Toxic: ನೆಟ್‌ಫಿಕ್ಸ್, ಅಮೆಜಾನ್‌ಗೆ ಟಕ್ಕರ್ ಕೊಟ್ಟಿತೇ ಜೀ 5? ಭಾರೀ ಮೊತ್ತಕ್ಕೆ 'ಟಾಕ್ಸಿಕ್' ಖರೀದಿಸಿತೇ ಜೀ?
ನಾಲ್ಕು ವರ್ಷಗಳ ಬಳಿಕ ರಿಲೀಸ್ ಆಗುತ್ತಿರುವ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್' ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ಹೊರಟಿದೆ. ಸಿನಿಮಾದಲ್ಲಿ ನಟಿಸಿರುವ ಒಂದೊಂದೇ ಪಾತ್ರವನ್ನು ಟೀಮ್ ರಿವೀಲ್ ಮಾಡುತ್ತಿದೆ. ಇದರೊಂದಿಗೆ 'ಟಾಕ್ಸಿಕ್' ಸಿನಿಮಾ ಬ್ಯುಸಿನೆಸ್ ಮಾಡುವುದರಲ್ಲೂ ಬ್ಯುಸಿಯಾಗಿದೆ.
ಕೆಲವು ದಿನಗಳಿಂದ 'ಟಾಕ್ಸಿಕ್' ಥಿಯೇಟ್ರಿಕಲ್ ಹಕ್ಕುಗಳನ್ನು ಮಾರಾಟ ಮಾಡುವತ್ತ ಗಮನ ಹರಿಸಿತ್ತು. ಹಿಂದಿ, ತೆಲುಗು, ಮಲಯಾಳಂ ಭಾಷೆಯ ಹಕ್ಕುಗಳನ್ನು ಬೃಹತ್ ಮೊತ್ತಕ್ಕೆ ವ್ಯಾಪಾರ ಮಾಡಿದೆ. ಪ್ರೀ-ರಿಲೀಸ್ ಬ್ಯುಸಿನೆಸ್ ಅನ್ನೇ ₹1000 ಕೋಟಿ ಟಾರ್ಗೆಟ್ ಇಟ್ಟಿರುವ ತಂಡ ಉತ್ತಮ ಮೊತ್ತಕ್ಕೆ ಸೇಲ್ ಮಾಡಿದೆ. ಈಗಾಗಲೇ ಈ ಮೂರು ಭಾಷೆಗಳಿಂದ ಸುಮಾರು ₹500 ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಮಧ್ಯೆ 'ಟಾಕ್ಸಿಕ್' ಬ್ಯುಸಿನೆಸ್‌ಗೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಸದ್ದು ಮಾಡುತ್ತಿದೆ. 'ಟಾಕ್ಸಿಕ್' ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಬೃಹತ್ ಮೊತ್ತಕ್ಕೆ ಜೀ ಖರೀದಿ ಮಾಡಿದೆ ಎಂಬ ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ 'ಟಾಕ್ಸಿಕ್' ಸಿನಿಮಾವನ್ನು ಜೀ ಸಂಸ್ಥೆ ಖರೀದಿ ಮಾಡಿತೇ? ಎಷ್ಟು ಮೊತ್ತಕ್ಕೆ ಮಾತುಕತೆ ಆಯ್ತು? ಯಶ್ ಅಂದುಕೊಂಡ ಮೊತ್ತವೇ ಸಿಕ್ಕಿತೇ? ಸಿನಿಮಾರಂಗದಲ್ಲಿ ಹರಿದಾಡುತ್ತಿರುವ ವದಂತಿ ಏನು? ತಿಳಿಯುವುದಕ್ಕೆ ಮುಂದೆ ಓದಿ.
ನೆಟ್‌ಫಿಕ್ಸ್, ಅಮೆಜಾನ್‌ಗೆ ಟಕ್ಕರ್?
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಮೇಲೆ ಓಟಿಟಿ ವೇದಿಕೆಗಳು ಕಣ್ಭಿಟ್ಟಿದ್ದವು. ಕಳೆದ ಕೆಲವು ದಿನಗಳಿಂದ ಓಟಿಟಿ ದೈತ್ಯಗಳಾದ ನೆಟ್‌ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಂ ವಿಡಿಯೋ 'ಟಾಕ್ಸಿಕ್' ಖರೀದಿ ಮಾಡುವುದಕ್ಕೆ ಮುಗಿಬಿದ್ದಿವೆ ಎಂಬ ಸುದ್ದಿ ಹಬ್ಬಿತ್ತು. ಇವೆರಡರಲ್ಲಿ ಒಂದು ಸಂಸ್ಥೆಗೆ 'ಟಾಕ್ಸಿಕ್' ಸೇಲ್ ಆಗುತ್ತೆ ಎಂದು ನಂಬಲಾಗಿತ್ತು. ಆದರೆ, ಈ ಎರಡು ಓಟಿಟಿ ವೇದಿಕೆಗಳ ಮಧ್ಯೆ ಜೀ 5 ಎಂಟ್ರಿ ಕೊಟ್ಟು ಡೀಲ್ ಮುಗಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಅನೌನ್ಸ್ ಆಗುತ್ತೆಂಬ ಸುದ್ದಿ ಓಡಾಡುತ್ತಿದೆ.
ಓಟಿಟಿ-ಟಿವಿ ಎರಡೂ ಹಕ್ಕುಗಳ ಖರೀದಿ
ಜೀ ಸಂಸ್ಥೆ ಕೇವಲ ಓಟಿಟಿ ಹಕ್ಕುಗಳನ್ನಷ್ಟೇ ಡೀಲ್ ಮಾಡಿಲ್ಲ. ಸ್ಯಾಟಲೈಟ್ಸ್ ಹಕ್ಕುಗಳನ್ನು ಕೂಡ ಖರೀದಿ ಮಾಡಿದೆ ಎನ್ನಲಾಗುತ್ತಿದೆ. ಒಂದೇ ಏಟಿಗೆ ಎರಡೂ ಹಕ್ಕಿಯನ್ನು ಹೊಡೆದಿದೆ ಎನ್ನಲಾಗಿದೆ. ಯಶ್ ಕೇಳಿದ ಮೊತ್ತದ ಜೊತೆ ಅಮೆಜಾನ್ ಪ್ರೈಂ ವಿಡಿಯೋ ಹಾಗೂ ನೆಟ್‌ಫ್ಲಿಕ್ಸ್ ಸಂಸ್ಥೆಗಳು ಚೌಕಾಸಿಗೆ ಇಳಿದಿದ್ದವು. ಆದರೆ, ಜೀ ಸಂಸ್ಥೆ ಹೆಚ್ಚು-ಕಡಿಮೆ ಯಶ್ ಕೇಳಿದ ಮೊತ್ತಕ್ಕೆ ಒಪ್ಪಿ ಡೀಲ್ ಕುದುರಿಸಿದೆ ಎಂದು ಹೇಳಲಾಗುತ್ತಿದೆ.

'ಟಾಕ್ಸಿಕ್' ಭರ್ಜರಿ ಬ್ಯುಸಿನೆಸ್
ಯಶ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಎರಡೂ ಸಂಸ್ಥೆಗಳು ಓಟಿಟಿ ಹಾಗೂ ಸ್ಯಾಟಲೈಟ್ ಎರಡನ್ನೂ ಸೇರಿಸಿ ₹250 ಕೋಟಿಯಿಂದ ₹300 ಕೋಟಿವರೆಗೂ ಬೇಡಿಕೆ ಇಟ್ಟಿದ್ದರು. ಆದರೆ, ಅಮೆಜಾನ್ ಪ್ರೈಂ ವಿಡಿಯೋ ₹180 ರಿಂದ ₹200 ಕೋಟಿ ರೇಂಜ್‌ನಲ್ಲಿತ್ತು. ಆದರೆ, ಈ ಮೊತ್ತವನ್ನು ಯಶ್ ಒಪ್ಪಲಿಲ್ಲ. ಹೀಗಾಗಿ ಚೌಕಾಸಿ ನಡೆಯುತ್ತಿತ್ತು. ಈ ಗ್ಯಾಪ್‌ಲ್ಲಿ ಜೀ ಸಂಸ್ಥೆ ಓಟಿಟಿ ಹಾಗೂ ಸ್ಯಾಟಲೈಟ್ ಎರಡೂ ಹಕ್ಕುಗಳನ್ನು ₹235 ಕೋಟಿಗೆ ಖರೀದಿ ಮಾಡಿದೆ ಎಂದು ಸಿನಿಮಾ ಇಂಡಸ್ಟ್ರಿಯಲ್ಲಿ ಸುದ್ದಿ ಹಬ್ಬಿದೆ.
'ಟಾಕ್ಸಿಕ್' ದಾಖಲೆ ಡೀಲ್
ಒಂದು ವೇಳೆ ಸಿನಿಮಾ ಮಂದಿ ಹೇಳ್ಕೊಂಡು ಓಡಾಡುತ್ತಿರುವ ಸುದ್ದಿ ನಿಜವೇ ಆಗಿದ್ದರೆ, ಯಶ್ ಸಿನಿಮಾ 'ಟಾಕ್ಸಿಕ್' ಭರ್ಜರಿ ಡೀಲ್ ಮಾಡಿದಂತಾಗುತ್ತೆ. ಈ ಮೂಲಕ ರಾಮ್ ಚರಣ್ ಸಿನಿಮಾ 'ಪೆದ್ದಿ' ₹180 ಕೋಟಿ ಡೀಲ್ ಅನ್ನು ಬ್ರೇಕ್ ಮಾಡಿದಂತೆ ಆಗುತ್ತೆ. ಸದ್ಯ ಇದು ಕೇವಲ ಚಿತ್ರರಂಗದಲ್ಲಿ ಹರಿದಾಡುತ್ತಿರುವ ಸುದ್ದಿಯಷ್ಟೇ. ಚಿತ್ರತಂಡ ಹಾಗೂ ಜೀ ಸಂಸ್ಥೆ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿಯನ್ನು ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬಹುದು.


Click it and Unblock the Notifications











