ಉಪ್ಪಿಯ 'ಯುಐ'ಗೂ ಕಿಚ್ಚನ 'ಮ್ಯಾಕ್ಸ್' ಒಂದು ವಾರದ ಅಂತರ ಅಷ್ಟೇನಾ? ಬುದ್ಧಿವಂತನಿಗೆ ಚಮಕ್ ಕೊಟ್ಟರೇ ಕಲೈಪುಲಿ?
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ ಸಿನಿಮಾ 'ಯುಐ' ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಇಷ್ಟೊತ್ತಿಗಾಗಲೇ ಬಿಡುಗಡೆಯಾಗಬೇಕಿದ್ದ 'ಯುಐ' ಸಿನಿಮಾ ತಾಂತ್ರಿಕ ಕಾರಣಗಳಿಂದ ತಡವಾಗಿತ್ತು. ಸಿನಿಮಾ ಎಲ್ಲಾ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿ ಡಿಸೆಂಬರ್ 20ಕ್ಕೆ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಕೆಲವು ದಿನಗಳ ಹಿಂದೆನೇ ಚಿತ್ರತಂಡ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ.
ಈ ಗ್ಯಾಪ್‌ನಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ಕೂಡ ರಿಲೀಸ್‌ಗೆ ರೆಡಿಯಾಗುತ್ತಿದೆ ಎನ್ನಲಾಗಿದೆ. ಕೇವಲ ಒಂದು ವಾರದ ಅಂತರದಲ್ಲಿ ಕಿಚ್ಚ ಸಿನಿಮಾ ರಿಲೀಸ್ ಆಗುತ್ತಿದೆ ಅನ್ನೋದು ಈಗ ಹಾಟ್ ಟಾಪಿಕ್. ಈ ಸಿನಿಮಾವನ್ನು ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ತನು ನಿರ್ಮಾಣ ಮಾಡಿದ್ದು, ಕ್ರಿಸ್‌ಮಸ್‌ಗೆ ಸಿನಿಮಾ ರಿಲೀಸ್ ಮಾಡಬೇಕು ಅಂತ ನಿರ್ಮಾಪಕರು ಪಟ್ಟು ಹಿಡಿದು ಕೂತಿದ್ದಾರೆ ಅನ್ನೋದು ಚಿತ್ರರಂಗದಲ್ಲಿ ಓಡಾಡುತ್ತಿರುವ ಸುದ್ದಿ.

ಈ ಎರಡು ಸಿನಿಮಾಗಳ ರಿಲೀಸ್ ಬಗ್ಗೆ ಕನ್ನಡ ಚಿತ್ರರಂಗದ ಒಳಗೊಳಗೆ ಚರ್ಚೆಯಾಗುತ್ತಿದೆ. ಹಿರಿಯ ನಿರ್ಮಾಪಕರು ಈ ಸಮಸ್ಯೆಯನ್ನು ಬಗೆ ಹರಿಸುವುದಕ್ಕೆ ಓಡಾಡುತ್ತಿದ್ದಾರೆ ಅಂತಲೂ ಸುದ್ದಿಯಿದೆ. ಹಾಗಿದ್ದರೆ ನಿಜಕ್ಕೂ 'ಮ್ಯಾಕ್ಸ್' ಡಿಸೆಂಬರ್ 25ಕ್ಕೆ ರಿಲೀಸ್ ಆಗುತ್ತಾ? 'ಯುಐ' ಸಿನಿಮಾಗೆ ಇದು ಎಫೆಕ್ಟ್ ಆಗುತ್ತಾ? ಕನ್ನಡ ಚಿತ್ರರಂಗದಲ್ಲಿ ಏನು ಹೇಳುತ್ತಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಹೌದು, ಸ್ಯಾಂಡಲ್‌ವುಡ್‌ನಲ್ಲಿ 'ಮ್ಯಾಕ್' ಸಿನಿಮಾ ಬಗ್ಗೆ ಬಿಸಿಬಿಸಿ ಚರ್ಚೆಯಂತೂ ನಡೆಯುತ್ತಿದೆ. ಇದೇ ಡಿಸೆಂಬರ್‌ಗೆ ಕಿಚ್ಚನ ಸಿನಿಮಾ ರಿಲೀಸ್ ಆಗೋದು ಪಕ್ಕಾ ಅಂತಲೇ ಭವಿಷ್ಯ ನುಡಿದಿದ್ದಾರೆ. ಎರಡು ದಿನಗಳ ಹಿಂದಷ್ಟೇ ಪೋಸ್ಟರ್ ಒಂದು ರಿಲೀಸ್ ಆಗಿದ್ದು, ಇಂದು (ಡಿಸೆಂಬರ್ 27) ಸಿನಿಮಾ ಬಗ್ಗೆ ಅಪ್‌ಡೇಟ್ ಅನೌನ್ಸ್ ಆಗುತ್ತಿದೆ. ರಿಲೀಸ್ ಬಗ್ಗೆ ಅನೌನ್ಸ್ ಆಗುತ್ತಾ? ಇಲ್ಲ ಟ್ರೈಲರ್ ಬಗ್ಗೆ ಮಾಹಿತಿ ಕೊಡುತ್ತಾರಾ? ಅನ್ನೋದು ಕೆಲವೇ ಗಂಟೆಗಲ್ಲಿ ಗೊತ್ತಾಗಲಿದೆ.

ಒಂದು ವೇಳೆ 'ಮ್ಯಾಕ್ಸ್' ಡಿಸೆಂಬರ್ 25ಕ್ಕೆ ರಿಲೀಸ್ ಆದರೆ 'ಯುಐ' ಸಿನಿಮಾಗೆ ಎಫೆಕ್ಟ್ ಆಗುತ್ತಾ? ಸಿನಿಮಾ ಮಂದಿ ಹೇಳುತ್ತಿರುವುದೇನು? 'ಮ್ಯಾಕ್ಸ್' ರಿಲೀಸ್ ನಿರ್ಮಾಪಕರ ವಲಯಕ್ಕೆ ತಲೆ ನೋವಾಗಿದೆಯೇ? ಚಿತ್ರರಂಗದ ಮೂಲಗಳ ಪ್ರಕಾರ ನಿರ್ಮಾಪಕರು ಮೊದಲು ಡಿಸೆಂಬರ್ 27ಕ್ಕೆ ರಿಲೀಸ್ ಮಾಡಬೇಕು ಅಂದುಕೊಂಡಿದ್ದರಂತೆ. ಬಳಿಕ ಕ್ರಿಸ್‌ಮಸ್ ರಜೆ ಇರುವುದರಿಂದ ಅಂದೇ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಿರ್ಮಾಪಕರು ಡಿಸೆಂಬರ್ 25ಕ್ಕೆ ರಿಲೀಸ್ ಮಾಡುವುದು ನಿಜವೇ ಆಗಿದ್ದರೆ, 'ಯುಐ'ಗೆ ಸಮಸ್ಯೆ ಆಗುವ ಸಾಧ್ಯತೆಯಿದೆ. ಫಿಲ್ಮ್ ಚೇಂಬರ್ ಕೂಡ ಬಿಗ್ ಸ್ಟಾರ್‌ಗಳ ಸಿನಿಮಾಗಳಿಗೆ ಎರಡು ವಾರ ಗ್ಯಾಪ್ ಕೊಟ್ಟು ಬರಬೇಕು ಅನ್ನುವ ಒಳ ಒಪ್ಪಂದ ಆಗಿದೆ. ಹೀಗಾಗಿ ಕಿಚ್ಚ ಸುದೀಪ್ ಜೊತೆ 'ಯುಐ' ಟೀಮ್ ಕೂಡ ಚರ್ಚೆ ಮಾಡುತ್ತಿದೆ ಅನ್ನುವ ಸುದ್ದಿಯಿದೆ. ಆದರೆ, 'ಮ್ಯಾಕ್ಸ್' ನಿರ್ಮಾಪಕರೇ ಒಪ್ಪುತ್ತಿಲ್ಲ ಅನ್ನೋದು ಸಿನಿಮಾ ಮಂದಿ ಬಾಯಲ್ಲಿ ಹರಿದಾಡುತ್ತಿದೆ.
ಇದೇ ವೇಳೆ 'ಯುಐ' ಹಾಗೂ 'ಮ್ಯಾಕ್ಸ್' ಎರಡೂ ಸಿನಿಮಾಗಳು ಒಂದು ವಾರದ ಅಂತರದಲ್ಲಿ ಬಂದರೆ ಸಮಸ್ಯೆ ಆಗುವುದಿಲ್ಲ. ಎರಡೂ ಸಿನಿಮಾಗಳಿಗೂ ಬೇಕಿರುವಷ್ಟು ಥಿಯೇಟರ್‌ಗಳು ಇವೆ. ಜೊತೆಗೆ ಹೊಸ ವರ್ಷ ಹಾಗೂ ಕ್ರಿಸ್‌ಮಸ್ ರಜೆ ಇರುವುದರಿಂದ ಎರಡೂ ಸಿನಿಮಾಗಳನ್ನು ನೋಡುವುದಕ್ಕೆ ಜನರು ಬರುತ್ತಾರೆ ಎಂಬ ಅಭಿಪ್ರಾಯ ವಿತರಕರ ವಲಯ ಹೇಳಿದೆಯಂತೆ. ಇಂತಹದ್ದೊಂದು ಸುದ್ದಿಯಂತೂ ಸ್ಯಾಂಡಲ್‌ವುಡ್‌ನಲ್ಲಿ ಓಡಾಡುತ್ತಿದೆ. ಆದರೆ, 'ಮ್ಯಾಕ್ಸ್' ರಿಲೀಸ್ ಬಗ್ಗೆ ಕಿಚ್ಚ ಸುದೀಪ್ ಆಗಲಿ, 'ಯುಐ' ತಂಡ ಆಗಲಿ ಅಧಿಕೃತವಾಗಿ ಎಲ್ಲೂ ಹೇಳಿಕೆ ಕೊಟ್ಟಿಲ್ಲ.


Click it and Unblock the Notifications











