ಆರಂಭಕ್ಕೂ ಮುನ್ನವೇ ಹಾಲಿವುಡ್ ಕದ ತಟ್ಟಿದರೇ ಅಲ್ಲು ಅರ್ಜುನ್, ಅಟ್ಲೀ?
'ಪುಷ್ಪ 2' ಬಳಿಕ ಅಲ್ಲು ಅರ್ಜುನ್ ಸಿನಿಮಾ ಆಯ್ಕೆ ಮಾಡಿಕೊಳ್ಳುವುದರಲ್ಲಿ ತಡ ಮಾಡಬಹುದು. ಯಶ್‌ರಂತೆಯೇ ಅಳೆದು ತೂಗಿ ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಐಕಾನ್ ಸ್ಟಾರ್ ಆ ಲೆಕ್ಕಾಚಾರವನ್ನೆಲ್ಲ ತಲೆ ಕೆಳಗೆ ಮಾಡಿದ್ದರು. ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲೀ ಜೊತೆ ಸಿನಿಮಾ ಮಾಡುವುದಕ್ಕೆ ಕೈ ಜೋಡಿಸಿದ್ದಾರೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಸೆನ್ಸೇಷನಲ್ ನಿರ್ದೇಶಕ ಅಟ್ಲಿ ಕುಮಾರ್ ಕಾಂಬಿನೇಷನ್ ಸಿನಿಮಾಗಲೇ ಅನೌನ್ಸ್ ಆಗಿದೆ. ದಕ್ಷಿಣ ಭಾರತದಲ್ಲಿ ದುಬಾರಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಕಲಾನಿಧಿ ಮಾರನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಡೆವೆಲಪ್‌ಮೆಂಟ್‌ಗಳು ವೇಗವಾಗಿ ನಡೆಯುತ್ತಿವೆ. ಈ ಮಧ್ಯೆ ಟಾಲಿವುಡ್‌ನಲ್ಲಿ ಕೇಳಿ ಬರುತ್ತಿರುವ ಸುದ್ದಿಗಳು ಭಾರಿ ಸಂಚಲನ ಸೃಷ್ಟಿಸುತ್ತಿವೆ.

ಆರಂಭದಲ್ಲಿ ಇದನ್ನು ಪ್ಯಾನ್ ಇಂಡಿಯ ಸಿನಿಮಾವಾಗಿ ನಿರ್ಮಾಣ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಪ್ಯಾನ್ ವರ್ಲ್ಡ್ ಸಿನಿಮಾವಾಗಿ ನಿರ್ಮಾಣ ಮಾಡುವುದಕ್ಕೆ ಮುಂದಾಗಿರುವ ಬಗ್ಗೆ ಸುದ್ದಿಯೊಂದು ಓಡಾಡುತ್ತಿದೆ. ಈಗಾಗಲೇ ಅಲ್ಲು ಅರ್ಜುನ್ ಹಾಗೂ ಅಟ್ಲೀ ಇಬ್ಬರೂ ಹಾಲಿವುಡ್ ಸಿನಿಮಾಗಳ ತಂತ್ರಜ್ಞರನ್ನು ಭೇಟಿ ಮಾಡಿರುವ ವಿಡಿಯೋಗಳನ್ನು ಅವರೇ ಹಂಚಿಕೊಂಡಿದ್ದಾರೆ. ಹೀಗಾಗಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಎನ್ನುವ ಸುಳಿವು ಸಿಕ್ಕಿದೆ.
ಅಲ್ಲು ಅರ್ಜುನ್ ನಟಿಸುತ್ತಿರುವ ಈ ಸಿನಿಮಾವನ್ನು ಭಾರಿ ವಿಎಫ್‌ಎಕ್ಸ್ ಮತ್ತು ಗ್ರಾಫಿಕ್ ಬಳಸಿ ನಿರ್ಮಿಸಲಾಗುತ್ತಿದೆ ಎಂದು ಈ ಹಿಂದೆಯೇ ಹಲವು ಬಾರಿ ಸ್ಪಷ್ಟಪಡಿಸಲಾಗಿದೆ. ಈ ಸಿನಿಮಾದ ಇನ್ನೊಂದು ಹೈಲೈಟ್ ಅಂದರೆ, ಅಲ್ಲು ಅರ್ಜುನ್ ಈ ಸಿನಿಮಾದಲ್ಲಿ ನಾಲ್ಕು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಜ್ಜ, ತಂದೆ ಮತ್ತು ಇಬ್ಬರು ಪುತ್ರರ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಅಟ್ಲೀ ಹೆಣೆದ ಈ ಕಥೆ ಟೈಮ್ ಟ್ರಾವೆಲ್ ಮತ್ತು ಪುನರ್ಜನ್ಮದಂತಹ ವಿಷಯಗಳನ್ನು ಆಧರಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಮುಂಬೈನ ಮೆಹಬೂಬ್ ಸ್ಟುಡಿಯೋದಲ್ಲಿ ಭಾರಿ ಪ್ರಮಾಣದಲ್ಲಿ ಸೆಟ್ ಹಾಕಿ ಶೂಟಿಂಗ್ ನಡೆಯುತ್ತಿದೆ. ಹಾಗೇ ಈ ಸಿನಿಮಾದಲ್ಲಿ ಐವರು ನಾಯಕಿಯರು ನಟಿಸುತ್ತಿರುವುದು ಮತ್ತೊಂದು ವಿಶೇಷ. ದೀಪಿಕಾ ಪಡುಕೋಣೆ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ರಶ್ಮಿಕಾ ಮಂದಣ್ಣ, ಮೃಣಾಲ್ ಠಾಕೂರ್, ಜಾಹ್ನವಿ ಕಪೂರ್ ಮತ್ತು ಭಾಗ್ಯಶ್ರೀ ಭೋರ್ಸೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದರೊಂದಿಗೆ ಇನ್ನೊಂದು ಸುದ್ದಿನೂ ಹರಿದಾಡುತ್ತಿದ್ದು, ವಿಜಯ್ ಸೇತುಪತಿ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಹಾಲಿವುಡ್‌ನ ಪ್ರಮುಖ ವಿಎಫ್‌ಎಕ್ಸ್ ಕಂಪನಿಯು ಈ ಸಿನಿಮಾಕ್ಕಾಗಿ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿದೆ. ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಹೊರಟಿದೆ. ಈ ಚಿತ್ರಕ್ಕಾಗಿ ಹೊಸ ಪ್ರಪಂಚವನ್ನು ಸೃಷ್ಟಿಸಲು ತಂತ್ರಜ್ಞರು ಶ್ರಮಿಸುತ್ತಿದ್ದಾರೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಸಿನಿಮಾ ಸುಮಾರು 700 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಈ ಎಲ್ಲದರ ಹೊರತಾಗಿ, ಈ ಸಿನಿಮಾವನ್ನು ಗ್ಲೋಬಲ್ ಸಿನಿಮಾ ಮಾಡುವುದಕ್ಕೆ ಸನ್ ಪಿಕ್ಚರ್ಸ್ ಸಿಕ್ಕಾಪಟ್ಟೆ ದೊಡ್ಡ ಸ್ಕೆಚ್ ಹಾಕಿದೆ. ವಿಶ್ವಾದ್ಯಂತ ಈ ಸಿನಿಮಾವನ್ನು ಭಾರಿ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಹಾಲಿವುಡ್‌ನ ವಾರ್ನರ್ ಬ್ರದರ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂಬ ಮಾತಿದೆ. ಇಷ್ಟೇ ಅಲ್ಲದೆ ಈ ಸಿನಿಮಾವನ್ನು ದಾಖಲೆ ಮಟ್ಟದಲ್ಲಿ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದ್ದು, ವಾರ್ನರ್ ಬ್ರದರ್ಸ್ ನೆರವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.


Click it and Unblock the Notifications











