'ಅವತಾರ್' ನಿರ್ದೇಶಕನಿಂದ ಮಹೇಶ್ ಬಾಬು-ರಾಜಮೌಳಿ ಸಿನಿಮಾದ ಫಸ್ಟ್ ಲುಕ್ ಗ್ಲಿಂಪ್ಸ್ ರಿಲೀಸ್?
ಟಾಲಿವುಡ್ ಮಂದಿ ಇದೊಂದು ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಯಾವಾಗ ಆ ಸಿನಿಮಾ ನೋಡುತ್ತಿವೋ? ಅಂತ ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ಎಸ್. ಎಸ್. ರಾಜಮೌಳಿ ಮಾತ್ರ ಸೈಲೆಂಟ್ ಶೂಟಿಂಗ್ ಮಾಡುತ್ತಿದ್ದರು. ಇತ್ತ ಅಭಿಮಾನಿಗಳು ಒಂದೇ ಒಂದು ಅಪ್‌ಡೇಟ್‌ಗಾಗಿ ಕಾದಿದ್ದಷ್ಟೆ. ಈ ಕುತೂಹಲಕ್ಕೀಗ ತಾತ್ಕಾಲಿಕ ರಿಲೀಫ್ ಕೊಡುವುದಕ್ಕೆ ರಾಜಮೌಳಿ ನಿರ್ಧರಿಸಿದ್ದಾರೆಂತೆ. ಇಂತಹದ್ದೊಂದು ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.
ಸದ್ಯ ಮಹೇಶ್ ಬಾಬು ಹಾಗೂ ರಾಜಮೌಳಿ ತಮ್ಮ ಸಿನಿಮಾಗೆ 'SSMB29' ಎಂದು ತಾತ್ಕಾಲಿಕ ಟೈಟಲ್ ಇಟ್ಟು ಶೂಟಿಂಗ್ ಶುರು ಮಾಡಿದ್ದಾರೆ. ಈ ಬಾರಿ ರಾಜಮೌಳಿ ಕೈ ಹಾಕಿರೋದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಪ್ಯಾನ್ ವರ್ಲ್ಡ್ ಸಿನಿಮಾ ಅಂತ ಈಗಾಗಲೇ ತೆಲುಗು ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ದುರ್ಗಾ ಆರ್ಟ್ಸ್ ಬ್ಯಾನರ್‌ನಲ್ಲಿ ತೆಲುಗಿನ ಖ್ಯಾತ ನಿರ್ಮಾಪಕ ಕೆ.ಎಲ್. ನಾರಾಯಣ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಹೊಸ ವಿಷಯವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇದು ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ನಟಿಸುತ್ತಿರುವ 29ನೇ ಸಿನಿಮಾ. ಇದೇ ಮೊದಲ ಬಾರಿಗೆ ಮಹೇಶ್ ಬಾಬುಗೆ ಗ್ಲೋಬಲ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ. ಮಹೇಶ್ ಬಾಬು ಜೊತೆ ಕಾಣಿಸಿಕೊಂಡಿರುವ ಮತ್ತೊಂದು ದೊಡ್ಡ ಹೆಸರು ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ. ಈ ಸಿನಿಮಾ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಆರ್. ಮಾಧವನ್, ಜಾನ್ ಅಬ್ರಹಾಂ, ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯದರ್ಶಿ ಪುಲಿಕೊಂಡ ಅವರಂತಹ ಜನಪ್ರಿಯರ ತಾರೆಯರನ್ನು ಪೋಷಕ ಪಾತ್ರಗಳಲ್ಲಿ ನೋಡಬಹುದಾಗಿದೆ.
ಎಂದಿನಂತೆ ರಾಜಮೌಳಿ ನಿರ್ದೇಶಿಸುತ್ತಿರುವ ಈ ಸಿನಿಮಾ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಹೆಣೆದಿದ್ದಾರೆ. RRR ಸಿನಿಮಾದ ಹಾಡಿಗೆ ಆಸ್ಕರ್ ಪಡೆದ ಎಂ.ಎಂ. ಕೀರವಾಣಿ ಈ ಸಿನಿಮಾಗೂ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪಿ.ಎಸ್. ವಿನೋದ್ ಛಾಯಾಗ್ರಹಣ ಮತ್ತು ಟೊಡೊರ್ ಲಾಜರೋವ್ ಸಾಹಸ ನಿರ್ದೇಶನ ಮಾಡುತ್ತಿರೋದು ಈ ಸಿನಿಮಾದ ಹೈಲೈಟ್. ಈಗಾಗಲೇ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾದ ಮೊದಲ ಹಂತದ ಶೂಟಿಂಗ್ ಹೈದರಾಬಾದ್‌ನಲ್ಲಿ ಪ್ರಾರಂಭ ಆಗಿತ್ತು. ಅದು ಒರಿಸ್ಪಾದಲ್ಲಿ ಪೂರ್ಣಗೊಂಡಿದೆ.
ಇಷ್ಟೇ ಅಲ್ಲದೆ ಈ ಸಿನಿಮಾದ ಪ್ರಮುಖ ಸನ್ನಿವೇಶಗಳನ್ನು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಸದ್ಯ ನೈರೋಬಿಯಲ್ಲಿ ಶೂಟಿಂಗ್ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಂಡಿದೆ. ಟಾಲಿವುಡ್ ಮೂಲಗಳ ಪ್ರಕಾರ, ಈಗಾಗಲೇ ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಚಿತ್ರೀಕರಣಕ್ಕಾಗಿ ಕೀನ್ಯಾದ ನೈರೋಬಿ ತಲುಪಿದ್ದಾರೆ.

ಸಿನಿಮಾ ಬಗ್ಗೆ ಏನಾದರೂ ಅಪ್‌ಡೇಟ್ ಸಿಗುತ್ತೆಂದು ಮಹೇಶ್ ಬಾಬು ಅಭಿಮಾನಿಗಳು ಕಾದು ಕೂತಿದ್ದರು. ಯಾಕಂದ್ರೆ, ಆಗಸ್ಟ್ 9ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ಗ್ಲಿಂಪ್ಸ್ ಅಥವಾ ಫಸ್ಟ್ ಲುಕ್ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದರೆ, ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ಅಂತಹದ್ದು ಏನೂ ರಿಲೀಸ್ ಆಗುವುದಿಲ್ಲ ಎಂದು ರಾಜಮೌಳಿ ಅಭಿಮಾನಿಗಳಿಗೆ ಸ್ಪಷ್ಟಪಡಿಸಿದ್ದರು. ಹೀಗಾಗಿ ಮಹೇಶ್ ಬಾಬು ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿದ್ದು ಕೂಡ ಇದೆ.
ಈಗ ಮಹೇಶ್ ಬಾಬು ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದ ಫಸ್ಟ್ ಲುಕ್ ಗ್ಲಿಂಪ್ಸ್ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆಯಂತೆ. ಇದಕ್ಕೆ 'Gen63' ಎಂದು ಹೆಸರಿಸಲಾಗಿದ್ದು, ಈ ಗ್ಲಿಂಪ್ಸ್ ಅನ್ನು ಹಾಲಿವುಡ್ ದಿಗ್ಗಜ ಜೇಮ್ಸ್ ಕ್ಯಾಮರೂನ್ ಅವರ ಕೈಯಿಂದಲೇ ಬಿಡುಗಡೆ ಮಾಡಿಸುವುದಕ್ಕೆ ಸ್ಕೆಚ್ ಹಾಕಲಾಗಿದೆಯಂತೆ.
ಕ್ಯಾಮರೂನ್ ತಮ್ಮ 'ಅವತಾರ್: ದಿ ಫೈರ್ ಅಂಡ್ ಆಶ್' ಸಿನಿಮಾದ ಪ್ರಚಾರಕ್ಕಾಗಿ ಭಾರತಕ್ಕೆ ಬರಲಿದ್ದು, ಆ ವೇಳೆ ಅವರಿಂದಲೇ ಈ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆಯಂತೆ. ರಾಜಮೌಳಿ ಈ ಸಿನಿಮಾವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಇದಕ್ಕಾಗಿ ಹಾಲಿವುಡ್ ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರಂತೆ. ಇಂತಹ ಸುದ್ದಿಯೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.


Click it and Unblock the Notifications











