ಕಾಲಿವುಡ್‌ನಲ್ಲಿ ಬಿಸಿಬಿಸಿ ಸುದ್ದಿ; ಮತ್ತೆ ಕೈ ಜೋಡಿಸ್ತಾರಾ ರಜನಿಕಾಂತ್- ಧನುಷ್?
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಧನುಷ್ ಮತ್ತೆ ಒಟ್ಟಿಗೆ ತ್ತಾರೆ ಎಂದು ಕಾಲಿವುಡ್‌ನಲ್ಲಿ ಚರ್ಚೆ ಶುರುವಾಗಿದೆ. ತಲೈವಾ ಅಭಿಮಾನಿ ಆಗಿರುವ ಧನುಷ್ ಅವರ ಮಗಳನ್ನು ಮದುವೆ ಆಗಿದ್ದರು. ಕಳೆದ ವರ್ಷ ಡಿವೋರ್ಸ್ ಪಡೆದಿದ್ದರು. ಆದರೂ ರಜನಿಕಾಂತ್ ಹಾಗೂ ಧನುಷ್ ನಡುವೆ ಒಳ್ಳೆ ಬಾಂಧವ್ಯ ಇದೆ ಎನ್ನಲಾಗ್ತಿದೆ.
ಕಮಲ್ ಹಾಸನ್‌ಗಾಗಿ ಇದೀಗ ಮಾಜಿ ಮಾವ, ಮಾಜಿ ಅಳಿಯ ಒಟ್ಟಿಗೆ ಸೇರುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಅಂದಹಾಗೆ ರಜನಿಕಾಂತ್ ನಟನೆಯ ಮುಂದಿ ಚಿತ್ರಕ್ಕೆ ಧನುಷ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. 'ಕೂಲಿ' ಬಳಿಕ ರಜನಿಕಾಂತ್ 'ಜೈಲರ್- 2' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಬಳಿಕ ತಮ್ಮ 173ನೇ ಸಿನಿಮಾದಲ್ಲಿ ನಟಿಸಬೇಕಿದೆ.

ಕಮಲ್ ಹಾಸನ್ ನಿರ್ಮಾಣದಲ್ಲಿ ತಲೈವಾ 173 ಸಿನಿಮಾ ವಾರದ ಹಿಂದೆ ಘೋಷಣೆ ಆಗಿತ್ತು. ಸುಂದರ್ ಸಿ ಚಿತ್ರಕ್ಕೆ ಸಾರಥ್ಯ ವಹಿಸಿದ್ದರು. ಆದರೆ ಇತ್ತೀಚೆಗೆ ಅವರು ಚಿತ್ರದಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಸುದೀರ್ಘ ಪತ್ರ ಬರೆದಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಈ ಪ್ರಾಜೆಕ್ಟ್‌ನಿಂದ ಹೊರ ಬಂದಿದ್ದಾಗಿ ಹೇಳಿದ್ದರು. ಕಮಲ್ ಹಾಸನ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು.
ಕಮಲ್ ಹಾಸನ್ ಮಾತನಾಡಿ "ಸುಂದರ್ ಸಿ ಈಗಾಗಲೇ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹೌದು ಅವರೊಟ್ಟಿಗೆ ಯಾವುದೇ ಸಿನಿಮಾ ಮಾಡ್ತಿಲ್ಲ.ನಾನು ನಿರ್ಮಾಪಕ, ಆದ್ದರಿಂದ ನನ್ನ ಸ್ಟಾರ್ (ರಜನಿಕಾಂತ್) ಅವರನ್ನು ತೃಪ್ತಿಪಡಿಸುವ ಚಿತ್ರವನ್ನು ಮಾಡ್ತೀನಿ. ಅದು ಅವರನ್ನು ತೃಪ್ತಿಪಡಿಸುವವರೆಗೆ ನಾವು ಸ್ಕ್ರಿಪ್ಟ್‌ಗಳನ್ನು ಕೇಳುತ್ತಲೇ ಇರುತ್ತೇವೆ. ನಾವಿಬ್ಬರು ಒಟ್ಟಿಗೆ ನಟಿಸುವ ಚಿತ್ರಕ್ಕಾಗಿ ಇನ್ನೊಂದು ಕಥೆಯನ್ನು ಹುಡುಕುತ್ತಿದ್ದೇವೆ" ಎಂದಿದ್ದರು.

ತಲೈವಾ 173 ಚಿತ್ರದಿಂದ ಸುಂದರ್ ಸಿ. ಹೊರಬಂದಿದ್ದಾರೆ. ಹಾಗಾಗಿ ಕಮಲ್ ನಿರ್ಮಾಣದಲ್ಲಿ ಆ ಚಿತ್ರವನ್ನು ಯಾರು ನಿರ್ಮಾಣ ಮಾಡುತ್ತಾರೆ ಎನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ. ಕಮಲ್ ನಿರ್ಮಾಣದ ಚಿತ್ರದಲ್ಲಿ ನಟಿಸೋಕೆ ಸೂಪರ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬೇರೆ ನಿರ್ದೇಶಕರು ಕಥೆ ಹೇಳಿ ಒಪ್ಪಿಸಬೇಕಿದೆ. ಕಾರ್ತಿಕ್ ಸುಬ್ಬರಾಜ್ ಹೆಸರು ಕೇಳಿಬರ್ತಿದೆ. ಈ ನಡುವೆ ಧನುಷ್ ಹೆಸರು ಚಾಲ್ತಿಗೆ ಬಂದಿದೆ.
ನಟನಾಗಿ 50 ಸಿನಿಮಾಗಳನ್ನು ಪೂರೈಸಿರುವ ಧನುಷ್ ನಿರ್ಮಾಪಕ ಹಾಗೂ ನಿರ್ದೇಶಕರಾಗಿಯೂ ಗುರ್ತಿಸಿಕೊಂಡಿದ್ದಾರೆ. 'ಪಾ ಪಾಂಡಿ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಇದೇ ಚಿತ್ರ ಕನ್ನಡದಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೊ' ಹೆಸರಿನಲ್ಲಿ ರೀಮೆಕ್ ಆಗಿತ್ತು. ಬಳಿಕ 'ರಾಯನ್' ಚಿತ್ರ ನಿರ್ದೇಶಿಸಿ ನಟಿಸಿ ಧನುಷ್ ಕಮಾಲ್ ಮಾಡಿದ್ದರು. 'ನೀಲವುಕು ಎನ್ ಮೆಲ್ ಎನ್ನಡಿ ಕೊಬಮ್' ಎಂಬ ಮತ್ತೊಂದು ಹೊಸಬರ ಚಿತ್ರ ನಿರ್ದೇಶಿಸಿ ಬಳಿಕ 'ಇಡ್ಲಿ ಕಡೇ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇತ್ತೀಚೆಗೆ ಬಂದ ಆ ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.
'ಇಡ್ಲಿ ಕಡೇ' ಬಳಿಕ ತಲೈವಾ 173 ಚಿತ್ರವನ್ನು ಧನುಷ್ ನಿರ್ದೇಶನ ಮಾಡುತ್ತಾರೆ, ತೆರೆಮರೆಯಲ್ಲಿ ಅದಕ್ಕಾಗಿ ಕಸರತ್ತು ಶುರುವಾಗಿದೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಹೇಳಿ ಕೇಳಿ ರಜನಿಕಾಂತ್ ಅಭಿಮಾನಿ ಧನುಷ್. ತಮ್ಮ ನೆಚ್ಚಿನ ನಟನನ್ನು ತೆರೆಮೇಲೆ ಅದ್ಭುತವಾಗಿ ತೋರಿಸುವ ಪ್ರಯತ್ನ ಮಾಡುತ್ತಾರೆ. ಪ್ರೇಕ್ಷಕರಿಗೆ ಅದಕ್ಕಿಂತ ಏನು ಬೇಕು ಹೇಳಿ.
ರಜನಿಕಾಂತ್ ಶೀಘ್ರದಲ್ಲೇ ಚಿತ್ರರಂಗಕ್ಕೆ ಗುಡ್‌ಬೈ ಹೇಳುವ ಲೆಕ್ಕಾಚಾರದಲ್ಲಿದ್ದಾರೆ. ಹಾಗಾಗಿ ಬೇಗನೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುವ ಮನಸ್ಸು ಮಾಡಿದ್ದಾರೆ. ಹಾಗಾಗಿ ಒಂದರ ಹಿಂದೆ ಒಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಒಂದು ಸಿನಿಮಾ ಬಿಡುಗಡೆಗೂ ಮುನ್ನ ಮತ್ತೊಂದು ಸಿನಿಮಾ ಲೈನಪ್ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











