ಶಿವಣ್ಣನ 131ನೇ ಸಿನಿಮಾ ಟೈಟಲ್ ಇದೇನಾ? ಟೀಸರ್‌ನಲ್ಲೇ ಇತ್ತಾ ಸುಳಿವು?
ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾ ಮಾಡುವಷ್ಟು ವೇಗವಾಗಿ ಮತ್ಯಾವುದೇ ಹೀರೋ ಮಾಡಿದ್ದು ಯಾರು ನೋಡಿಲ್ಲ. ವಯಸ್ಸು 62 ಆದರೂ ಶಿವಣ್ಣ ಎನರ್ಜಿಯನ್ನು ಬೀಟ್ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಯಾವ ಹೀರೋ ಸಿನಿಮಾ ಬಾರದೆ ಹೋದರೂ ಶಿವಣ್ಣನ ಎರಡು ಸಿನಿಮಾ ರಿಲೀಸ್ ಆಗುತ್ತೆ ಅನ್ನೋದು ಚಿತ್ರರಂಗದ ನಂಬಿಕೆ.
ಹೀಗಿರುವಾಗ ಶಿವಣ್ಣನಿಗೆ ಹುಷಾರಿಲ್ಲ ಅಂತ ಗೊತ್ತಾದಾಗ ಚಿತ್ರರಂಗ ಕಂಗಾಲಾಗಿತ್ತು. ಶಿವಣ್ಣ ಜೊತೆ ಸಿನಿಮಾ ಮಾಡಬೇಕು ಅಂತ ಕನಸು ಕಂಡವರು ಕುಗ್ಗಿ ಹೋಗಿದ್ದರು. ಇನ್ನು ಈಗಾಗಲೇ ಸಿನಿಮಾ ಮಾಡುತ್ತಿರುವವರು ಗಾಬರಿ ಬಿದ್ದಿದ್ದರು. ಆದರೆ, ಕರುನಾಡ ಚಕ್ರವರ್ತಿ ಫೈಟರ್. ಕ್ಯಾನ್ಸರ್ ವಿರುದ್ಧ ಗೆದ್ದು ಬರುತ್ತೇನೆ ಅನ್ನೋದು ಅಚಲ ಧೈರ್ಯವಿತ್ತು. ಶಿವಣ್ಣ ಶಸ್ತ್ರ ಚಿಕಿತ್ಸೆ ಬಳಿಕ ಕ್ಯಾನ್ಸರ್ ಫ್ರೀಯಾಗಿ ಬೆಂಗಳೂರಿಗೆ ಕಾಲಿಟ್ಟಿದ್ದಾರೆ.

ಅದ್ಯಾವಾಗ ಶಿವಣ್ಣ ಬೆಂಗಳೂರಿಗೆ ಕಾಲಿಟ್ಟರೋ ಅಲ್ಲಿಂದ ಅವರ ಸಿನಿಮಾ ಚಟುವಟಿಕೆಗಳು ಕೂಡ ಚುರುಕಾಗುವುದಕ್ಕೆ ಶುರುವಾಗಿದೆ. ಗಾಂಧಿನಗರದ ಮಂದಿ ಶಿವಣ್ಣನ ಸಿನಿಮಾಗಳ ಬಗ್ಗೆ ಮಾತಾಡುವುದಕ್ಕೆ ಶುರು ಮಾಡಿದ್ದಾರೆ. ಸದ್ಯ ಗಾಂಧಿನಗರದ ಗಲ್ಲಿಯಲ್ಲೊಂದು ಸುದ್ದಿ ಹರಿದಾಡುವುದಕ್ಕೆ ಶುರುವಾಗಿದೆ. ಅದು ಶಿವಣ್ಣನ 131ನೇ ಸಿನಿಮಾದ ಟೈಟಲ್. ಒಂದ್ವೇಳೆ ಸಿನಿಮಾದ ಟೈಟಲ್ ಅದೇ ಆಗಿದ್ದರೆ, ಹ್ಯಾಟ್ರಿಕ್ ಹೀರೋ ಫ್ಯಾನ್ಸ್‌ಗೆ ಹಬ್ಬವೇ ಸರಿ.
ಶಿವಣ್ಣ ಯುಎಸ್‌ಎನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದಕ್ಕೂ ಮುನ್ನ ಕೆಲವು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದರಲ್ಲಿ 131ನೇ ಸಿನಿಮಾ ಕೂಡ ಒಂದು. ಈ ಸಿನಿಮಾದ ಚಿತ್ರೀಕರಣ ಇನ್ನೂ ನಡೆಯುತ್ತೆ. ಅಷ್ಟರಲ್ಲೇ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಶಿವಣ್ಣ ಶೂಟಿಂಗ್ ಅನ್ನು ನಿಲ್ಲಿಸಿದ್ದರು. ಇನ್ನು ಒಂದು ತಿಂಗಳು ವಿಶ್ರಾಂತಿ ಪಡೆದ ಬಳಿಕ ಮತ್ತೆ ಆ ಸಿನಿಮಾ ಶುರುವಾಗಲಿದೆ. ಅದಕ್ಕೆ ಬೇಕಿರುವ ಸಕಲ ಸಿದ್ಧತೆಗಳನ್ನು ಚಿತ್ರತಂಡ ಮಾಡಿಕೊಳ್ಳುತ್ತಿದೆ.
ಶಿವಣ್ಣನ 131ನೇ ಸಿನಿಮಾಗೆ ಕಾರ್ತಿಕ್ ಅದ್ವೈತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಶಿವಣ್ಣ ಕ್ಯಾರೆಕ್ಟರ್ ಹಾಗೂ ಲುಕ್ ಅನ್ನು ರಿವೀಲ್ ಮಾಡುವುದಕ್ಕೆ ಒಂದು ಟೀಸರ್ ಅನ್ನು ರಿಲೀಸ್ ಮಾಡಿದ್ದರು. ಆ ಟೀಸರ್ ಶಿವಣ್ಣ ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಟ್ಟಿತ್ತು. ಆದರೆ, ಚಿತ್ರತಂಡ ಟೈಟಲ್ ಅನ್ನು ರಿವೀಲ್ ಮಾಡಿರಲಿಲ್ಲ. ಈಗ ಗಾಂಧಿನಗರದಲ್ಲಿ ಈ ಸಿನಿಮಾ ಟೈಟಲ್ ಬಗ್ಗೆ ಚರ್ಚೆ ಮಾಡುತ್ತಿದೆ. 131ನೇ ಸಿನಿಮಾ ತಂಡದಲ್ಲಿ ಈ ಟೈಟಲ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆಯಂತೆ. ಬಹುತೇಕ ಎಲ್ಲರಿಗೂ ಇಷ್ಟ ಆಗಿದೆ ಅನ್ನೋ ಸುದ್ದಿ ಹರಿದಾಡುವುದಕ್ಕೆ ಶುರು ಮಾಡಿದೆ.

ಅಂದ್ಹಾಗೆ, ಗಾಂಧಿನಗರದ ಮಂದಿಯ ಬಾಯಿಯಲ್ಲಿ ಓಡಾಡುತ್ತಿರುವ ಆ ಟೈಟಲ್ ಯಾವುದು ಅಂದ್ರೆ 'ಬಂದ ನನ್ನ ರಾಜ'. ಹೌದು, ಶಿವಣ್ಣ ನಟಿಸುತ್ತಿರುವ 131ನೇ ಸಿನಿಮಾದ ಟೈಟಲ್ 'ಬಂದ ನನ್ನ ರಾಜ' ಅಂತ ಇಡುವುದಕ್ಕೆ ಚಿತ್ರತಂಡದಲ್ಲಿ ಚರ್ಚೆ ನಡೆಯುತ್ತಿದೆಯಂತೆ. ಸಿನಿಮಾ ನಿರ್ಮಾಪಕ ಸುಧೀರ್ ಸೇರಿದಂತೆ ಎಲ್ಲರಿಗೂ ಈ ಟೈಟಲ್ ಇಷ್ಟ ಆಗಿದೆಯಂತೆ. ಅದರಲ್ಲೂ ಅಣ್ಣಾವ್ರ ಹೆಸರು ಬರುವುದರಿಂದ ಎಲ್ಲಾ ವರ್ಗಕ್ಕೂ ಇಷ್ಟ ಆಗುತ್ತೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆತಂತೆ. ಆದರೆ, ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಎಲ್ಲೂ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಈಗಾಗಲೇ ಶಿವಣ್ಣನ ರೋಲ್ ಹೇಗಿರುತ್ತೆ ಅನ್ನೋದಕ್ಕೊಂದು ಬಿಲ್ಡಪ್ ಟೀಸರ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿತ್ತು. ಒಂದು ವೇಳೆ 'ಬಂದ ನನ್ನ ರಾಜ' ಅನ್ನೋ ಟೈಟಲ್ ಆಗಿದ್ದರೆ, ಅದನ್ನು ಟೀಸರ್‌ನಲ್ಲಿಯೇ ಸುಳಿವು ನೀಡಲಾಗಿದೆ. ಪೊಲೀಸ್ ಕೇಳುವ ಪ್ರಶ್ನೆಗೆ ಅಚ್ಯುತ್ ರಾವ್ ಒಂದು ಡೈಲಾಗ್ ಹೊಡೆಯುತ್ತಾರೆ. "ಕರ್ನಾಟಕಕ್ಕೆ ಬಂದು ಅವನ ಬಗ್ಗೆ ಗೊತ್ತಿಲ್ಲ ಅಂದರೆ, ಕಾಡಿಗೆ ಬಂದು ಕಾಡಿನ ರಾಜ ಯಾರು ಅಂತ ಕೇಳಿದ ಹಾಗಾಯ್ತು" ಎಂದು ಎನ್ನುತ್ತಾರೆ. ಬಹುಶ: ಈ ಡೈಲಾಗ್‌ಗೂ ಸಿನಿಮಾಗೂ ಟೈಟಲ್‌ಗೂ ಒಂದು ಲಿಂಕ್ ಅಂತೂ ಇರಬಹುದು. ಇನ್ನು ಕೊನೆಯಲ್ಲಿ "ಈ ಸ್ಮಾಲ್ ವೆಪನ್ ಅನ್ನು ಸ್ಮಾಲೆಸ್ಟ್ ಟೈಮ್ ಹಿಡ್ಕೊಂಡಿರೋರು ನೀವು.. ಆ ಲಾಂಗ್ ಅನ್ನು ಲಾಂಗೆಸ್ಟ್ ಟೈಮ್ ಹಿಡ್ಕೊಂಡಿರೋನು ಅವನು. ನೀವು ಅವನನ್ನು ಹಿಡಿಯುತ್ತೀರಾ?" ಅನ್ನೋ ಡೈಲಾಗ್ ಈ ಸಿನಿಮಾ ಭೂಗತಲೋಕದ ಕಥೆ ಹೇಳುತ್ತಿದೆಯಾ? ಅನ್ನೋ ಪ್ರಶ್ನೆಯನ್ನು ಹುಟ್ಟಾಕುತ್ತೆ.


Click it and Unblock the Notifications











