'ಮ್ಯಾಕ್ಸ್' ಸಿನಿಮಾಗೆ ಪ್ರೇರಣೆ ಹಾಲಿವುಡ್‌ನ ಐಕಾನಿಕ್ ಸಿನಿಮಾದ ಫೇಮಸ್ ಪಾತ್ರ? ಯಾವುದು ಅದು?
2024 ವರ್ಷದ ಕೊನೆಯಲ್ಲಿ ಎರಡು ಕನ್ನಡ ಸಿನಿಮಾಗಳು ಬೇಜಾನ್ ಸದ್ದು ಮಾಡುತ್ತಿವೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಯುಐ'. ಇನ್ನೊಂದು ಕಡೆ ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್'. ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತವೆ ಅನ್ನೋ ಅಭಿಪ್ರಾಯ ಕನ್ನಡ ಚಿತ್ರರಂಗದಲ್ಲಿ ವ್ಯಕ್ತವಾಗುತ್ತಿದೆ. 'ಯುಐ' ಹಾಗೂ 'ಮ್ಯಾಕ್ಸ್' ಈ ಎರಡೂ ಸಿನಿಮಾಗಳು ನಿರೀಕ್ಷೆ ಹುಟ್ಟಾಕುವುದಕ್ಕೆ ಅದರದ್ದೇ ಆದ ಕಾರಣವಿದೆ.
ಉಪ್ಪಿ ಹೆಚ್ಚು ಕಡಿಮೆ 10 ವರ್ಷಗಳ ಬಳಿಕ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ. ಹೀಗಾಗಿ ವಿಭಿನ್ನವಾದ ಸಿನಿಮಾವನ್ನು ನೋಡಬಹುದು ಅನ್ನೋ ನಂಬಿಕೆ ಪ್ರೇಕ್ಷಕರಲ್ಲಿದೆ. ಐದು ದಿನದ ಅಂತರದಲ್ಲಿ ರಿಲೀಸ್ ಆಗುತ್ತಿರುವ ಕಿಚ್ಚ ಸುದೀಪ್ 'ಮ್ಯಾಕ್ಸ್' ಕೂಡ ಅಷ್ಟೇ ಸದ್ದು ಮಾಡುತ್ತಿದೆ. ಯಾಕಂದ್ರೆ 'ವಿಕ್ರಾಂತ್ ರೋಣ' ಆದ್ಮೇಲೆ ರಿಲೀಸ್ ಆಗುತ್ತಿರುವ ಸುದೀಪ್ ಸಿನಿಮಾವಿದು.

ಸದ್ಯಕ್ಕೀಗ 'ಮ್ಯಾಕ್ಸ್' ಅಭಿಮಾನಿಗಳ ಕುತೂಹಲವನ್ನು ಕೆರಳಿಸುವ ಸುದ್ದಿಯೊಂದು ಕನ್ನಡ ಚಿತ್ರರಂಗದಲ್ಲಿ ಓಡಾಡುತ್ತಿದೆ. 'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಮತ್ತಷ್ಟು ಸೈಲಿಷ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಪ್ರಿಯರಿಗೆ ಸಖತ್ ಸ್ಟೈಲಿಷ್ ಆಗಿರುವ ಸಿನಿಮಾವನ್ನು ನೀಡುವುದಕ್ಕೆ ಮುಂದಾಗಿದ್ದು, ಕಿಚ್ಚನ ಮ್ಯಾನರಿಸಂ ಹೈಲೈಟ್ ಆಗಲಿದೆಯಂತೆ. ಈ ಸಿನಿಮಾವನ್ನು ಹಾಲಿವುಡ್‌ನ ಒಂದು ಫೇಮಸ್ ಸಿನಿಮಾದ ಪಾತ್ರದಿಂದ ಪ್ರೇರಣೆ ಪಡೆದು ಕಥೆ ಹೆಣೆಯಲಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಹಾಗಿದ್ದರೆ ಆ ಸಿನಿಮಾ ಯಾವುದು? ತಿಳಿಯುವುದಕ್ಕೆ ಮುಂದೆ ಓದಿ.
ಹೌದು, ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಇರುವಾಗಲೇ 'ಮ್ಯಾಕ್ಸ್' ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಓಡಾಡುತ್ತಿವೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ 'ಮ್ಯಾಕ್ಸ್' ವಿಶ್ವವೇ ಮೆಚ್ಚಿದ ಹಾಲಿವುಡ್ ಸಿನಿಮಾದ ಜನಪ್ರಿಯರ ನಾಯಕನ ಪಾತ್ರದಿಂದ ಪ್ರೇರಿತರಾಗಿ ನಿರ್ದೇಶಕರು ಕತೆ ಹೆಣೆದಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಹೀಗಾಗಿ ಸುದೀಪ್ ಸ್ಟೈಲ್, ಮ್ಯಾನರಿಸಂ ನೋಡುವುದೇ ಅಭಿಮಾನಿಗಳ ಕಣ್ಣಿಗೆ ಹಬ್ಬ ಎಂದು ಹೇಳಲಾಗುತ್ತಿದೆ.

ಅಂದ್ಹಾಗೆ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಹಲವು ಹಾಲಿವುಡ್ ಸಿನಿಮಾಗಳಿವೆ. ಆ ಸಿನಿಮಾಗಳು ಹಲವು ಸರಣಿಗಳಾಗಿ ರಿಲೀಸ್ ಆಗಿವೆ. ಇಂತಹದ್ದೇ ಒಂದು ಸಿನಿಮಾ 'ಪೈರೆಟ್ಸ್ ಆಫ್ ದಿ ಕೆರಿಬಿಯನ್'. ಜಾನಿ ಡೆಪ್ ಈ ಸಿನಿಮಾದಲ್ಲಿ ಜಾಕ್ ಸ್ಪಾರೋ ಅನ್ನುವ ಪಾತ್ರದಲ್ಲಿ ನಟಿಸಿದ್ದರು. ಈ ಜಾಕ್ ಸ್ಪಾರೋ ಕ್ಯಾರೆಕ್ಟರ್ ಇಂದಿಗೂ ಸಿನಿಮಾ ಪ್ರಿಯರ ಫೇವರಿಟ್. ಇದೇ ಪಾತ್ರದಿಂದ ಪ್ರೇರಣೆ ಪಡೆದು ಈ ಸಿನಿಮಾವನ್ನು ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಹಾಗಂತ ಮಾತ್ರಕ್ಕೆ 'ಪೈರೆಟ್ಸ್ ಆಫ್ ದಿ ಕೆರಿಬಿಯನ್' ಸಿನಿಮಾದ ರೀಮೇಕ್ ಅಲ್ಲ. ಇಲ್ಲ ಜಾಕ್ ಸ್ಪಾರೋ ಪಾತ್ರದಂತೆ ಕಿಚ್ಚ ಸುದೀಪ್ ಪಾತ್ರನೂ ಇರುತ್ತೆ ಅಂತಲ್ಲ. ಈ ಪಾತ್ರ 'ಮ್ಯಾಕ್ಸ್' ಸಿನಿಮಾದ ಕಥೆ ಹುಟ್ಟಿಕೊಳ್ಳುವುದಕ್ಕೆ ಪ್ರೇರಣೆ ಎಂಬುದು ಚಿತ್ರರಂಗದಲ್ಲಿ ಹರಿದಾಡುತ್ತಿರುವ ಸುದ್ದಿ. ಈ ಬಗ್ಗೆ ಕಿಚ್ಚ ಸುದೀಪ್ ಆಗಲಿ, ಚಿತ್ರತಂಡ ಆಗಲಿ ಕನ್ಫರ್ಮ್ ಮಾಡಿಲ್ಲ. ಹೀಗಾಗಿ ಇದು ಕೇವಲ ಸಿನಿಮಾ ಮಂದಿ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿ ಅಷ್ಟೇ.
ಹಾಗೇ 'ಮ್ಯಾಕ್ಸ್' ಸಿನಿಮಾ ಪ್ರೇಕ್ಷಕರಿಗೆ ಸಖತ್ ಎಂಟರ್‌ಟೈನ್ಮೆಂಟ್ ಕೊಡುತ್ತೆ ಅನ್ನೋ ಭರವಸೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಾ ವರ್ಗಕ್ಕೂ ಇಷ್ಟ ಆಗುವಂತಹ ಕಥೆಯನ್ನು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಹೆಣೆದಿದ್ದಾರೆ. ಇದು ಕಿಚ್ಚ ಸುದೀಪ್ ಅಭಿಮಾನಿಗಳಿಗಂತೂ ಸಿಕ್ಕಾಪಟ್ಟೆ ಇಷ್ಟ ಆಗುತ್ತಿದೆ ಅನ್ನೋ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಏನಕ್ಕೂ ಡಿಸೆಂಬರ್ 25ಕ್ಕೆ ರಿಲೀಸ್ ಆಗುತ್ತಿರುವ ಈ ಸಿನಿಮಾ ಅದೆಷ್ಟು ಮೋಡಿ ಮಾಡುತ್ತೆ ಅನ್ನೋದು ನೋಡಬೇಕಿದೆ.


Click it and Unblock the Notifications











