"ವಿಶಾಲ್-ವರಲಕ್ಷ್ಮಿ ಒಟ್ಟಿಗೆ ಇದ್ರು.. ಬ್ರೇಕಪ್ ಆಗಲು ಶರತ್‌ಕುಮಾರ್ ಕಾರಣ": ನಿಶ್ಚಿತಾರ್ಥದ ಬಳಿಕ ವಿವಾದಾತ್ಮಕ ಹೇಳಿಕೆ!
ತಮಿಳಿನ ಹಿರಿಯ ನಟ ಶರತ್‌ಕುಮಾರ್ ಪುತ್ರಿ ವರಲಕ್ಷ್ಮಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರೋದು ಗೊತ್ತೇ ಇದೆ. ಆದರೆ, ಈ ನಿಶ್ಚಿತಾರ್ಥಕ್ಕೂ ಮುನ್ನ ವರಲಕ್ಷ್ಮಿ ಶರತ್‌ಕುಮಾರ್ ಹೆಸರು ತಮಿಳಿನ ಸ್ಟಾರ್ ನಟ ವಿಶಾಲ್ ಜೊತೆ ತಳುಕು ಹಾಕಿಕೊಂಡಿತ್ತು. ಎಲ್ಲವರೆಗೂ ಅಂದ್ರೆ, ಅನಿಶಾ ಎಂಬುವವರ ಜೊತೆ ವಿಶಾಲ್ ನಿಶ್ಚಿತಾರ್ಥ ಮಾಡಿಕೊಳ್ಳುವವರೆಗೂ ಈ ಸದ್ದು ಸದ್ದು ಮಾಡುತ್ತಲೇ ಇತ್ತು. ಆದರೆ, ವಿಶಾಲ್ ಈ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದರು.
ವಿಶಾಲ್ ಹಾಗೂ ವರಲಕ್ಷ್ಮಿ ಶರತ್ ಕುಮಾರ್ ಇಬ್ಬರಿಗೂ ತುಂಬಾ ಹಳೆಯ ಪರಿಚಯ. ಚಿತ್ರರಂಗದಲ್ಲಿ ಇವರಿಬ್ಬರು ಕ್ಲೋಸ್ ಇರುವಷ್ಟು ಮತ್ಯಾರೂ ಇರಲಿಲ್ಲ. ಈ ಬಗ್ಗೆ ಸಾಕಷ್ಟು ಸುದ್ದಿಗಳಾಗಿವೆ. 2019ರ ಬಳಿಕ ಇವರಿಬ್ಬರ ಸಂಬಂಧದಲ್ಲಿ ಇದ್ದ ಬಿರುಕು ಮತ್ತಷ್ಟು ಹೆಚ್ಚಾಗಿತ್ತು. ಅದಕ್ಕೆ ಕಾರಣ ನಾಡಿಗರ್ ಸಂಘದ ಚುನಾವಣೆ. ಈ ವೇಳೆ ವಿಶಾಲ್ ವಿರುದ್ಧ ವರಲಕ್ಮಿ ಶರತ್‌ಕುಮಾರ್ ತಿರುಗಿಬಿದ್ದಿದ್ದರು.

ಒಂದಿಷ್ಟು ವರ್ಷ ವರಲಕ್ಷ್ಮಿ ಶರತ್‌ಕುಮಾರ್ ಹಾಗೂ ವಿಶಾಲ್ ಡೇಟಿಂಗ್ ಮಾಡುತ್ತಿದ್ದರು. ಇಬ್ಬರು ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಆದರೆ, 7 ವರ್ಷಗಳ ತಮ್ಮ ಸಂಬಂಧಕ್ಕೆ ವರಲಕ್ಷ್ಮಿ ಹಾಗೂ ವಿಶಾಲ್ ಬ್ರೇಕ್ ಹಾಕಲು ನಿರ್ಧರಿಸಿದ್ದರು. ಇದಕ್ಕೆ ಕಾರಣ ವರಲಕ್ಷ್ಮಿ ತಂದೆ ಶರತ್‌ಕುಮಾರ್ ಎಂದು ತಮಿಳಿನ ಹಿರಿಯ ನಟ ಹಾಗೂ ವಿವಾದಾತ್ಮಕ ವಿಮರ್ಶಕ ಬೈಲ್ವಾನ್ ರಂಗನಾಥನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ವಿಶಾಲ್ ಹಾಗೂ ವರಲಕ್ಷ್ಮಿ ಲವ್ ಸ್ಟೋರಿ ಬಗ್ಗೆ ಸಾಕಷ್ಟು ಸುದ್ದಿಗಳು ಓಡಾಡಿದ್ದವು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಸರಿಯಾದ ರೀತಿಯಲ್ಲಿ ಸ್ಪಷ್ಟನೆ ಕೊಟ್ಟಿರಲಿಲ್ಲ. ನಾವಿಬ್ಬರೂ ಉತ್ತಮ ಗೆಳೆಯರು ಎಂದಷ್ಟೇ ಹೇಳಿಕೊಂಡಿದ್ದಾರೆ. ಆದರೂ ಇವರ ಮಾತಗಳನ್ನು ಕಾಲಿವುಡ್ ಮಂದಿ ಕೇಳುವುದಕ್ಕೆ ರೆಡಿಯಿರಲಿಲ್ಲ. ಈ ವೇಳೆ 2019ರಲ್ಲಿ ವಿಶಾಲ್ ಹಾಗೂ ಶರತ್‌ಕುಮಾರ್ ನಡುವಿನ ಕಿತ್ತಾಟ. ಅದಕ್ಕೆ ವರಲಕ್ಷ್ಮಿ ಪ್ರತಿಕ್ರಿಯಿಸಿದ ರೀತಿ ಎಲ್ಲರಿಗೂ ಶಾಕ್ ಕೊಟ್ಟಿತ್ತು.

2019ರಲ್ಲಿ ನಾಡಿಗರ್ ಸಂಘಂ (ತಮಿಳರ ಕಲಾವಿದರ ಸಂಘ) ಚುನಾವಣೆ ನಡೆಯುತ್ತಿತ್ತು. ಈ ವೇಳೆ ಶರತ್ ಕುಮಾರ್ ಹಾಗೂ ಸಂಗಡಿಗರು ವಿಶಾಲ್ ಹಾಗೂ ಅವರ ತಂಡದ ವಿರುದ್ಧ ತಿರುಗಿಬಿದ್ದಿದ್ದರು. ಆ ವೇಳೆ ಶರತ್‌ಕುಮಾರ್ ಹಾಗೂ ವಿಶಾಲ್ ನಡುವೆ ಜಟಾಪಟಿ ಏರ್ಪಟ್ಟಿತ್ತು. ಇದರಿಂದ ಕೋಪಗೊಂಡಿದ್ದ ವರಲಕ್ಷ್ಮಿ ಶರತ್ ಕುಮಾರ್ ಬಹಿರಂಗವಾಗಿ ವಿಶಾಲ್ ವಿರೋಧಿ ಬರೆದುಕೊಂಡಿದ್ದರು. ಇಲ್ಲಿಂದ ಇಬ್ಬರ ನಡುವೆ ಇದ್ದ ಬಿರುಕು ಮತ್ತಷ್ಟು ಹೆಚ್ಚಾಯ್ತು ಅನ್ನೋದನ್ನು ವಿವಾದಾತ್ಮಕ ವಿಮರ್ಶಕ ಬೈಲ್ವಾನ್ ರಂಗನಾಥ್ ಹೇಳಿಕೊಂಡಿದ್ದಾರೆ.
ಆದರೆ, ಈ ಘಟನೆ ನಡೆಯುವುದಕ್ಕೆ ಮುನ್ನವೇ 2018ರಲ್ಲಿ ವರಲಕ್ಷ್ಮಿ ಶರತ್ ಕುಮಾರ್ ತಮ್ಮ ಲವ್ ಸ್ಟೋರಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. " ನಾವಿಬ್ಬರು ತುಂಬಾನೇ ಒಳ್ಳೆಯ ಸ್ನೇಹಿತರು. ನಾವಿಬ್ಬರೂ ಒಬ್ಬರಿಗೊಬ್ಬರು ಕೆಲವು ವಿಷಯಗಳನ್ನು ಹಂಚಿಕೊಳ್ಳುತ್ತೇವೆ. ಆದರೆ, ನಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಹಬ್ಬಿರುವ ಸುದ್ದಿ ಸುಳ್ಳು. ವಿಶಾಲ್ ಮದುವೆ ಆಗಬೇಕು ಅಂತ ಬಯಸಿದರೆ, ನಾನೇ ನಿಂತು ಹುಡುಗಿಯನ್ನು ಹುಡುಕುತ್ತೇನೆ." ಎಂದಿದ್ದರು.
ಇಷ್ಟೇ ಅಲ್ಲದೆ "ನನಗೆ ಮದುವೆ ಮೇಲೆ ನಂಬಿಕೆ ಇಲ್ಲ. ನಾನು ರಿಯಲ್ ಲೈಫ್‌ನಲ್ಲಿ ಮದುವೆ ಆಗುವುದಿಲ್ಲ. ಇದರ ಬಗ್ಗೆ ನನಗೆ ನಂಬಿಕೆ ಇಲ್ಲ" ಎಂದಿದ್ದರು. ಆದ್ರೀಗ ಬಾಯ್‌ಫ್ರೆಂಡ್ ಎನ್ನಲಾಗಿರುವ ಉದ್ಯಮಿ ನಿಕೋಲಾಯ್ ಸಚ್‌ದೇವ್ ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಶೀಘ್ರದಲ್ಲಿ ಮದುವೆ ಕೂಡ ಆಗಲಿದ್ದಾರೆ. ಈ ಮಧ್ಯೆ ತಮಿಳಿನ ವಿವಾದಾತ್ಮಕ ನಿರ್ದೇಶಕ ವಿಶಾಲ್ ಹಾಗೂ ವರಲಕ್ಷ್ಮಿ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಇಬ್ಬರ ಬ್ರೇಕಪ್‌ಗೆ ಶರತ್ ಕುಮಾರ್ ಜೊತೆಗಿನ ಕಿತ್ತಾಟ ಕಾರಣ ಅನ್ನುವ ಹೇಳಿಕೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.


Click it and Unblock the Notifications











