'ಮ್ಯಾಕ್ಸ್ 2' - 'ಮ್ಯಾಕ್ಸ್ ಚಾಪ್ಟರ್ 1' ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಯಾವುದಕ್ಕೆ?
'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಮತ್ತೊಂದು ಸಿನಿಮಾ ರಿಲೀಸ್ ಆಗುವುದಕ್ಕೆ ಎರಡೂವರೆ ವರ್ಷ ಬೇಕಾಯ್ತು. ಇಷ್ಟು ದಿನ ಗ್ಯಾಪ್ ಕೊಟ್ಟು ರಿಲೀಸ್ ಮಾಡಿದರೂ ಕನ್ನಡಕ್ಕೊಂದು ಬ್ಲಾಕ್ ಬಸ್ಟರ್ ಸಿನಿಮಾ ಸಿಕ್ಕಿದೆ. 'ಮ್ಯಾಕ್ಸ್' 2024ರಲ್ಲಿ ಕನ್ನಡ ಚಿತ್ರರಂಗಕ್ಕೆ ಅತೀ ದೊಡ್ಡ ಹಿಟ್ ಕೊಟ್ಟ ಸಿನಿಮಾ ಆಗಿ ಹೊರಹೊಮ್ಮಿತ್ತು. ಬಾಕ್ಸಾಫೀಸ್‌ನಲ್ಲಿ ಚಿಂದಿ ಕಲೆಕ್ಷನ್ ಮಾಡಿತ್ತು.
'ಮ್ಯಾಕ್ಸ್' ಸಿನಿಮಾವನ್ನು ಕಿಚ್ಚ ಸುದೀಪ್ ಹಾಗೂ ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜಂಟಿಯಾಗಿ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಕರ್ನಾಟಕದಲ್ಲಿ ಬ್ಲಾಕ್ ಬಸ್ಟರ್ ಅಂತ ಸಾಬೀತಾಗಿತ್ತು. ಹಾಗೇ ತೆಲುಗು ಹಾಗೂ ತಮಿಳಿನಲ್ಲಿ ಸಾಧಾರಾಣ ಪ್ರತಿಕ್ರಿಯೆ ಸಿಕ್ಕಿತ್ತು. ಒಟ್ಟಾರೆ ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' 2024ರ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿಕೊಂಡಿದೆ.

ಬಹಳ ದಿನಗಳ ಬಳಿಕ ಕಿಚ್ಚ ಸುದೀಪ್‌ಗೆ ದೊಡ್ಡ ಸಕ್ಸಸ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮತ್ತೆ 'ಮ್ಯಾಕ್ಸ್' ನಿರ್ದೇಶಕರ ಜೊತೆ ಸಿನಿಮಾ ಮಾಡುವುದಕ್ಕೆ ನಿರ್ಧರಿಸಿದ್ದಾರೆ ಅನ್ನೋದು ಗಾಂಧಿನಗರದಲ್ಲಿ ಓಡಾಡುತ್ತಿದೆ. ಈಗಾಗಲೇ ನಿರ್ದೇಶಕ ವಿಜಯ್ ಕಾರ್ತಿಕೇಯ ಜೊತೆ 'ಮ್ಯಾಕ್ಸ್' ಸೀಕ್ವೆಲ್ ಮಾಡಬೇಕಾ? ಅಥವಾ ಪ್ರೀಕ್ವೆಲ್ ಮಾಡಬೇಕಾ? ಅನ್ನೋ ಚರ್ಚೆ ಕೂಡ ನಡೆದಿದ್ದು, ತಂಡ ಒಂದು ನಿರ್ಧಾರಕ್ಕೆ ಬಂದಿದೆ ಅಂತ ಗಾಂಧಿನಗರದಲ್ಲಿ ಗುಲ್ಲೆದ್ದಿದೆ. ಅಸಲಿಗೆ ಕಿಚ್ಚನ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಸೀಕ್ವೆಲ್‌ಗಾ? ಪ್ರೀಕ್ವೆಲ್‌ಗಾ? ಚಿತ್ರರಂಗದಲ್ಲಿ ಹರಿದಾಡುತ್ತಿರುವ ಗುಸು ಗುಸು ಏನು? ತಿಳಿಯಲು ಮುಂದೆ ಓದಿ.
ಕಿಚ್ಚ ಸುದೀಪ್ 'ಮ್ಯಾಕ್ಸ್' ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. ಸಿನಿಮಾ ಟ್ರೇಡ್ ಲೆಕ್ಕಾಚಾರ ಹಾಕುವ ವೆಬ್ ಸೈಟ್ ಸ್ಯಾಕ್ನಿಲ್ಕ್ ಪ್ರಕಾರ 'ಮ್ಯಾಕ್ಸ್' ಎಲ್ಲಾ ಭಾಷೆಗಳಿಂದಲೂ ಸೇರಿ 54.45 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ. ಕನ್ನಡ ಸಿನಿಮಾಗಳು ಮಕಾಡೆ ಮಲಗಿದ ಸಮಯದಲ್ಲಿ 'ಮ್ಯಾಕ್ಸ್' ಮಸ್ತ್ ಕಲೆಕ್ಷನ್ ಮಾಡಿದೆ. ಇಷ್ಟೊಂದು ಸಕ್ಸಸ್ ಕೊಟ್ಟ ಸಿನಿಮಾ ಪ್ರೀಕ್ವೆಲ್ ಮಾಡಬೇಕು ಅಂತ ಕಿಚ್ಚ ಸುದೀಪ್ ನಿರ್ಧರಿಸಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಈಗಾಗಲೇ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಇಬ್ಬರೂ ಹಲವು ದಿನಗಳ ಚರ್ಚೆ ನಡೆಸಿದ್ದು, ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರಂತೆ. 'ಮ್ಯಾಕ್ಸ್ 2' ಮಾಡುವುದಕ್ಕಿಂತ ಮುನ್ನ 'ಮ್ಯಾಕ್ಸ್ ಚಾಪ್ಟರ್ 1' ಮಾಡುವುದಕ್ಕೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಜಯ್ ಕಾರ್ತಿಕೇಯಾ ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸವನ್ನೂ ಆರಂಭಿಸಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ನಿರ್ದೇಶಕ ವಿಜಯ್ ಕಾರ್ತಿಕೇಯಾ ಈ ಬಗ್ಗೆ ಇಂಡಿಯಾ ಗ್ಲಿಟ್ಜ್‌ಗೆ ಪ್ರತಿಕ್ರಿಯೆ ನೀಡಿದ್ದರು. "ಕನ್ನಡದಲ್ಲಿ ಈ ಸಿನಿಮಾ ತುಂಬಾ ದೊಡ್ಡ ಹಿಟ್ ಆಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಸಿನಿಮಾವನ್ನು ಮಾಡಿದ್ದಕ್ಕೂ ಸಕ್ಸಸ್ ಸಿಕ್ಕಿದೆ. ಸಿನಿಮಾ ಗೆದ್ದಿದ್ದಕ್ಕೆ ಕಿಚ್ಚ ಸುದೀಪ್ ಮತ್ತೊಮ್ಮೆ ನನ್ನ ಜೊತೆ ಕೆಲಸ ಮಾಡುವುದಕ್ಕೆ ಇಷ್ಟ ಪಟ್ಟಿದ್ದಾರೆ. ಹಾಗೇ ಈಗಾಗಲೇ ಕನ್ನಡ ಹಾಗೂ ತಮಿಳು ಚಿತ್ರರಂಗದ ಹಲವು ನಿರ್ಮಾಣ ಕಂಪನಿಗಳು ಸಿನಿಮಾ ಮಾಡಿಕೊಡುವಂತೆ ಕೇಳಿಕೊಂಡಿವೆ." ಎಂದು ಪ್ರತಿಕ್ರಿಯಿಸಿದ್ದರು.
ಹಾಗೇ ಪ್ರತಿಯೊಬ್ಬ ನಿರ್ದೇಶಕನಿಗೆ ಎರಡನೇ ಸಿನಿಮಾ ತುಂಬಾನೇ ಮುಖ್ಯ ಆಗಿರುತ್ತೆ. ಹೀಗಾಗಿ ಇದಕ್ಕಿಂತ ಒಳ್ಳೆಯ ಸಿನಿಮಾ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇನೆ. ಇನ್ನೂ ಮ್ಯಾಕ್ಸ್ ಸೀಕ್ವೆಲ್ ಮಾಡಬೇಕಾ? ಎನ್ನುವ ಬಗ್ಗೆ ನಿರ್ಧಾರ ಆಗಿಲ್ಲ ಎಂದಿದ್ದರು. ಈ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್ 'ಮ್ಯಾಕ್ಸ್' ಪ್ರೀಕ್ವೆಲ್ ಮಾಡುತ್ತಾರೆ ಅನ್ನೋ ಸುದ್ದಿ ಜೋರಾಗಿ ಓಡಾಡುತ್ತಿದೆ. ಇನ್ನು ಸಿಸಿಎಲ್ ಮುಗಿಯುತ್ತಿದ್ದಂತೆ ಸುದೀಪ್ 'ಬಿಲ್ಲ ರಂಗ ಭಾಷಾ' ಸಿನಿಮಾದ ಶೂಟಿಂಗ್ ಶುರು ಮಾಡಲಾಗಿದ್ದಾರೆ.


Click it and Unblock the Notifications











