ಅಲ್ಲು ಅರ್ಜುನ್ ಮೇಲೆ 'ಧುರಂಧರ್' ನಿರ್ದೇಶಕನ ಕಣ್ಣು; ಈ ಪ್ರಾಜೆಕ್ಟ್ ಲೆಕ್ಕಾಚಾರವೇನು?
'ಪುಷ್ಪ 2' ರಿಲೀಸ್ ಆದ ಬಳಿಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಸುಕುಮಾರ್ ನಿರ್ದೇಶಿಸಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಚರಿತ್ರೆಯನ್ನೇ ಬರೆದಿತ್ತು. ಅಲ್ಲಿಂದ ಅಲ್ಲು ಅರ್ಜುನ್ ಎಲ್ಲಾ ಚಿತ್ರರಂಗದಿಂದಲೂ ಬೇಡಿಕೆ ಹೆಚ್ಚಾಗಿದೆ. 'ಪುಷ್ಪ 2' ಬಳಿಕ ಅಲ್ಲು ಅರ್ಜುನ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
'ಪುಷ್ಪ 2' ಬಾಕ್ಸಾಫೀಸ್ ದೋಚಿದ ಬಳಿಕ ಅಲ್ಲು ಅರ್ಜುನ್ ಕ್ರೇಜ್ ಪ್ಯಾನ್ ಇಂಡಿಯಾ ಅಷ್ಟೇ ಅಲ್ಲ, ಗ್ಲೋಬಲ್ ಲೆವೆಲ್‌ವರೆಗೂ ಹೋಗಿದೆ. ಸದ್ಯಕ್ಕೀಗ ಅಟ್ಲೀ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಈ ಮಧ್ಯೆ ಕೆಲವು ಪ್ರಾಜೆಕ್ಟ್‌ಗಳಿಗೆ ಅಲ್ಲು ಅರ್ಜುನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಅಟ್ಟೀ ಸಿನಿಮಾ ಮುಗಿಯುತ್ತಿದ್ದಂತೆ ಹೊಸ ಪ್ರಾಜೆಕ್ಟ್‌ಗಳು ಆರಂಭ ಆಗುತ್ತವೆಂದು ಹೇಳಲಾಗುತ್ತಿದೆ.

ಅಲ್ಲು ಅರ್ಜುನ್ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಬಾಲಿವುಡ್‌ನಿಂದ ಬಂಪರ್ ಆಫರ್ ಬಂದಿದೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. 'ಧುರಂಧರ್' ಮೂಲಕ ಬಾಕ್ಸಾಫೀಸ್ ಅನ್ನೇ ನಡುಗಿಸಿದ್ದ ಆದಿತ್ಯ ಧರ್ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡುತ್ತಾರೆಂಬ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ಈ ಪ್ರಾಜೆಕ್ಟ್ ಬಗ್ಗೆ ಓಡಾಡುತ್ತಿರುವ ಸುದ್ದಿ ಏನು? ತಿಳಿಯುವುದಕ್ಕೆ ಮುಂದೆ ಓದಿ.
ಒಂದ್ಕಡೆ ಅಲ್ಲು ಅರ್ಜುನ್, ಇನ್ನೊಂದು ಕಡೆ ಆದಿತ್ಯ ಧರ್. ಇಬ್ಬರೂ ಒಟ್ಟಿಗೆ ಸೇರಿದರೆ ಆ ಸಿನಿಮಾ ಇನ್ನೆಷ್ಟು ಕ್ರೇಜ್ ಹುಟ್ಟಾಕಬಹುದು? ಈ ಪ್ರಶ್ನೆಗೆ ಉತ್ತರ ಕಲ್ಪಸಿಕೊಳ್ಳುವುದಕ್ಕೂ ಅಸಾಧ್ಯ. ಆದಿತ್ಯ ಧರ್ ಬಾಲಿವುಡ್‌ನ ಜನಪ್ರಿಯರ ನಿರ್ದೇಶಕ. ಈಗಾಗಲೇ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್', 'ಧುರಂಧರ್' ಅಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಟ್ಟು ತಾವೇನು ಅನ್ನೋದನ್ನು ಸಾಬೀತು ಪಡಿಸಿದ್ದಾರೆ. 'ಧುರಂಧರ್' ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸುಮಾರು ₹1300 ಕೋಟಿಗೂ ಹೆಚ್ಚು ಗಳಿಸಿದ್ದೇ ಇದಕ್ಕೆ ಸಾಕ್ಷಿ.

'ಧುರಂಧರ್ 2' ರಿಲೀಸ್ ಬಳಿಕ ಆದಿತ್ಯ ಧರ್ ತಮ್ಮ ಡ್ರೀಮ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅದು ಅಲ್ಲು ಅರ್ಜುನ್ ಜೊತೆ ಮಾಡುತ್ತಿರುವ ಸಿನಿಮಾ. ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡೋದು ಬಹುತೇಕ ಕನ್ಫರ್ಮ್ ಆಗಿದೆ ಅನ್ನೋದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಸುದ್ದಿ. ಈಗಾಗಲೇ ಆದಿತ್ಯ ಧರ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ ಕಥೆಯನ್ನೂ ಹೇಳಿದ್ದಾರಂತೆ. ಈ ಕಥೆ ಕೇಳಿ ಅಲ್ಲು ಅರ್ಜುನ್ ಮೆಚ್ಚಿಕೊಂಡಿದ್ದಾರೆ ಎನ್ನಲಾಗಿದೆ.
ಆದಿತ್ಯ ಧರ್ ಈ ಹಿಂದೆ 'ಅಶ್ವತ್ಥಾಮನ' ಪಾತ್ರವನ್ನು ಇಟ್ಟುಕೊಂಡು ಪೌರಾಣಿಕ ಹೇಳಲು ಬಯಸಿದ್ದರು. ಈ ಪ್ರಾಜೆಕ್ಟ್‌ಗೆ ವಿಕ್ಕಿ ಕೌಶಲ್ ಸೆಲೆಕ್ಟ್ ಆಗಿದ್ದಾರೆಂಬ ಮಾತು ಕೂಡ ಕೇಳಿ ಬಂದಿತ್ತು. ಆದರೆ, ಅದ್ಯಾವಾಗ 'ಕಲ್ಕಿ 2898 AD' ರಿಲೀಸ್ ಆಯ್ತೋ ಆಗ ಪ್ರಾಜೆಕ್ಟ್ ಅನ್ನು ಪಕ್ಕಕ್ಕಿಟ್ಟರು ಎನ್ನಲಾಗಿದೆ. ಯಾಕಂದ್ರೆ, 'ಕಲ್ಕಿ'ಯಲ್ಲಿ ಅಶ್ವತ್ಥಾಮನ ಪಾತ್ರ ಪ್ರಮುಖವಾಗಿತ್ತು. 'ಕಲ್ಕಿ'ಯಲ್ಲಿ ಅಶ್ವತ್ಥಾಮ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದರು. ಮತ್ತೆ ಅದೇ ಕಾನ್ಸೆಪ್ಟ್ ಬೇಡವೆಂದು ಇಬ್ಬರೂ ನಿರ್ಧರಿಸಿದ್ದರು ಎನ್ನಲಾಗಿದೆ.
ಹೀಗಾಗಿ ಆದಿತ್ಯ ಧರ್ ಹೊಸ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲು ಅರ್ಜುನ್‌ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಮಾಡುವುದಕ್ಕೆ ಸಜ್ಜಾಗಿದ್ದು, ಪ್ಯಾನ್ ವರ್ಲ್ಡ್ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಅಲ್ಲು ಅರ್ಜುನ್ ಕೈಯಲ್ಲಿ 'AA22' ಮತ್ತು 'AA23' ಎಂಬ ಎರಡು ಸಿನಿಮಾಗಳಿದ್ದು, ಅವು ಮುಗಿದ ಬಳಿಕ ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications











