Samantha: ಫೆಬ್ರವರಿಯಲ್ಲೇ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೇ ಸಮಂತಾ? ಫೋಟೋಗಳು ಹೇಳಿದ ಕಥೆಯೇನು?
ಸಮಂತಾ ರುಥ್ ಪ್ರಭು 2ನೇ ಮದುವೆ ಆಗುವುದಕ್ಕೂ ಮುನ್ನ ನಿರ್ದೇಶಕ ರಾಜ್ ನಿಡುಮೋರು ಜೊತೆಗಿನ ಡೇಟಿಂಗ್ ರೂಮರ್ ಹರಿದಾಡುತ್ತಲೇ ಇತ್ತು. ಯಾರು ಅದೆಷ್ಟೇ ಮಾತಾಡಿದರೂ ಸಮಂತಾ ಮಾತ್ರ ತುಟಿಪಿಟಿಕ್ ಅಂದಿರಲಿಲ್ಲ. ವಿಚ್ಚೇದನದ ಬಳಿಕ ಎರಡನೇ ಮದುವೆ ಬಗ್ಗೆ ಪರೋಕ್ಷವಾಗಿ ಮಾತಾಡಿದ್ದು ಬಿಟ್ಟರೆ, ನೇರವಾಗಿ ತನ್ನ ಆಸೆಯನ್ನು ವ್ಯಕ್ತಪಡಿಸಿದ್ದೇ ಇಲ್ಲ. ಆದರೆ, ಕೆಲವು ತಿಂಗಳಿಂದ ಹರಿದಾಡಿದ್ದ ಗಾಳಿಸುದ್ದಿಗಳೇ ನಿಜವಾಗಿದೆ.
ಡಿಸೆಂಬರ್ 1ರ ವರೆಗೂ ಸಮಂತಾ ವಿಚ್ಚೇದನದ ಸುದ್ದಿಗಳೇ ಹೈಲೈಟ್ ಆಗುತ್ತಿದ್ದವು. ಆದ್ರೀಗ ಸಮಂತಾ 2ನೇ ಮದುವೆ ಸುತ್ತ ನೂರೆಂಟು ಸಂಗತಿಗಳು ಸದ್ದು ಮಾಡುವುದಕ್ಕೆ ಶುರು ಮಾಡಿವೆ. ರಾಜ್ ಜೊತೆ ಸಮಂತಾ ಆಪ್ತರ ಸಮ್ಮುಖದಲ್ಲಿ ವಿವಾಹವಾದರು. ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ಮದುವೆ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಆ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರ ಕಣ್ಣುಗಳು ಅರಳಿವೆ.

ಮದುವೆ ಫೋಟೋಗಳನ್ನು ನೋಡಿ ನೆಟ್ಟಿಗರು ಸಮಂತಾ ನಿಶ್ಚಿತಾರ್ಥದ ಬಗ್ಗೆ ಮಾತಾಡುವುದಕ್ಕೆ ಶುರು ಮಾಡಿದ್ದಾರೆ. ಹಳೆಯ ಫೋಟೋವನ್ನು ಇಟ್ಟುಕೊಂಡು ಗುಟ್ಟಾಗಿ ನಿಶ್ವಿತಾರ್ಥ ಮಾಡಿಕೊಂಡಿದ್ದರು ಎಂದು ವಾದವನ್ನು ಮಂಡಿಸುತ್ತಿದ್ದಾರೆ. ಅಸಲಿಗೆ ಸಮಂತಾ ರಹಸ್ಯವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರೇ? ಫೆಬ್ರವರಿ ತಿಂಗಳಲ್ಲೇ ನಿಶ್ಚಿತಾರ್ಥ ಆಗಿತ್ತಾ? ನೆಟ್ಟಿಗರು ಕೊಟ್ಟ ಸಾಕ್ಷಿ ಏನು?
ಸಮಂತಾ ಹಾಗೂ ರಾಜ್ ಮದುವೆ ಕೂಡ ಯಾವುದೇ ಸುಳಿವು ಕೊಡದೆ ನಡೆದಿತ್ತು. ಕೊಯಮತ್ತೂರಿನ ಇಶಾ ಯೋಗ ಸೆಂಟರ್‌ನಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಮದುವೆಯಾದ ದಿನವೇ (ಡಿಸೆಂಬರ್ 1) ಈ ಜೋಡಿ ವಿವಾಹವಾಗುತ್ತಿರುವ ಬಗ್ಗೆ ಸುದ್ದಿ ಹೊರಬಿದ್ದಿತ್ತು. ತಮ್ಮ ಮದುವೆ ಮ್ಯಾಟರ್ ಅನ್ನು ಅಷ್ಟು ಗುಟ್ಟಾಗಿ ಇಟ್ಟಿದ್ದರು. ಇನ್ನು ನಿಶ್ಚಿತಾರ್ಥ ಅಂದ್ಮೇಲೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿರಲ್ಲ ಅನ್ನೋದು ನೆಟ್ಟಿಗರ ಅಭಿಪ್ರಾಯ.
ಮದುವೆ ಆದ ದಿನ ಸಮಂತಾ ಹಂಚಿಕೊಂಡಿದ್ದ ಫೋಟೋಗಳಲ್ಲಿ ಕೈಗೆ ತೊಟ್ಟಿದ್ದ ರಿಂಗ್ ನಿಶ್ಚಿತಾರ್ಥದ ಬಗ್ಗೆ ಸುಳಿವನ್ನು ಕೊಟ್ಟಿದೆ. ಸಮಂತಾ ದುಬಾರಿ ಬೆಲೆ ಬಾಳುವ ರಿಂಗ್ ಅನ್ನು ತೊಟ್ಟಿದ್ದರು. ಇದರ ಬೆಲೆ ಒಂದೂವರೆ ಕೋಟಿ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಉಂಗುರವನ್ನು ಮದುವೆಗೂ ಮುನ್ನವೇ ಸಮಂತಾ ಕೈಯಲ್ಲಿತ್ತು ಎಂದು ಕೆಲವರು ಸಾಕ್ಷಿ ಹೇಳುತ್ತಿದ್ದಾರೆ. ರೆಡಿಟ್‌ನ ಬಾಲ್ಲಿಬ್ಲೈಂಡ್‌ಗಾಸಿಪ್ ಎಂಬ ಪೇಜ್‌ನಲ್ಲಿ " ಈ ರಿಂಗ್ ಅನ್ನು ಸಮಂತಾ ಫೆಬ್ರವರಿಯಿಂದಲೇ ಧರಿಸುತ್ತಿದ್ದರು" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಫೆಬ್ರವರಿ ತಿಂಗಳಿನಿಂದಲೇ ಸಮಂತಾ ಈ ಡೈಮಂಡ್ ರಿಂಗ್ ಧರಿಸುತ್ತಿದ್ದಾರೆಂಬ ಸುದ್ದಿ ಹೊರಬಿದ್ದಿದೆ. ಇದು ಹೊರ ಬೀಳುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಅವರು ಬಹುಶ: ಫೆಬ್ರವರಿಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರೆಂದು ಅನಿಸುತ್ತಿದೆ" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ಹೌದು, ಫೆಬ್ರವರಿಯಿಂದ ಮಾಡಿದ ಪೋಸ್ಟ್‌ಗಳಲ್ಲೆಲ್ಲ ಸಮಂತಾ ಈ ರಿಂಗ್ ಅನ್ನು ಧರಿಸಿದ್ದಾರೆ.. ಆದರೆ, ಜನರಿಗೆ ಮಾತ್ರ ಇದು ಎಂಗೇಜ್‌ಮೆಂಟ್ ರಿಂಗ್ ಅನ್ನೋದು ಗೊತ್ತಾಗಲೇ ಇಲ್ಲ" ಎಂದಿದ್ದಾರೆ.
ಏನೇ ಇದ್ದರೂ ಸಮಂತಾ ಹೊಸ ಜೀವನಕ್ಕೆ ಅವರ ಅಭಿಮಾನಿಗಳು ಸೇರಿದಂತೆ ಸಿನಿಮಾ ತಾರೆಯವರು ಶುಭ ಕೋರಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ಅನನ್ಯಾ ಭಟ್, ವರುಣ್ ಧವನ್ ಸೇರಿದಂತೆ ಇನ್ನೂ ಹಲವು ಸೆಲೆಬ್ರೆಟಿಗಳು ಈ ನವ ಜೋಡಿಗೆ ಶುಭಕೋರಿದ್ದಾರೆ. ಇನ್ನು ಸಮಂತಾ ಹಾಗೂ ರಾಜ್ ಇಬ್ಬರೂ ಪಕ್ಕಾ ಟ್ರೆಡಿಷನಲ್ ಲುಕ್ ಕಂಗೊಳಿಸಿದ್ದರು. ಸಮಂತಾ ಕೆಂಪು ಬಣ್ಣ ಸಿಲ್ಕ್ ಸೀರೆಯುಟ್ಟು ಗಮನ ಸೆಳೆದಿದ್ದರು.


Click it and Unblock the Notifications











