ಬಾಹುಬಲಿಯ ಕಟ್ಟಪ್ಪ ಯಾರು? ವಿಜಯೇಂದ್ರ-ರಾಜಮೌಳಿ ತಲೆಯಲ್ಲಿ ಏನು ಓಡ್ತಿದೆ?
ದಕ್ಷಿಣ ಭಾರತಕ್ಕೆ ಮತ್ತೆ ಪ್ಯಾನ್ ಇಂಡಿಯಾ ಹುಚ್ಚು ಹಿಡಿಸಿದ ಸಿನಿಮಾ 'ಬಾಹುಬಲಿ'. ಎಸ್.ಎಸ್ ರಾಜಮೌಳಿ ಹಾಗೂ ವಿಜಯೇಂದ್ರ ಪ್ರಸಾದ್ ಕಾಂಬಿನೇಷನ್‌ನಲ್ಲಿ ಸಿದ್ದವಾಗಿದ್ದ ಈ ಕಥೆ ಇಡೀ ಭಾರತದಾದ್ಯಂತ ಸದ್ದು ಮಾಡಿತ್ತು. ಬಾಕ್ಸಾಫೀಸ್ ಅನ್ನೇ ನಡುಗಿಸಿತ್ತು. ಅದೇ ಸಿನಿಮಾದ ಹಲವು ಪಾತ್ರಗಳು ಇಂದಿಗೂ ಜನರ ಮನಸ್ಸಿನಲ್ಲಿ ಹಾಗೇ ಉಳಿದಿದೆ.
ರಾಜಮೌಳಿ ಹಾಗೂ ವಿಜಯೇಂದ್ರ ಪ್ರಸಾದ್ ಜೋಡಿಯ ಸ್ಕ್ರೀಪ್ಟ್ ಇದೂವರೆಗೂ ಸೋತಿದ್ದೇ ಇಲ್ಲ. ಒಂದೊಂದು ಸಿನಿಮಾವೂ ದಾಖಲೆ ಬರೆದಿದೆ. ಹೀಗಾಗಿ ಅಪ್ಪ-ಮಗನ ಜುಗಲ್‌ಬಂಧಿ ಏನಾದರೂ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತೆ. ಈಗ ಟಾಲಿವುಡ್ ಅಂಗಳದಲ್ಲಿ ಮತ್ತೊಂದು ಸುದ್ದಿಯೊಂದು ಓಡಾಡುತ್ತಿದೆ. 'ಬಾಹುಬಲಿ' ಸಿನಿಮಾದಲ್ಲಿ ಕಟ್ಟಪ್ಪನ ಪಾತ್ರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಮೊದಲನೇ ಪಾರ್ಟ್‌ನ ಕ್ಲೈಮ್ಯಾಕ್ಸ್ ಸೀನ್ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಅದಕ್ಕೆ ಕಾರಣ ಇದೇ ಕಟ್ಟಪ್ಪನ ಪಾತ್ರ.

ರಾಜಮೌಳಿ ತೆರೆಮೇಲೆ ಕಥೆ ಹೇಳುವ ಶೈಲಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತೆ. ವಿಜಯೇಂದ್ರ ಪ್ರಸಾದ್ ಹಾಗೂ ರಾಜಮೌಳಿ ಕಾಂಬಿನೇಷನ್‌ನ ಸೀಕ್ರೆಟ್ ಫಾರ್ಮೂಲವನ್ನು ಇಂದಿಗೂ ಯಾರಿಗೂ ಗೊತ್ತಾಗಿಲ್ಲ. ಈಗ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಮತ್ತೊಂದು ಸುದ್ದಿ ಎಂದರೆ, ವಿಜಯೇಂದ್ರ ಪ್ರಸಾದ್ 'ಕಟ್ಟಪ್ಪ'ನ ಕುರಿತು ಕಥೆಯನ್ನು ಹೆಣೆಯುತ್ತಿದ್ದಾರಂತೆ. 'ಕಟ್ಟಪ್ಪ' ಹಿನ್ನೆಲೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡುವ ಆಲೋಚನೆ ಅನ್ನೋ ಸುದ್ದಿ ಓಡಾಡುತ್ತಿದೆ.
ಸಾಮಾನ್ಯವಾಗಿ ಹಾಲಿವುಡ್, ಫ್ರೆಂಚ್, ಕೊರಿಯನ್ ಸಿನಿಮಾಗಳಲ್ಲಿ ಇಂತಹ ಪ್ರಯೋಗವನ್ನು ನೋಡಬಹುದು. ಒಂದು ಮೆಗಾ ಹಿಟ್ ಸಿನಿಮಾ ಅಥವಾ ಸೀರಿಸ್‌ನ ಪ್ರಮುಖ ಪಾತ್ರಗಳನ್ನೇ ಇಟ್ಟುಕೊಂಡು ಪ್ರತ್ಯೇಕವಾಗಿ ಸಿನಿಮಾ ಮಾಡಲಾಗುತ್ತೆ. ಉದಾಹರಣೆಗೆ 'ಅವೆಂಜರ್ಸ್' ಸೀರಿಸ್‌ನ ಐರನ್ ಮ್ಯಾನ್, ಕ್ಯಾಪ್ಟನ್ ಅಮೆರಿಕ, ಹಲ್ಕ್, ಸ್ಪೈಡರ್ ಮ್ಯಾನ್, ಥಾರ್ ಅಂತ ಪಾತ್ರಗಳನ್ನು ಇಟ್ಟುಕೊಂಡು ಪ್ರತ್ಯೇಕವಾಗಿ ಕಥೆ ಹೆಣೆದು ಸಿನಿಮಾವನ್ನು ಮಾಡಲಾಗಿದೆ.
ಇದೇ ಪ್ಲಾನ್ ಅನ್ನು ವಿಜಯೇಂದ್ರ ಪ್ರಸಾದ್ ಮಾಡುತ್ತಿದ್ದಾರೆ ಅನ್ನೋದು ಸದ್ಯಕ್ಕೆ ಟಾಲಿವುಡ್‌ನಲ್ಲಿ ಹಬ್ಬಿರುವ ಸುದ್ದಿ. 'ಬಾಹುಬಲಿ' ಸಿನಿಮಾ ಪ್ರಮುಖ ಪಾತ್ರಗಳಲ್ಲಿ ಒಂದಾದ 'ಕಟ್ಟಪ್ಪ' ಕಥೆಯನ್ನು ತೆರೆಮೇಲೆ ತರುವುದಕ್ಕೆ ತೆರೆಮರೆಯಲ್ಲಿ ಸಾಹಸ ನಡೆಯುತ್ತಿದೆ ಎನ್ನುವ ಮಾತುಗಳು ಹೇಳಿಬರುತ್ತಿವೆ. ಈಗಾಗಲೇ ಕಥೆ ಹೆಣೆಯುವುದಕ್ಕೂ ವಿಜಯೇಂದ್ರ ಪ್ರಸಾದ್ ಆರಂಭಿಸಿದ್ದಾರೆ ಎನ್ನಲಾಗಿದೆ.

'ಬಾಹುಬಲಿ'ಯಲ್ಲಿ ಮಹೇಂದ್ರ ಬಾಹುಬಲಿ, ಬಲ್ಲಾಳದೇವ, ದೇವಸೇನಾದಂತಹ ಪಾತ್ರಗಳು ಎಷ್ಟು ಸದ್ದು ಮಾಡಿದ್ದವೋ ಅಷ್ಟೇ 'ಕಟ್ಟಪ್ಪ' ಪಾತ್ರವೂ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. 'ಬಾಹುಬಲಿ' ಮೊದಲ ಪಾರ್ಟ್‌ದಲ್ಲಿ "ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?" ಎಂಬ ಪ್ರಶ್ನೆ ಪಾರ್ಟ್ 2 ನೋಡುವುದಕ್ಕೆ ಟ್ರಂಪ್ ಕಾರ್ಡ್ ಆಗಿ ಬಳಕೆಯಾಗಿತ್ತು. ಹೀಗಾಗಿ ಕಟ್ಟಪ್ಪನ ಪಾತ್ರವನ್ನೇ ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ನಿರ್ದೇಶಕ ರಾಜಮೌಳಿ ಮತ್ತು ಲೇಖಕ ವಿಜಯೇಂದ್ರ ಪ್ರಸಾದ್ ಸ್ಕೆಚ್ ಹಾಕಿರೋ ಬಗ್ಗೆ ವರದಿಗಳಾಗಿವೆ.
ಈ ಸಿನಿಮಾದಲ್ಲಿ ಕಟ್ಟಪ್ಪ ಸಂಪೂರ್ಣ ಹಿನ್ನೆಲೆಯನ್ನು ತೆರೆದಿಡಲು ನಿರ್ಧರಿಸಲಾಗಿದೆಯಂತೆ. ಕಟ್ಟಪ್ಪ ಯಾರು? ಮಹಿಷ್ಮತಿ ಸಾಮ್ರಾಜ್ಯಕ್ಕೂ ಇವನಿಗೂ ಏನು ಸಂಬಂಧ? ಈ ಸಾಮ್ರಾಜ್ಯದಲ್ಲಿ ಕಟ್ಟಪ್ಪ ಗುಲಾಮನಾಗಿ ಇರೋದು ಯಾಕೆ? ಅವರ ಕುಟುಂಬದ ಹಿನ್ನೆಲೆಯೇನು? ಮಹಿಷ್ಮತಿ ಸಾಮ್ರಾಜ್ಯದ ಮೇಲೆ ಅಷ್ಟೊಂದು ನಿಷ್ಠೆ ಯಾಕೆ? ಅನ್ನೋದನ್ನು ಈ ಸಿನಿಮಾದಲ್ಲಿ ವಿವರಿಸಲಾಗುತ್ತೆ ಎನ್ನಲಾಗಿದೆ.
ಇನ್ನೊಂದು ಮೂಲದ ಪ್ರಕಾರ, ಕಟ್ಟಪ್ಪ ಸಿನಿಮಾದ ಕಥೆ ಈಗಾಗಲೇ ಸಿದ್ಧವಾಗಿದೆ. ಶೀಘ್ರದಲ್ಲಿಯೇ ಸಿನಿಮಾದ ಶೂಟಿಂಗ್ ಕೂಡ ಆರಂಭ ಆಗುತ್ತೆ ಎಂದು ಗುಲ್ಲೆದ್ದಿದೆ. ಸದ್ಯ ಸೆಟ್ಟಿನ ವಿನ್ಯಾಸ, ಕಾಸ್ಟ್ಯೂಮ್, ಪಾತ್ರಗಳ ಆಯ್ಕೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಈ ಸಿನಿಮಾವನ್ನು ರಾಜಮೌಳಿಯೇ ನಿರ್ಮಾಣ ಮಾಡುತ್ತಾರಾ? ಇಲ್ಲ ಬೇರೆ ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಾರಾ? ಎನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲ.


Click it and Unblock the Notifications











