ಸುದೀಪ್ 46ನೇ ಸಿನಿಮಾ ಯಾವುದು? ಕಿಚ್ಚನಿಗೆ ಆಕ್ಷನ್ ಕಟ್ ಹೇಳೋದ್ಯಾರು? ಮತ್ತೆ ಶುರುವಾಯ್ತು ಚರ್ಚೆ!
ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಂತೆ ಸೈಲೆಂಟ್ ಆಗಿದ್ದಾರೆ. ಒಳ್ಳೆ ಕಥೆ ಸಿಗೋವರೆಗೂ ಸಿನಿಮಾ ಮಾಡದೆ ಇರೋಕೆ ನಿರ್ಧರಿಸಿದಂತಿದೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಇದೇ ನೀತಿಯನ್ನು ಅನುಸರಿಸುತ್ತಿದ್ದಾರೆ ಅಂತ ಅನಿಸುತ್ತಿದೆ.
'ವಿಕ್ರಾಂತ್ ರೋಣ' ರಿಲೀಸ್ ಆಗಿದ್ದೇ ಆಗಿದ್ದು, ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಸುದ್ದಿನೇ ಇಲ್ಲ. ಜುಲೈ 28, 2022 'ವಿಕ್ರಾಂತ್ ರೋಣ' ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಅಲ್ಲಿಂದ ಸರಿ ಸುಮಾರು 8 ತಿಂಗಳುಗಳೇ ಕಳೆದಿವೆ. ಮುಂದಿನ ಸಿನಿಮಾವನ್ನು ಇನ್ನೂ ಅನೌನ್ಸ್ ಮಾಡಿಲ್ಲ. ಹೀಗಾಗಿ ಕಿಚ್ಚನ 46ನೇ ಸಿನಿಮಾ ಯಾವುದು? ಅಂತ ಕೇಳುವುದಕ್ಕೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸಿನಿಮಾ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. 46ನೇ ಸಿನಿಮಾ ಬಗ್ಗೆನೂ ಚರ್ಚೆಯಾಗುತ್ತಿದೆ. ನೀವು ಅಂದುಕೊಂಡ ಸಿನಿಮಾ ಅಲ್ಲ. ಮತ್ತೊಂದು ಸಿನಿಮಾಗೆ ಕಿಚ್ಚ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಂತ ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಹಾಗಿದ್ರೆ, ಆ ಸಿನಿಮಾ ಯಾವುದು? ಯಾವಾಗ ಸೆಟ್ಟೇರುತ್ತೆ? ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿರೋ ಚರ್ಚೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಕಿಚ್ಚನ 46ನೇ ಸಿನಿಮಾ ಯಾವುದು?
ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್ 46ನೇ ಸಿನಿಮಾ ಬಗ್ಗೆ ಕುತೂಹಲವಿರೋದಂತೂ ನಿಜ. 'ವಿಕ್ರಾಂತ್ ರೋಣ' ಬಳಿಕ ಸುದೀಪ್ ವಲಯದಲ್ಲಿ ಎರಡು ಸಿನಿಮಾಗಳ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಒಂದು 'ಬಿಲ್ಲ ರಂಗ ಭಾಷಾ'. ಇನ್ನೊಂದು ತಮಿಳು ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಾರೆ ಎನ್ನಲಾದ ಸಿನಿಮಾ.
ಈ ಎರಡು ಸಿನಿಮಾಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನೋದು ಕಿಚ್ಚ ಅಭಿಮಾನಿಗಳ ಮುಂದಿರೋ ಪ್ರಶ್ನೆ. ಆದರೆ, ಸುದೀಪ್ ಇದೂವರೆಗೂ ಆ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಸದ್ಯಕ್ಕೀಗ ಕಿಚ್ಚನ 46ನೇ ಸಿನಿಮಾ 'ಬಿಲ್ಲ ರಂಗ ಭಾಷಾ' ಅನ್ನೋ ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ?

'ಬಿಲ್ಲ ರಂಗ ಭಾಷಾ'ಗೆ ಗ್ರೀನ್ ಸಿಗ್ನಲ್ ಕೊಟ್ರಾ?
ಕಿಚ್ಚ ಸುದೀಪ್ ಮತ್ತೆ ನಿರ್ದೇಶಕ ಅನುಪ್ ಭಂಡಾರಿ ಸಿನಿಮಾದಲ್ಲೇ ನಟಿಸುತ್ತಾರೆ ಅನ್ನೋ ಗುಲ್ಲೆದ್ದಿತ್ತು. ಈಗಾಗಲೇ ಅನುಪ್ ಭಂಡಾರಿ ಕೂಡ 'ಬಿಲ್ಲ ರಂಗ ಭಾಷಾ' ಕಥೆಯನ್ನು ಮಾಡುತ್ತಿರುವ ಬಗ್ಗೆ ಸುಳಿವನ್ನು ನೀಡಿದ್ದರು. ಈಗ ಕಿಚ್ಚ ಸುದೀಪ್ ಇದೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಗಾಂಧಿನಗರದಲ್ಲಿ ಓಡಾಡುತ್ತಿದೆ.
'ಬಿಲ್ಲ ರಂಗ ಭಾಷಾ' ಆಕ್ಷನ್ ಅಡ್ವೆಂಚರ್ ಸಿನಿಮಾ. ಈ ಸಿನಿಮಾ ಕೂಡ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತೆ. ಕನ್ನಡ ಚಿತ್ರರಂಗ ಇದೂವರೆಗೂ ನೋಡೇ ಇರದ ಕಥೆಯನ್ನು ತೆರೆಮೇಲೆ ತರುವುದಕ್ಕೆ ಅನುಪ್ ಭಂಡಾರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 'ವಿಕ್ರಾಂತ್ ರೋಣ' ಬಳಿಕ ಇದೇ ಸಿನಿಮಾಗೆ ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.
ವೆಂಕಟ್ ಪ್ರಭು ಸಿನಿಮಾ ಏನಾಯ್ತು?
'ಬಿಲ್ಲ ರಂಗ ಭಾಷಾ' ಸಿನಿಮಾ ಪ್ರಿ ಪ್ರೊಡಕ್ಷನ್‌ಗೆ ಹೆಚ್ಚು ಸಮಯ ಕೇಳುತ್ತಿದೆ. ಈ ಕಾರಣಕ್ಕೆ 'ವಿಕ್ರಾಂತ್ ರೋಣ' ಬಳಿಕ ಬೇರೆ ಸಿನಿಮಾದಲ್ಲಿ ನಟಿಸುವುದಕ್ಕೆ ಸುದೀಪ್ ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಇದೇ ವೇಳೆ ತಮಿಳು ನಿರ್ದೇಶಕ ವೆಂಕಟ್ ಪ್ರಭು ಕಿಚ್ಚ ಸುದೀಪ್ ಜೊತೆ ಕಾಣಿಸಿಕೊಂಡಿದ್ದರು. ಅಲ್ಲಿಂದ ಕಿಚ್ಚನ ಮುಂದಿನ ಸಿನಿಮಾ ಇವರೊಂದಿಗೆ ಅನ್ನೋ ಸುದ್ದಿ ಹಬ್ಬಿತ್ತು.
ಆದ್ರೀಗ ಗಾಂಧಿನಗರ ವೆಂಕಟ್ ಪ್ರಭು ನಿರ್ದೇಶನದ ಸಿನಿಮಾ ತಡವಾಗುತ್ತಿದೆ. ಈ ಕಾರಣಕ್ಕೆ ಸುದೀಪ್ ಮುಂದಿನ ಸಿನಿಮಾ 'ಬಿಲ್ಲ ರಂಗ ಭಾಷಾ' ಅನ್ನೋ ಸುದ್ದಿ ಹಬ್ಬಿದೆ. ಆದರೆ, ಈ ಬಗ್ಗೆ ಸುದೀಪ್ ಆಗಲಿ, ಅನುಪ್ ಭಂಡಾರಿ ಆಗಲಿ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಹೀಗಾಗಿ ಇದು ಕೇವಲ ಗಾಳಿ ಸುದ್ದಿನಾ? ಇಲ್ಲಾ ಸರ್ಪ್ರೈಸ್ ಏನಾದರೂ ಇದೆಯಾ? ಅನ್ನೋ ಕುತೂಹಲವಂತೂ ಇದ್ದೇ ಇದೆ.


Click it and Unblock the Notifications











