ಪ್ರೇಮ್-ಧ್ರುವ ಸರ್ಜಾ 'ಕೆಡಿ' ಸಿನಿಮಾಗೆ ಕಿಚ್ಚ ಸುದೀಪ್ ಗ್ರ್ಯಾಂಡ್ ಎಂಟ್ರಿ? ಏನಿದು ಹೊಸ ಸುದ್ದಿ?
ಕನ್ನಡ ಚಿತ್ರರಂಗಕ್ಕೆ ವರ್ಷದ ಮೊದಲ ಬ್ಲಾಕ್‌ಬಸ್ಟರ್ ಸಿನಿಮಾ ಸಿಕ್ಕಿದೆ. ಚಿಕ್ಕ ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಪ್ರತಿದಿನ ಕೋಟಿಗಳ ಲೆಕ್ಕದಲ್ಲಿ ದೋಚುತ್ತಿದೆ. ಈ ಸಕ್ಸಸ್ ಬಳಿಕ ಸ್ಯಾಂಡಲ್‌ವುಡ್ ಸಿನಿಮಾಗಳ ಮೇಲೆ ಮತ್ತೆ ನಿರೀಕ್ಷೆ ದುಪ್ಪಟ್ಟಾಗಿದೆ. ಮುಂದಿನ ದಿನಗಳಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳ ಮೇಲೆ ಒತ್ತಡ ಹೆಚ್ಚಾಗಿದೆ. ಗಳಿಕೆಯಲ್ಲಿ 'ಸು ಫ್ರಮ್ ಸೋ'ಗೂ ನಾಲ್ಕೈದು ಪಟ್ಟು ಕಲೆಕ್ಷನ್ ಮಾಡಲೇ ಬೇಕಿದೆ. ಈ ದೃಷ್ಟಿಯಿಂದ ಸದ್ಯಕ್ಕೆ'ಕೆಡಿ' ಸಿನಿಮಾದ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಕೆಲವೇ ದಿನಗಳ ಹಿಂದಷ್ಟೇ 'ಕೆಡಿ: ದಿ ಡೆವಿಲ್' ಸಿನಿಮಾದ ತುಣುಕನ್ನು ರಿಲೀಸ್ ಮಾಡಲಾಗಿತ್ತು. ಈ ಸಿನಿಮಾದಲ್ಲಿರುವ ಪ್ರಮುಖ ಪಾತ್ರಗಳ ಅನಾವರಣ ಆಗಿತ್ತು. ಅದಕ್ಕೊಂದು ದೊಡ್ಡ ಕಾರ್ಯಕ್ರಮವನ್ನೇ ಪ್ರೇಮ್ ಹಮ್ಮಿಕೊಂಡಿದ್ದರು. ಇಲ್ಲಿಗೆ 'ಕೆಡಿ' ಮುಗೀತು ಇನ್ನೇನಿದ್ದರೂ ಸಿನಿಮಾ ನೋಡುವುದಷ್ಟೇ ಬಾಕಿ ಎಂದು ಸಿನಿಪ್ರಿಯರು ಕಾದು ಕೂತಿದ್ದರು. ಅಷ್ಟೇ ಪ್ರೇಮ್ ವಿದೇಶಕ್ಕೆ ಹಾಕಿದ್ದರು.

ಅಲ್ಲಿ ಇನ್ನೇನೋ ಕೆಲಸ ನಡೆಯುತ್ತಿದೆ ಎಂದು ಅಪ್‌ಡೇಟ್ ಕೊಟ್ಟಿದ್ದರು. ಪ್ರೇಮ್ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿರಬೇಕು ಎಂದುಕೊಳ್ಳುತ್ತಿರುವಾಗಲೇ ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಬಗ್ಗೆ ಮತ್ತೊಂದು ಸುದ್ದಿ ಓಡಾಡುತ್ತಿದೆ. ಅದೇನಂದ್ರೆ, 'ಕೆಡಿ' ಸಿನಿಮಾದ ಶೂಟಿಂಗ್ ಇನ್ನೂ ಮುಗಿದಿಲ್ಲ. ಈ ಸಿನಿಮಾಗೆ ಕನ್ನಡದ ಬಾದ್‌ಷಾ ಕಿಚ್ಚ ಸುದೀಪ್ ಗ್ರ್ಯಾಂಡ್ ಎಂಟ್ರಿ ಕೊಡೋದು ಬಾಕಿಯಿದೆಯೆಂಬ ಸುದ್ದಿ ಓಡಾಡುತ್ತಿದೆ. ಅಸಲಿಗೆ ಏನಿದು ಸುದ್ದಿ? 'ಕೆಡಿ'ಗೆ ಎಂಟ್ರಿ ಕೊಡುತ್ತಾರಾ ಕಿಚ್ಚ? ಗಾಂಧಿನಗರದಲ್ಲಿ ಹರಿದಾಡುತ್ತಿರುವ ಈ ಸುದ್ದಿ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಪ್ರೇಮ್ ಸಂಗೀತ ಪ್ರಯೋಗ
ಪ್ರೇಮ್ ಸಿನಿಮಾದಲ್ಲಿ ಸಂಗೀತಕ್ಕೆ ವಿಶೇಷ ಮಾನ್ಯತೆ ಇರುತ್ತೆ. ಹಾಡುಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಹಾಗೇ ಹಿನ್ನೆಲೆ ಸಂಗೀತದ ಬಗ್ಗೆನೂ ಗಮನ ಹರಿಸುತ್ತಾರೆ. ಹೀಗಾಗಿ ಬೇರೆ ಬೇರೆ ದೇಶಕ್ಕೆ ತೆರಳಿ ಅಲ್ಲಿನ ಜನಪ್ರಿಯ ಆರ್ಕೆಸ್ಟ್ರಾ ತಂಡದಿಂದ ಟ್ಯೂನ್‌ಗಳನ್ನು ಕಂಪೋಸ್ ಮಾಡಿಸಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಮತ್ತೆ ಪ್ರೇಮ್ ವಿದೇಶಕ್ಕೆ ಹಾರಿದ್ದರು. ಹಂಗೇರಿಯಾದ ಬುಡಾಪೆಸ್ಟ್‌ನಲ್ಲಿ ಮತ್ತೊಂದು ಲೈವ್ ಮ್ಯೂಸಿಕ್ ಆರ್ಕೆಸ್ಟ್ರಾ ತಂಡದಿಂದ ಬೇರೆ ಬೇರೆ ವಾದ್ಯಗಳ ತುಣುಕುಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಆ ಮಟ್ಟಿಗೆ ಕಾಳಜಿ ವಹಿಸುತ್ತಿದ್ದಾರೆ. ಈ ಗ್ಯಾಪ್‌ನಲ್ಲೇ ಕಿಚ್ಚ ಸುದೀಪ್ ಎಂಟ್ರಿ ಕೊಡುತ್ತಿರುವ ಬಗ್ಗೆ ಸುದ್ದಿಯಾಗುತ್ತಿದೆ.

'ಕೆಡಿ' ಅಡ್ಡಾಗೆ ಕಿಚ್ಚ ಸುದೀಪ್ ಎಂಟ್ರಿ?
'ಕೆಡಿ' ಸಿನಿಮಾದ ಕೆಲಸಗಳು ಇನ್ನೂ ನಡೆಯುತ್ತಲೇ ಇವೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಪ್ರೇಮ್ ಚಿಕ್ಕ ಪುಟ್ಟ ವಿಷಯದ ಬಗ್ಗೆನೂ ಕಾಳಜಿ ವಹಿಸುತ್ತಿರುವಂತೆ ಕಾಣುತ್ತಿದೆ. ಒಂದ್ಕಡೆ ಖುದ್ದಾಗಿ ಪ್ರೇಮ್ ಹಂಗೇರಿಯ ಬುಡಾಪೆಸ್ಟ್‌ನಲ್ಲಿದ್ದಾರೆ. ಇತ್ತ 'ಕೆಡಿ' ಸಿನಿಮಾಗೆ ಕಿಚ್ಚ ಸುದೀಪ್ ಎಂಟ್ರಿ ಕೊಡುತ್ತಿದ್ದಾರೆಂಬ ಸುದ್ದಿಯಿದೆ. ಈಗಾಗಲೇ ಕಿಚ್ಚ ಸುದೀಪ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆಂಬ ಮಾತು ಸಿನಿಮಾ ಮಂದಿಯ ಬಾಯಲ್ಲಿ ಹರಿದಾಡುತ್ತಿದೆ. ಆದರೆ, ಕಿಚ್ಚನ ಪಾತ್ರ ಯಾವುದು ಅನ್ನೋ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಶೂಟಿಂಗ್ ಯಾವಾಗ ಶುರು?
ಕಿಚ್ಚ ಸುದೀಪ್ ಇದೇ ತಿಂಗಳ 10ನೇ ತಾರೀಕಿನಿಂದ 'ಕೆಡಿ' ಅಡ್ಡಾಗೆ ಎಂಟ್ರಿ ಕೊಡುತ್ತಿದ್ದಾರೆ ಅನ್ನೋ ಮಾತು ಇದೆ. ಹೈದರಾಬಾದ್‌ನಲ್ಲಿ ಕಿಚ್ಚನ ಭಾಗದ ಶೂಟಿಂಗ್ ನಡೆಯಲಿದೆ. ಈ ದೃಶ್ಯಗಳಲ್ಲಿ ಕಿಚ್ಚ ಸುದೀಪ್ ಹಾಗೂ ಧ್ರುವ ಸರ್ಜಾ ಇಬ್ಬರ ಮುಖಾ ಮುಖಿ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಪ್ರೇಮ್ ಕೊನೆಯಲ್ಲಿ ಕಿಚ್ಚನನ್ನು ಕರೆದುಕೊಂಡು ಬಂದಿರೋದು ಸ್ಯಾಂಡಲ್‌ವುಡ್‌ನಲ್ಲಿ ಅಚ್ಚರಿ ಮೂಡಿಸಿದೆ. 'ದಿ ವಿಲನ್' ಸಿನಿಮಾ ಬಳಿಕ ಜೋಗಿ ಪ್ರೇಮ್ ಮತ್ತೆ ಕಿಚ್ಚನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಸೆಕೆಂಡ್ ಹಾಫ್‌ನಲ್ಲಿ ಸುದೀಪ್ ಫುಲ್ ಬ್ಯುಸಿ
ಕಿಚ್ಚ ಸುದೀಪ್ ಈಗಾಗಲೇ ಒಂದು ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. 'ಮ್ಯಾಕ್ಸ್' ಸಿನಿಮಾದ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಇದನ್ನು ಡಿಸೆಂಬರ್ ತಿಂಗಳಲ್ಲಿಯೇ ರಿಲೀಸ್ ಮಾಡಬೇಕು ಅಂತ ಪಟ್ಟು ಹಿಡಿದು ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ 'ಬಿಲ್ಲ ರಂಗ ಭಾಷಾ' ಸಿನಿಮಾನೂ ಆರಂಭ ಆಗಿದೆ. ಜೊತೆಗೆ ಸೆಪ್ಟೆಂಬರ್ ತಿಂಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗಲಿದೆ. ಈ ಮಧ್ಯೆ ಕಿಚ್ಚ 'ಕೆಡಿ'ಯಲ್ಲಿಯೂ ನಟಿಸುತ್ತಿರೋದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.


Click it and Unblock the Notifications











