'ಕರಾವಳಿ' ಸಿನಿಮಾದಲ್ಲಿ ನಟಿಸಬೇಕಿತ್ತಾ ದರ್ಶನ್? ಈ ಸಿನಿಮಾದಿಂದ ದಾಸನನ್ನು ಕೈ ಬಿಟ್ಟಿದ್ದು ನಿಜವೇ?
ಪ್ರಜ್ವಲ್ ದೇವರಾಜ್ ವೃತ್ತಿ ಬದುಕಿನ ಬಹು ನಿರೀಕ್ಷಿತ ಸಿನಿಮಾ 'ಕರಾವಳಿ'. ಈ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ ವಿಶೇಷ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಕೂಡ ಅದೇ ಹೇಳುತ್ತಿದೆ. ಈ ಕಾರಣಕ್ಕೆ ದೇವರಾಜ್ ಪುತ್ರ ಪ್ರಜ್ವಲ್ 40ನೇ ಸಿನಿಮಾ ಸಿನಿಪ್ರಿಯರಿಗೆ ವಿಶೇಷ ಸಿನಿಮಾ ಆಗಲಿದೆ ಅನ್ನೋ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಇದ್ದಾರೆ.
ಇದೇ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. 'ಕರಾವಳಿ' ಸಿನಿಮಾದಲ್ಲಿ ನಟಿಸುವುದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಒಂದೇ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ ಹಾಗೂ ಚಾಲೆಂಜಿಂಗ್ ಸ್ಟಾರ್ ಇಬ್ಬರೂ ಮುಖಾಮುಖಿ ಆಗಬೇಕಿತ್ತು. ಆದ್ರೀಗ ದರ್ಶನ್ ಜೈಲು ಸೇರಿದ್ದರಿಂದ ಅದು ಮಿಸ್ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಅಂಬಿ ನಿನಗೆ ವಯಸ್ಸಾಯ್ತೋ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಗುರುದತ್ ಗಾಣಿಗ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. 'ಕಾಂತಾರ' ಬಳಿಕ ಮತ್ತೊಂದು 'ಕರಾವಳಿ' ಭಾಗದ ಕಥೆಯನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಹಿಂದೆಂದಿಗಿಂತಲೂ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಿನಿಮಾದಲ್ಲಿ ದರ್ಶನ್ ಕೂಡ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಬೇಕಿತ್ತು.
ಇತ್ತೀಚೆಗಷ್ಟೇ 'ಕರಾವಳಿ' ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿತ್ತು. ಆ ಟೀಸರ್ ನೋಡಿದವರಿಗೆ ಹೊಸದೇನನ್ನೋ ಹೇಳುವುದಕ್ಕೆ ಚಿತ್ರತಂಡ ಹೊರಟಿದೆ ಅಂತ ಅನಿಸಿತ್ತು. ಒಂದು ಕಡೆ ತಾಯಿ ಮಗುವಿಗೆ ಜನ್ಮ ಕೊಡುವ ದೃಶ್ಯ. ಅದೇ ವೇಳೆ ಇನ್ನೊಂದು ಕಡೆ ಎಮ್ಮೆ ತನ್ನ ಕರುವಿಗೆ ಜನ್ಮ ಕೊಡುವ ದೃಶ್ಯ ಕಾಣಿಸುತ್ತೆ. ಟೀಸರ್‌ನಲ್ಲಿ ಎರಡೂ ವಿಭಿನ್ನ ದೃಶ್ಯಗಳಾಗಿದ್ದರೂ ಒಂದೇ ಕಾಲಘಟ್ಟದಲ್ಲಿ ನಡೆಯುತ್ತೆ. ಈ ದೃಶ್ಯವನ್ನು ನೋಡಿ ಸಿನಿಪ್ರಿಯರು ಮೆಚ್ಚಿಕೊಂಡಿದ್ದರು.

ಎಲ್ಲಕ್ಕಿಂತ ಹೆಚ್ಚಾಗಿ 'ಕರಾವಳಿ' ಟೀಸರ್‌ನ ಕೊನೆಯಲ್ಲಿ ಪ್ರಜ್ವಲ್ ದೇವರಾಜ್ ಎಮ್ಮೆ ಏರಿ ಬರುವ ದೃಶ್ಯ ಸಖತ್ ಕಿಕ್ ಕೊಟ್ಟಿತ್ತು. ಈ ಕಾರಣಕ್ಕೆ ಕನ್ನಡ ಚಿತ್ರರಂಗದ ಮತ್ತೊಂದು ವಿಶೇಷ ಸಿನಿಮಾ ಆಗಬಹುದು ಎಂದು ನಿರೀಕ್ಷೆ ಮಾಡಿದ್ದರು. ಹೀಗಿರುವಾಗ ಪ್ರಜ್ವಲ್ ದೇವರಾಜ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕಾಣಿಸಿಕೊಂಡಿದ್ದರೆ, ಆ ಕಥೆಯೇ ಬೇರೆ ಇರುತ್ತಿತ್ತು. ಥಿಯೇಟರ್‌ನಲ್ಲಿ ಅಭಿಮಾನಿಗಳಿಗೆ ಹಬ್ಬ ಆಗಿಬಿಡುತ್ತಿತ್ತು.
ಆದ್ರೀಗ ನಿರ್ದೇಶಕ ಗುರುದತ್ ಗಾಣಿಗ 'ಕರಾವಳಿ' ಸಿನಿಮಾದಿಂದ ದರ್ಶನ್ ಅವರನ್ನು ಕೈ ಬಿಡುವುದಕ್ಕೆ ನಿರ್ಧರಿಸಿದ್ದಾರೆ ಅನ್ನೋ ಸುದ್ದಿ ಹಬ್ಬಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಸದ್ಯಕ್ಕೆ ಹೊರಬರುವ ಹಾಗೆ ಕಾಣಿಸುತ್ತಿಲ್ಲ. ಈ ವೇಳೆ ಸಿನಿಮಾವನ್ನು ಮುಗಿಸಬೇಕಿದ್ದರಿಂದ ದರ್ಶನ್‌ಗಾಗಿ ಕಾಯುವ ಸ್ಥಿತಿಯಲ್ಲಿ ಚಿತ್ರತಂಡವಿಲ್ಲ. ಈ ಕಾರಣಕ್ಕೆ ದರ್ಶನ್ ಅವರನ್ನು ಕೈ ಬಿಟ್ಟು ಬೇರೊಬ್ಬ ಸ್ಟಾರ್ ನಟನಿಗೆ ಅಪ್ರೋಚ್ ಮಾಡುವ ಸಾಧ್ಯತೆಯಿದೆ ಅನ್ನೋ ಸುದ್ದಿ ಹಬ್ಬಿದೆ.
ಸುದೀಪ್ ನಿರ್ಮಿಸಿದ್ದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾಗೆ ಗುರುದತ್ ಆಕ್ಷನ್ ಕಟ್ ಹೇಳಿದ್ದರು. ಹೀಗಾಗಿ ಕಿಚ್ಚನೊಂದಿಗೆ ಉತ್ತಮ ಬಾಂಧವ್ಯ ಇನ್ನೂ ಇಟ್ಟುಕೊಂಡಿರುವ ಸಾಧ್ಯತೆಯಿದೆ. ಹೀಗಾಗಿ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಬಹುದಾ? ಅನ್ನೋ ಗುಸು ಗುಸು ಶುರುವಾಗಿದೆ. ಆದರೆ, ಸಿನಿಮಾ ಮಂದಿ ಇದು ಅಸಾಧ್ಯ ಅಂತ ಹೇಳುತ್ತಿದ್ದಾರೆ. ಹೀಗಾಗಿ ನಿರ್ದೇಶಕರು ದರ್ಶನ್ ಸ್ಥಾನಕ್ಕೆ ಬೇರೆ ಯಾರನ್ನು ಕರೆದುಕೊಂಡು ಬರುತ್ತಾರೋ ಅಂತ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.


Click it and Unblock the Notifications











