ರಜನಿಕಾಂತ್ ಸಿನಿಮಾ 'ನೋ' ಎಂದರೇ ಬಾಲಕೃಷ್ಣ? ಒಬ್ಬ ವ್ಯಕ್ತಿಯೇ ಕಾರಣನಾ?
ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳು 'ಜೈಲರ್ 2' ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶಿಸಿದ 'ಕೂಲಿ' ಫ್ಯಾನ್ಸ್ ಅಂದುಕೊಂಡ ಮಟ್ಟಕ್ಕೆ ಮನರಂಜನೆ ಸಿಕ್ಕಿರಲಿಲ್ಲ. ಹೀಗಾಗಿ ರಜನಿಯನ್ನು ಮತ್ತೆ 'ಜೈಲರ್' ಆಗಿ ನೋಡುವ ತವಕದಲ್ಲಿ ಇದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಬೇರೆ ಚಿತ್ರರಂಗದಿಂದ ಯಾವೆಲ್ಲ ಸ್ಟಾರ್‌ಗಳನ್ನು ಕರೆದುಕೊಂಡು ಬರಬಹುದೆಂಬ ಕುತೂಹಲವೂ ಇದೆ.
'ಜೈಲರ್ 2' ಶೂಟಿಂಗ್ ಈಗಾಗಲೇ ಶುರುವಾಗಿದೆ. ರಜನಿಕಾಂತ್ ಕೂಡ ಫುಲ್ ಸ್ವಿಂಗ್‌ನಲ್ಲಿ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಕೆಲವು ದಿನಗಳ ಕಾಲ ಕೇರಳ ಸೇರಿದಂತೆ ಹಲವು ಭಾಗಗಳಲ್ಲಿ ಶೂಟಿಂಗ್ ಮಾಡಲಾಗಿದೆ. ರಜನಿಕಾಂತ್ ಶೂಟಿಂಗ್ ಮಾಡುತ್ತಿದ್ದ ಸ್ಪಾಟ್ ಬಳಿ ಇತ್ತೀಚೆಗೆ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದನ್ನೂ ನೋಡಿದ್ದೇವೆ.

'ಜೈಲರ್ 2' ಸಿನಿಮಾವನ್ನು ರಜನಿಕಾಂತ್ ಮ್ಯಾನರಿಸಂ ನೋಡುವುದಕ್ಕೆ ಎಷ್ಟು ಮಂದಿ ಕಾಯುತ್ತಿದ್ದಾರೋ? ಅಷ್ಟೇ ಮಂದಿ ಬಾಲಕೃಷ್ಣರನ್ನು ತೆರೆಮೇಲೆ ನೋಡುವ ತವಕದಲ್ಲಿದ್ದರು. ಅಂತಹ ಅಭಿಮಾನಿಗಳಿಗೆ ಕಾಲಿವುಡ್‌ನಿಂದ ಒಂದು ಬೇಸರ ವಿಷಯ ಹೊರಬಿದ್ದಿದೆ. ತಮಿಳು ಚಿತ್ರರಂಗದಲ್ಲಿ ಹರಿದಾಡುತ್ತಿರುವ ಪ್ರಕಾರ, 'ಜೈಲರ್ 2' ಸಿನಿಮಾ ಬಾಲಕೃಷ್ಣ "ನೋ.." ಎಂದಿದ್ದಾರಂತೆ. ಅಷ್ಟಕ್ಕೂ ಕಾರಣವೇನು? ತಿಳಿಯುವುದಕ್ಕೆ ಮುಂದೆ ಓದಿ.
ಟಾಲಿವುಡ್‌ನ ಲೆಜೆಂಡ್ ನಂದಮೂರಿ ಬಾಲಕೃಷ್ಣ ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ಇತ್ತೀಚೆಗೆ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ಕೊಟ್ಟ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿ ಕೂಡ ಇವರ ಮುಡಿಗೇರಿದೆ. ಇನ್ನೊಂದು ಕಡೆ ರಾಜಕೀಯದಲ್ಲೂ ಸತತ ಗೆಲವು, ನಿರೂಪಕರಾಗಿ ಜನಮೆಚ್ಚುಗೆ ಪಡೆದಿರೋ ಬಾಲಕೃಷ್ಣ ಆಫರ್‌ಗಳೇನು ಕಮ್ಮಿಯಿಲ್ಲ. ಆದರೂ ಸಿನಿಮಾ ಅಭಿಮಾನಿಗಳು ರಜನಿಕಾಂತ್ ಜೊತೆ ಬಾಲಯ್ಯರನ್ನು ನೋಡುವುದಕ್ಕೆ ಇಷ್ಟ ಪಟ್ಟಿದ್ದರು.
ಎಲ್ಲಿಕ್ಕಿಂತ ಹೆಚ್ಚಾಗಿ ಬಾಲಕೃಷ್ಣಗೆ ತಮಿಳುನಾಡು, ಆಂಧ್ರ, ತೆಲಂಗಾಣದಷ್ಟೇ ಫೇಮಸ್. ಹೌದು, ಬಾಲಕೃಷ್ಣ ಹುಟ್ಟಿ ಬೆಳೆದಿದ್ದೆಲ್ಲ ಚೆನ್ನೈನಲ್ಲಿಯೇ. ಅವರಿಗೆ ತಮಿಳುನಾಡಿಯಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಹೀಗಾಗಿ ಅವರು ತಮಿಳನ್ನು ನಿರರ್ಗಳವಾಗಿ ಮಾತಾಡಬಲ್ಲರು. ಹೀಗಿದ್ದರೂ ತಮಿಳು ಸಿನಿಮಾಗಳಲ್ಲಿ ನಟಿಸುವ ಮನಸ್ಸು ಮಾಡಿಲ್ಲ. ಹೀಗಾಗಿ ಬಾಲಕೃಷ್ಣರನ್ನು ರಜನಿಕಾಂತ್ ಸಿನಿಮಾ ಮೂಲಕವೇ ಕರೆದುಕೊಂಡು ಹೋಗಬೇಕೆಂದು ಬಯಸಿದ್ದರು. ಅದು ಸಾಧ್ಯವಾಗಿಲ್ಲ ಎಂದು ವರದಿಗಳಾಗಿವೆ.

ತಮಿಳಿನ ಸಾಕಷ್ಟು ನಿರ್ದೇಶಕರು ಬಾಲಕೃಷ್ಣಗೆ ತಮಿಳು ಸಿನಿಮಾಗಳಲ್ಲಿ ನಟಿಸುವಂತೆ ಆಫರ್ ನೀಡಿದ್ದರು. ಆದರೆ, ಅವುಗಳನ್ನೆಲ್ಲ ಬಾಲಯ್ಯ ನಿರಾಕರಿಸಿದ್ದರು. ಆದರೆ, ನೆಲ್ಸನ್ ದಿಲೀಪ್ ಕುಮಾರ್ ಹೇಗೋ ಒಪ್ಪಿಸಿಬಿಟ್ಟಿದ್ದಾರೆಂಬ ಸುದ್ದಿ ಹರಿದಾಡಿತ್ತು. ಆದ್ರೀಗ ಬಾಲಕೃಷ್ಣ ಸ್ಟ್ರೈಟ್ ಫಾರ್ವರ್ಡ್ ಆಗಿ 'ಜೈಲರ್ 2' ಸಿನಿಮಾದಲ್ಲಿ ನಟಿಸುವುದಿಲ್ಲವೆಂದು ಹೇಳಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ ಟಾಲಿವುಡ್‌ನಲ್ಲಿ ಹಲವು ಕಾರಣಗಳನ್ನು ಪಟ್ಟಿ ಮಾಡಲಾಗಿದೆ.
'ಜೈಲರ್'ನಲ್ಲಿ ಅತಿಥಿ ಪಾತ್ರದಲ್ಲಿ ಶಿವಣ್ಣ, ಮೋಹನ್‌ಲಾಲ್, ಜಾಕಿಶ್ರಾಫ್ ಅಂತಹ ದಿಗ್ಗಜರು ನಟಿಸಿದ್ದರು. ಅದರಲ್ಲೂ ಶಿವಣ್ಣನ ಲುಕ್‌ಗೆ ತಮಿಳರು ಕಳೆದು ಹೋಗಿದ್ದರು. ಹೀಗಾಗಿ ಇದೇ ಫಾರ್ಮೂಲವನ್ನು ಮುಂದುವರೆಸಲು ನೆಲ್ಸನ್ ದಿಲೀಪ್ ಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಂದು ಮಹತ್ವದ ಪಾತ್ರದ ಬಾಲಕೃಷ್ಣರನ್ನು ಕರೆದುಕೊಂಡು ಬರುವುದಕ್ಕೆ ಮುಂದಾಗಿದ್ದರು. ಈ ಪಾತ್ರದಲ್ಲಿ ನಟಿಸುವುದಕ್ಕೆ ದಿನಕ್ಕೆ ₹2.5 ಕೋಟಿ ಸಂಭಾವನೆ ನೀಡುವುದಕ್ಕೆ ಮುಂದಾಗಿದ್ದರು ಎನ್ನಲಾಗಿದೆ. ಒಟ್ಟು ದಿನಗಳ ಚಿತ್ರೀಕರಣಕ್ಕೆ ₹50 ಕೋಟಿ ಸಂಭಾವನೆ ನೀಡುವುದಕ್ಕೂ ಒಪ್ಪಿದ್ದರು.
ಹೀಗಿದ್ದರೂ ಬಾಲಕೃಷ್ಣ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಕಿರಿಯ ಮಗಳು ತೇಜಸ್ವಿನಿ ಅತಿಥಿ ಪಾತ್ರದಲ್ಲಿ ನಟಿಸದಂತೆ ಸಲಹೆ ನೀಡಿದ್ದು, 'ಜೈಲರ್ 2' ತಿರಸ್ಕರಿಸುವುದಕ್ಕೆ ಕಾರಣವೆಂದು ಹೇಳಲಾಗಿದೆ. ಸದ್ಯ ಈ ಬಗ್ಗೆ ಇನ್ನೂ ಕ್ಲಾರಿಟಿ ಸಿಗಬೇಕಿದೆ.


Click it and Unblock the Notifications











