಕ್ಕಿತ್ತು. ಹೀಗಾಗಿ ಈಗ ಶ್ರೀಲೀಲಾ ತೆಲುಗು ಚಿತ್ರರಂಗದ ಬೇಡಿಕೆಯ ನಟಿ.
ತೆಲುಗು ಚಿತ್ರರಂಗದಲ್ಲಿ ಶ್ರೀಲೀಲಾ ಬಿಟ್ಟರೆ, ಬೇರೊಂದು ಹೆಸರು ಕೇಳೋಕೆ ಸಿಗುತ್ತಿಲ್ಲ. ಒಂದು ಸಮಯದಲ್ಲಿ ಶ್ರೀಲೀಲಾ ಏಳು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲೂ 2023 ಶ್ರೀಲೀಲಾ ನಟಿಸಿದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗಿವೆ. ಈಗ ಮಹೇಶ್ ಬಾಬು ಜೊತೆ ನಟಿಸಿದ 'ಗುಂಟೂರು ಖಾರಂ' ರಿಲೀಸ್ ಆಗಿದ್ದು, ಶ್ರೀಲೀಲಾ ನೃತ್ಯಕ್ಕೆ ತೆಲುಗು ಮಂದಿ ಬೋಲ್ಡ್ ಆಗಿದ್ದಾರೆ.

ಕೆಲವು ತಿಂಗಳ ಹಿಂದೆ ಶ್ರೀಲೀಲಾ ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ರಂತೆ. ಅಂದ್ರೆ, ಒಂದೇ ದಿನ ಮೂರು ಸಿನಿಮಾಗಳಿಗೆ ಮೂರು ಶಿಫ್ಟ್‌ಗಳಲ್ಲಿ ನಟನೆ ಮಾಡುತ್ತಿದ್ರು ಅನ್ನೋದು ಸುದ್ದಿಯಾಗಿತ್ತು. ಆದ್ರೀಗ ಶ್ರೀಲೀಲಾ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. 'ಗುಂಟೂರು ಖಾರಂ' ಸಿನಿಮಾ ಬಳಿಕ ಈ ನಟಿ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದೆ ಇರಲು ನಿರ್ಧರಿಸಿದ್ದಾರಂತೆ.
ಹೌದು, ತೆಲುಗು ಮಾಧ್ಯಮಗಳಲ್ಲಿ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ. ಮಹೇಶ್ ಬಾಬು ನಟಿಸಿರುವ 'ಗುಂಟೂರು ಖಾರಂ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಶ್ರೀಲೀಲಾಗೆ ಈ ಸಿನಿಮಾ ಒಳ್ಳೆ ಹೆಸರು ಬಂದಿದೆ. ಅದರಲ್ಲೂ ಶ್ರೀಲೀಲಾ ಎನರ್ಜೆಟಿಕ್ ಡ್ಯಾನ್ಸ್‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಹೀಗಿರುವಾಗ ಹೊಸ ಸಿನಿಮಾ ಯಾಕೆ ಒಪ್ಪಿಕೊಳ್ಳುತ್ತಿಲ್ಲ ಅನ್ನೋ ಪ್ರಶ್ನೆ ಎದ್ದಿದೆ.

ಶ್ರೀಲೀಲಾ ಸಿನಿಮಾದ ಜೊತೆ ಜೊತೆಗೆ ಶಿಕ್ಷಣವನ್ನೂ ಮುಂದುವರೆಸಿದ್ದಾರಂತೆ. ಚಿತ್ರರಂಗಕ್ಕೆ ಕಾಲಿಡುವ ಸಂದರ್ಭದಲ್ಲಿಯೇ ವೈದ್ಯಕೀಯ ಶಿಕ್ಷಣ ಮುಂದುವರೆಸಿದ್ದರು. ಈಗ ಅದರ ಪರೀಕ್ಷೆಗಳು ಇರುವುದರಿಂದ ಶ್ರೀಲೀಲಾ ಸಿನಿಮಾಗೆ ಬ್ರೇಕ್ ಕೊಡಲು ನಿರ್ಧರಿಸಿದ್ದಾರಂತೆ. 'ಗುಂಟೂರು ಖಾರಂ' ಸಿನಿಮಾ ವೇಳೆ ಬಿಡುವು ಸಿಕ್ಕಾಗ ಶ್ರೀಲೀಲಾ ಓದುತ್ತಿದ್ದರು ಅಂತ ಮಹೇಶ್ ಬಾಬು ಸಂದರ್ಶನವೊಂದರಕ್ಕೆ ಹೇಳಿದ್ದರು. ಇದೇ ಕಾರಣಕ್ಕೆ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಅನ್ನೋದು ಸುದ್ದಿ.
ಅಂದ್ಹಾಗೆ, ವಿಜಯ್ ದೇವರಕೊಂಡ ನಟಿಸುತ್ತಿರುವ ಹೊಸ ಸಿನಿಮಾಗೆ ಶ್ರೀಲೀಲಾ ಆಯ್ಕೆ ಆಗಿದ್ದಾರೆ ಅನ್ನೋ ಮಾತಿತ್ತು. ಆದ್ರೀಗ ಆ ಪ್ರಾಜೆಕ್ಟ್ ಬಗ್ಗೆ ಸುದ್ದಿಯಿಲ್ಲ. ಇನ್ನು ಇವರ ಕೈಯಲ್ಲಿ ಪವನ್ ಕಲ್ಯಾಣ್ ನಟಿಸುತ್ತಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾವಿದೆ. ಆದರೆ, ಪವನ್ ಕಲ್ಯಾಣ್ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರೋದ್ರಿಂದ ಆ ಸಿನಿಮಾ ಅಲ್ಲಿಗೆ ನಿಂತಿದೆ.
ಇತ್ತೀಚೆಗೆ ಶ್ರೀಲೀಲಾ 'ಪುಷ್ಪ 2' ಸಿನಿಮಾದ ಒಂದು ಹಾಡಿಗೆ ಹೆಜ್ಜೆ ಹಾಕುವುದಕ್ಕೆ 2 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದರು ಅಂತ ಸುದ್ದಿ ಹಬ್ಬಿತ್ತು. ಆದರೆ, ಅದೆಲ್ಲ ಸುಳ್ಳು ಅಂತ ಶ್ರೀಲೀಲಾ ಆಪ್ತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾಗಿ ವರದಿಯಾಗಿದೆ. ಶ್ರೀಲೀಲಾ ನಟನೆಗೆ ಬ್ರೇಕ್ ಕೊಟ್ಟಿದ್ದಾರೆ ಅನ್ನೋದು ಸದ್ಯದ ಸುದ್ದಿ.


Click it and Unblock the Notifications











