ದರ್ಶನ್ ಜೈಲು ಸೇರುವುದಕ್ಕೂ ಮುನ್ನ ಅಡ್ವಾನ್ಸ್ ಕೊಟ್ಟ ನಿರ್ಮಾಪಕರು ಇವರೇನಾ? ಕೊಟ್ಟಿದ್ದೆಷ್ಟು ಕೋಟಿ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೋಪಿಯಾಗಿ ಜೈಲು ಸೇರಿದೇ ಹೋಗಿದ್ದರೆ, ಇನ್ನೊಂದಿಷ್ಟು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆಯಿತ್ತು. 'ಡೆವಿಲ್' ಸಿನಿಮಾ ಬಿಟ್ಟು ಈಗಾಗಲೇ ದರ್ಶನ್‌ಗೆ ಹಲವು ನಿರ್ಮಾಪಕರು ಕಮಿಟ್ ಆಗಿದ್ದಾರೆ. ದೊಡ್ಡ ಮೊತ್ತದಷ್ಟು ಅಡ್ವಾನ್ಸ್ ಹಣವನ್ನೇ ಕೊಟ್ಟಿದ್ದಾರೆ ಅನ್ನೋ ಮಾತು ಸ್ಯಾಂಡಲ್‌ವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ದರ್ಶನ್ ಜೊತೆ ಸಿನಿಮಾ ಮಾಡಬೇಕು ಅನ್ನೋದು ಹಲವು ನಿರ್ಮಾಪಕರ ಕನಸು. ಈ ಕಾರಣಕ್ಕೆ ಕನ್ನಡದಲ್ಲಿಯೇ ಹಲವು ನಿರ್ಮಾಪಕರು ದರ್ಶನ್ ಜೊತೆ ಸಿನಿಮಾ ಮಾಡುವುದಕ್ಕೆ ಕ್ಯೂನಲ್ಲಿ ನಿಂತಿದ್ದಾರೆ. ಅವರಲ್ಲಿ ಕೆಲವರಿಗೆ ಡೇಟ್ ಸಿಕ್ಕಿದೆ. ಮತ್ತೆ ಕೆಲವರಿಗೆ ಇನ್ನೂ ಸಿಗಬೇಕಿದೆ. ಸದ್ಯದ ಮಾಹಿತಿ ಪ್ರಕಾರ 'ಡೆವಿಲ್' ಬಿಟ್ಟು ದರ್ಶನ್ ನಾಲ್ಕೈದು ಮಂದಿ ನಿರ್ಮಾಪಕರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಗೇ ಅವರಿಂದ ಮುಂಗಡವಾಗಿ ಹಣವನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಯಾವಾಗ ಜೈಲಿನಿಂದ ಹೊರಬರುತ್ತಾರೆ? ಅನ್ನೋದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ. ಈಗಾಗಲೇ ಅವರು ನಟಿಸುತ್ತಿದ್ದ 'ಡೆವಿಲ್' ಸಿನಿಮಾದ ಶೂಟಿಂಗ್ ನಿಂತಿದೆ. ಈ ಬೆನ್ನಲ್ಲೇ ಈಗಾಗಲೇ ಅಡ್ವಾನ್ಸ್ ಕೊಟ್ಟಿರುವ ನಿರ್ಮಾಪಕರು ಕಂಗಾಲಾಗಿದ್ದಾರೆ ಅಂತ ವರದಿಗಳಾಗಿವೆ. ಅಷ್ಟಕ್ಕೂ ದರ್ಶನ್ ಜೊತೆ ಯಾರೆಲ್ಲ ಸಿನಿಮಾ ಮಾಡಬೇಕಿತ್ತು? ಅವರು ಕೊಟ್ಟಿದ್ದ ಅಡ್ವಾನ್ಸ್ ಎಷ್ಟು? ಇಲ್ಲಿದೆ ಮಾಹಿತಿ.
'ಕಾಟೇರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದ್ದಂತೆ ದರ್ಶನ್‌ಗೆ ಬೇಡಿಕೆ ಹೆಚ್ಚಾಗಿತ್ತು. ಕೇವಲ ಕನ್ನಡದ ನಿರ್ಮಾಪಕರಷ್ಟೇ ಅಲ್ಲ. ತೆಲುಗು ಹಾಗೂ ತಮಿಳು ನಿರ್ಮಾಪಕರು ಕೂಡ ದರ್ಶನ್‌ಗೆ ಸಿನಿಮಾ ಮಾಡುವುದಕ್ಕೆ ಮುಂದೆ ಬಂದಿದ್ದರು. ದರ್ಶನ್ ಕೂಡ ಬೇರೆ ಭಾಷೆಯ ನಿರ್ಮಾಪಕರ ಜೊತೆ ಸಿನಿಮಾ ಮಾಡುವುದಕ್ಕೆ ಒಪ್ಪಿದ್ದರು ಎನ್ನಲಾಗಿದೆ. ಅಷ್ಟರೊಳಗೆ ಇಷ್ಟೆಲ್ಲ ನಡೆದು ಹೋಗಿದೆ.
ಕನ್ನಡ ಚಿತ್ರರಂಗದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, 'ಡೆವಿಲ್' ಸಿನಿಮಾ ನಂತರ ಐದು ಸಿನಿಮಾಗಳು ಲೈನ್‌ಅಪ್ ಆಗಿದ್ದವು. ಅದರಲ್ಲಿ ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಸಿನಿಮಾ ಕೂಡ ಒಂದು. ಇದೇ ಸಿನಿಮಾವನ್ನು ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ದೊಡ್ಡ ನಿರ್ಮಾಣ ಸಂಸ್ಥೆ ಆಗಿದ್ದರಿಂದ ಅಡ್ವಾನ್ಸ್ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸದ್ಯ ಧ್ರುವ ಸರ್ಜಾ ನಟಿಸುತ್ತಿರುವ 'ಕೆಡಿ' ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ ಎನ್ನಲಾಗುತ್ತಿದೆ.

ಕನ್ನಡದ ಹಿರಿಯ ನಿರ್ಮಾಪಕ ಸೂರಪ್ಪ ಬಾಬು ಕೂಡ ದರ್ಶನ್ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಇವರೂ ಕೂಡ ದರ್ಶನ್ ಕಾಲ್‌ಶೀಟ್ ಪಡೆದಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಎರಡು ಕೋಟಿ ಅಡ್ವಾನ್ಸ್ ಕೂಡ ನೀಡಿದ್ದರು ಎಂದು ವರದಿಗಳಾಗಿವೆ. ಹೈದರಾಬಾದ್‌ನ ನಿರ್ಮಾಪಕ ಪ್ರಸಾದ್, ತಮಿಳು ಚಿತ್ರರಂಗದ ರಮೇಶ್ ಪಿಳ್ಳೈ ಎಂಬುವವರು ಕೂಡ ದರ್ಶನ್‌ಗೆ ತಲಾ ಒಂದೊಂದು ಕೋಟಿ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದಾರೆ ಎನ್ನಲಾಗಿದೆ.
'ಕಾಟೇರ'ದಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಬಳಿಕ ದರ್ಶನ್‌ಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಿತ್ತು. ಇಂತಹ ಸಂದರ್ಭದಲ್ಲಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ತಗಲಾಕಿಕೊಂಡಿದ್ದು, ನಿರ್ಮಾಪಕರನ್ನು ಕಂಗಾಲು ಮಾಡಿದೆ ಎನ್ನಲಾಗಿದೆ. ಸಿನಿಮಾ ಮಾಡಬೇಕಾ ಬೇಡವಾ ಅನ್ನೋ ಗೊಂದಲಕ್ಕೆ ಸಿಲುಕಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.


Click it and Unblock the Notifications











