ಅಲ್ಲು ಅರ್ಜುನ್ ಸಿನಿಮಾದಲ್ಲಿ ಶ್ರೀದೇವಿ ಪುತ್ರಿ? ಏನಿದು ಅಟ್ಲೀ ಮಾಸ್ಟರ್ ಪ್ಲಾನಾ?
ಅಲ್ಲು ಅರ್ಜುನ್ ಈಗ ಕೇವಲ ಟಾಲಿವುಡ್ ಸ್ಟಾರ್ ಅಲ್ಲ. 'ಪುಷ್ಪ 2' ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಇಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಬಳಿಕ ಮುಂದಿನ ಪ್ರಾಜೆಕ್ಟ್ ಯಾವುದು? ಅನ್ನೋ ಪ್ರಶ್ನೆಗೆ ಅಲ್ಲು ಅರ್ಜುನ್‌ರಿಂದ ಉತ್ತರ ಬೇಗನೇ ಸಿಕ್ಕಿತ್ತು. ಶಾರುಖ್ ಖಾನ್ ಸೂಪರ್ ಸಕ್ಸಸ್ ಕೊಟ್ಟ ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳುವುದಕ್ಕೆ ರೆಡಿಯಾಗಿದ್ದರು. ಅದುವೇ 'AA22xA6'.
ಸನ್ ಪಿಕ್ಷರ್ಸ್ ನಿರ್ಮಾಣ ಮಾಡುತ್ತಿರುವ ಈ ಬಹುಕೋಟಿ ವೆಚ್ಚದ ಸಿನಿಮಾ ಈಗಾಗಲೇ ಸದ್ದು ಮಾಡುತ್ತಿದೆ. ಯಾಕಂದ್ರೆ 'ಪುಷ್ಪ 2' ವಿಶ್ವದಾದ್ಯಂತ ಸದ್ದು ಮಾಡಿದ್ದರಿಂದ ಅಲ್ಲು-ಅಟ್ಲೀ ಸಿನಿಮಾವನ್ನು ಗ್ಲೋಬಲ್ ಲೆವೆಲ್‌ನಲ್ಲಿ ನಿರ್ಮಾಣ ಮಾಡುವುದಕ್ಕೆ ಸನ್ ಪಿಕ್ಚರ್ಸ್ ನಿರ್ಧರಿಸಿದೆ. ಈ ಕಾರಣಕ್ಕೆ ಹಾಲಿವುಡ್‌ನ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿರೋದು ವಿಶೇಷ.

ಸದ್ಯ ಅಲ್ಲು ಅರ್ಜುನ್ ಹಾಗೂ ಅಟ್ಲೀ ಕಾಂಬಿನೇಷನ್ ಅಂತಷ್ಟೇ ಗೊತ್ತಿದ್ದು, ಉಳಿದ ಸ್ಟಾರ್ ಕಾಸ್ಟ್ ಬಗ್ಗೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಅದರಲ್ಲೂ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಯಾರು ನಟಿಸಬಹುದು ಅನ್ನೋ ಸುಳಿವನ್ನು ಚಿತ್ರತಂಡ ಅಧಿಕೃತವಾಗಿ ಬಿಟ್ಟು ಕೊಟ್ಟಿಲ್ಲ. ಹೀಗಿದ್ದೂ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ಈ ಮಧ್ಯೆ ಟಾಲಿವುಡ್‌ನಲ್ಲಿ ಮತ್ತೊಬ್ಬ ನಾಯಕಿಯ ಹೆಸರು ಕೇಳಿ ಬರುತ್ತಿದೆ.
ಅಟ್ಲೀ ನಿರ್ದೇಶನ ಮಾಡೋ ಸಿನಿಮಾದಲ್ಲಿ ಕಮರ್ಷಿಯಲ್ ಅಂಶಗಳು ಹೆಚ್ಚಿರುತ್ತವೆ. ಮಾಸ್ ಎಲಿವೇಶನ್‌ಗಳ ಜೊತೆಗೆ ಭಾವನಾತ್ಮಕ ಸನ್ನಿವೇಶಗಳನ್ನು ಸೇರಿಸಿ ಸಿನಿಮಾ ಮಾಡುವುದು ಅವರ ಸ್ಟ್ರೆಂಥ್. ಇನ್ನೊಂದು ಕಡೆ ಅಲ್ಲು ಅರ್ಜುನ್ ಕೂಡ ಸಿನಿಮಾವನ್ನು ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗುವ ತಾಕತ್ತಿರುವ ನಟ. ಹೀಗಾಗಿ ಮುಂದಿನ ಸಿನಿಮಾದಲ್ಲಿ ದುಬಾರಿ ಆಕ್ಷನ್ ಸೀಕ್ವೆನ್ಸ್, ಅದ್ಧೂರಿ ಸೆಟ್‌ಗಳು, ಗ್ರಾಫಿಕ್ಸ್ ಇರುತ್ತೆ. ಈ ಬಗ್ಗೆ ಈಗಾಗಲೇ ಸುಳಿವು ಸಿಕ್ಕಿದೆ.
ಇವೆಲ್ಲದರ ನಡುವೆ ಅಲ್ಲು ಅರ್ಜುನ್ ಸಿನಿಮಾದ ನಾಯಕಿಯರ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ನಡೆಯುತ್ತಿದೆ. ಪ್ರಾಜೆಕ್ಟ್ ಶುರುವಾದ ಕೆಲವೇ ದಿನಗಳಲ್ಲೇ ಬಾಲಿವುಡ್‌ನ ದುಬಾರಿ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈಗ ಮತ್ತೊಬ್ಬ ಬಾಲಿವುಡ್ ನಟಿಯ ಹೆಸರು ಕೇಳಿ ಬರುತ್ತಿದೆ. ಅವರು ಮತ್ಯಾರೂ ಅಲ್ಲ ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್.

ಈಗಾಗಲೇ ಜಾಹ್ನವಿ ಕಪೂರ್ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಜೂನಿಯರ್ ಎನ್‌ಟಿಆರ್ ನಟನೆಯ 'ದೇವರ' ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟ ನಟಿ, ಸದ್ಯ ರಾಮ್ ಚರಣ್ ನಟಿಸುತ್ತಿರುವ 'ಪೆದ್ದಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ 'ಪೆದ್ದಿ' ಸಿನಿಮಾದ ಹಾಡು-ಗ್ಲಿಂಪ್ಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಾಹ್ನವಿ ಕಪೂರ್ ಗ್ಲಾಮರ್ ಲುಕ್‌ಗೆ ತೆಲುಗು ಮಂದಿ ಕಳೆದು ಹೋಗಿದ್ದಾರೆ.
ಒಂದು ವೇಳೆ ಅಲ್ಲು ಅರ್ಜುನ್ ಸಿನಿಮಾದಲ್ಲಿ ನಟಿಸೋದು ನಿಜವೇ ಆಗಿದ್ದರೆ, ಜಾಹ್ನವಿ ಟಾಲಿವುಡ್‌ನ ಪ್ರಮುಖ ನಾಯಕರೊಂದಿಗೆ ಸತತವಾಗಿ ನಟಿಸಿದ ನಟಿಯೆಂಬ ಕೀರ್ತಿಗೆ ಪಾತ್ರರಾಗುತ್ತಾರೆ. ಇನ್ನು ದೀಪಿಕಾ ಮತ್ತು ಜಾಹ್ನವಿ ಕಪೂರ್ ಇಬ್ಬರೂ ಒಟ್ಟಾಗಿ ಸ್ಕ್ರೀನ್ ಶೇರ್ ಮಾಡಿದರೆ, ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮತ್ತಷ್ಟು ಸದ್ದು ಮಾಡೋದು ಗ್ಯಾರಂಟಿ. ಗ್ಲಾಮರ್, ಮಾಸ್, ಆಕ್ಷನ್ ಎಲ್ಲಾ ಸೇರಿದರೆ ಪಕ್ಕಾ ಪ್ಯಾಕೇಜ್ ಸಿನಿಮಾ ಆಗುತ್ತೆಂದು ಅಟ್ಲೀ ಮಾಸ್ಟರ್ ಮಾಡಿದ್ದಾರೆಂದು ಸುದ್ದಿ ಹಬ್ಬಿದೆ. ಅಲ್ಲದೆ, ದೀಪಿಕಾ ಮತ್ತು ಜಾಹ್ನವಿ ಸೇರಿಕೊಂಡರೆ, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಬಹುದು ಎಂಬ ಲೆಕ್ಕಾಚಾರವೂ ಇದೆ. ಆದರೆ, ನಾಯಕಿಯರ ಚಿತ್ರತಂಡ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.


Click it and Unblock the Notifications











