ಪ್ರದೀಪ್, ಲೋಕೇಶ್ ಅಲ್ಲ; ರಜನಿ- ಕಮಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋದು ಇವ್ರೇ?
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ದಶಕಗಳ ಬಳಿಕ ಒಟ್ಟಿಗೆ ನಟಿಸಲು ಒಪ್ಪಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿದೆ. ತಮ್ಮದೇ ಬ್ಯಾನರ್ ಅಡಿಯಲ್ಲಿ ಕಮಲ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಯಾರು ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.
ಬರೋಬ್ಬರಿ 46 ವರ್ಷಗಳ ಬಳಿಕ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಇದು ಮೆಗಾ ಮಲ್ಟಿಸ್ಟಾರರ್ ಸಿನಿಮಾ ಆಗಲಿದೆ. ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಇಬ್ಬರೂ ಚಿತ್ರರಂಗ ಪ್ರವೇಶಿಸಿದ್ದರು. ಆರಂಭದಲ್ಲಿ ಒಟ್ಟಿಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ಸುದ್ದಿಗೋಷ್ಠಿ ಕರೆದು ಇನ್ನು ಮುಂದೆ ನಾವಿಬ್ಬರು ಒಟ್ಟಿಗೆ ನಟಿಸಲ್ಲ ಎಂದು ಘೋಷಿಸಿದ್ದರು. ರಾಜಕೀಯವಾಗಿ ಸೈದ್ದಾಂತಿಕವಾಗಿ ಇಬ್ಬರದ್ದು ಬೇರೆ ಬೇರೆ ನಿಲುವು. ಈ ಕಾರಣಕ್ಕೆ ಕೂಡ ಇಬ್ಬರು ಇತ್ತೀಚೆಗೆ ಒಟ್ಟಿಗೆ ನಟಿಸಲಿಲ್ಲ ಎನ್ನುವವರು ಇದ್ದಾರೆ.

ಕಮಲ್, ರಜನಿಕಾಂತ್ ಆತ್ಮೀಯ ಸ್ನೇಹಿತರು. ಇಬ್ಬರು ಒಟ್ಟಿಗೆ ಸಿನಿಮಾ ಎನ್ನುವ ಕಾರಣ ಕೊಟ್ಟು ಇಬ್ಬರಿಗೂ ಕಮ್ಮಿ ಸಂಭಾವನೆ ಕೊಡುತ್ತಿದ್ದರು. ಇದನ್ನು ಮನಗಂಡು ಇನ್ನು ಮುಂದೆ ಒಟ್ಟಿಗೆ ನಟಿಸುವುದು ಬೇಡ ಎಮದು 4 ದಶಕಗಳ ಹಿಂದೆ ಇಬ್ಬರೂ ನಿರ್ಧರಿಸಿದ್ದರು. ಬಳಿಕ ತಮ್ಮದೇ ಹಾದಿಯಲ್ಲಿ ಸ್ಟಾರ್ ನಟರಾಗಿ ಬೆಳೆದರು, ಅದಕ್ಕೆ ತಕ್ಕಂತೆ ಸಂಭಾವನೆ ಹೆಚ್ಚಿಸಿಕೊಂಡು ಬಂದರು.
'ಕೂಲಿ' ಸಿನಿಮಾ ಬಳಿಕ ರಜನಿಕಾಂತ್- ಕಮಲ್ ಮಲ್ಟಿಸ್ಟಾರರ್ ಸಿನಿಮಾ ಸುದ್ದಿ ಬಂದಿದೆ. ಲೋಕೇಶ್ ಕನಕರಾಜ್ ಈ ಚಿತ್ರ ನಿರ್ದೇಶನ ಮಾಡುತ್ತಾರೆ ಎಂದು ಕೆಲವರು ಭಾವಿಸಿದ್ದರು. ಆದರೆ ಅದು ನಿಜ ಅಲ್ಲ ಎನ್ನಲಾಗ್ತಿದೆ. ಯುವ ನಿರ್ದೇಶಕ ಪ್ರದೀಪ್ ರಂಗನಾಥನ್ ಸಾರಥ್ಯ ವಹಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಸುಂದರ್ ಸಿ ಹೆಸರು ಕೇಳಿಬಂದಿತ್ತು.

ಬಹಳ ವರ್ಷಗಳ ಬಳಿಕ ರಜನಿಕಾಂತ್ ಚಿತ್ರಕ್ಕೆ ಸುಂದರ್ ಸಿ ಆಕ್ಷನ್ ಕಟ್ ಹೇಳುವುದು ಖಚಿತವಾಗಿದೆ. ಆದರೆ ಅದು ಬೇರೆಯದ್ದೇ ಸಿನಿಮಾ ಎನ್ನಲಾಗ್ತಿದೆ. ರಜನಿ- ಕಮಲ್ ನಟಿಸುವ ಚಿತ್ರವನ್ನು ನೆಲ್ಸನ್ ನಿರ್ದೇಶನ ಮಾಡುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. 'ಜೈಲರ್' ಬಳಿಕ ಅವರು ರಜನಿಕಾಂತ್ ಕಾಂಬಿನೇಷನ್ ಸೀಕ್ವೆಲ್ ಮಾಡುತ್ತಿದ್ದಾರೆ.
ಕಮಲ್-ರಜನಿ ನಟಿಸಲು ಒಂದು ಕಥೆಯನ್ನು ನೆಲ್ಸನ್ ಸಿದ್ಧಪಡಿಸಿದ್ದಾರಂತೆ. ಅದನ್ನು ಕೇಳಿ ತಲೈವಾ ಕೂಡ ಖುಷಿಯಾಗಿದ್ದು ಪ್ರಾಜೆಕ್ಟ್ ಫೈನಲ್ ಆಗುವುದು ಖಚಿತ ಎನ್ನುವ ಗುಸುಗುಸು ಶುರುವಾಗಿದೆ. ಆಕ್ಷನ್ ಜೊತೆ ಕಾಮಿಡಿ ಬೆರಸಿ ಸಿನಿಮಾ ಮಾಡುವುದರಲ್ಲಿ ನೆಲ್ಸನ್ ನಿಸ್ಸೀಮರು. 'ಕೊಲಮಾವು ಕೋಕಿಲ', 'ಡಾಕ್ಟರ್', 'ಬೀಸ್ಟ್' ಬಳಿಕ 'ಜೈಲರ್' ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದರು. ತಮಿಳು ಚಿತ್ರರಂಗದಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆದಿತ್ತು.
ಅಂದಹಾಗೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕಾಮಿಡಿ ಟೈಮಿಂಗ್ ಕೂಡ ಚೆನ್ನಾಗಿದೆ. ನೆಲ್ಸನ್ ಮನಸ್ಸು ಮಾಡಿದರೆ ಇಬ್ಬರನ್ನು ಸೇರಿಸಿ ಒಂದೊಳ್ಳೆ ಕಮರ್ಷಿಯಲ್ ಸಿನಿಮಾ ಕಟ್ಟಿಕೊಡಬಹುದು ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಇತ್ತೀಚೆಗೆ ಬಂದಿದ್ದ ಮಲ್ಟಿಸ್ಟಾರರ್ ಸಿನಿಮಾ 'ಕೂಲಿ' ಅಷ್ಟಾಗಿ ಸದ್ದು ಮಾಡಲಿಲ್ಲ. 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದುಕೊಂಡಿದ್ದ ಸಿನಿಮಾ 600 ಕೋಟಿ ರೂ.ಗೆ ಸುಸ್ತಾಗಿತ್ತು.
ಲೋಕೇಶ್ ಕನಕರಾಜ್ ಹೀರೊ ಆಗುತ್ತಿದ್ದಾರೆ. ಮುಂದೆ 'ಕೈದಿ- 2' ಚಿತ್ರ ಕೈಗೆತ್ತಿಕೊಳ್ಳುತ್ತಿದ್ದಾರೆ. ಹಾಗಾಗಿ ರಜನಿ- ಕಮಲ್ ಚಿತ್ರಕ್ಕೆ ಅವರು ಆಕ್ಷನ್ ಕಟ್ ಹೇಳುವುದು ಅನುಮಾನ. ನೆಲ್ಸನ್‌ಗೆ ಅಂತಾದೊಂದು ಸುವರ್ಣಾವಕಾಶ ಸಿಗುತ್ತಾ ಕಾದು ನೋಡಬೇಕಿದೆ. ಪ್ರೇಕ್ಷಕರು ಬಹಳ ದಿನಗಳಿಂದ ಕಾಯುತ್ತಿರುವ ಮಲ್ಟಿಸ್ಟಾರರ್ ಇದು. ಹಾಗಾಗಿ 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಕಷ್ಟವಾಗಲ್ಲ ಎನ್ನುವ ಚರ್ಚೆ ಕೂಡ ನಡೀತಿದೆ.


Click it and Unblock the Notifications











