ರಾಮ್ ಚರಣ್, ಚಿರಂಜೀವಿ, ಪವನ್ ಕಲ್ಯಾಣ್ ಫ್ಯಾನ್ಸ್ 'ಪುಷ್ಪ 2' ನೋಡುವುದಿಲ್ವಾ? ಆ ಶೋಗಳ ಕಥೆಯೇನು?
ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾ ಬಿಡುಗಡೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಎಲ್ಲಾ ಕಡೆಗಳಲ್ಲಿಯೂ ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ. ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಕರ್ನಾಟಕದಲ್ಲಿ ಸ್ಪೆಷಲ್ ಶೋ ಶುರುವಾಗುತ್ತಿದೆ. ಆದರೆ, ಮುಂದಿನ ಐದು ದಿನಗಳಲ್ಲಿ ಅಡ್ವಾನ್ಸ್ ಬುಕಿಂಗ್ ಹೇಗಾಗುತ್ತೆ? ಅನ್ನುವ ಕುತೂಹಲ ಸಿನಿಮಾ ಮಂದಿಯಲ್ಲಿದೆ.
'ಪುಷ್ಪ 2' ಸಿನಿಮಾವನ್ನು ವಿಶ್ವದಾದ್ಯಂತ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಮೆಗಾ ರಿಲೀಸ್ ಮಾಡಬೇಕು ಅಂತ ಚಿತ್ರತಂಡ ಕೂಡ ನಿರ್ಧರಿಸಿದೆ. ಇದೇ ಬೆನ್ನಲ್ಲೇ ತೆಲುಗು ಮಾಧ್ಯಮಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿತ್ತು. ಇದು ಅಲ್ಲು ಅರ್ಜುನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇಂತಹದ್ದೊಂದು ಸುದ್ದಿ ಟಾಲಿವುಡ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ಕಳೆದ ಕೆಲವು ತಿಂಗಳಿನಿಂದ ಅಲ್ಲು ಅರ್ಜುನ್ ಹಾಗೂ ಮೆಗಾಸ್ಟಾರ್ ಕುಟುಂಬದ ನಡುವೆ ಸಂಬಂಧ ಸರಿಯಾಗಿ ಇಲ್ಲ ಅನ್ನುವ ಬಗ್ಗೆ ಸುದ್ದಿ ಓಡಾಡುತ್ತಿದೆ. ಮೆಗಾ ಕುಟುಂಬದ ಹೀರೋ ಒಂದೆಡೆಯಾದರೆ, ಇನ್ನೊಂದೆಡೆ ಅಲ್ಲು ಅರ್ಜುನ್ ಒಟ್ಟಿಯಾಗಿದ್ದಾರೆ. ಅಂದರೆ, ಮೆಗಾ ಕುಟುಂಬದ ಹೀರೋಗಳ ಜೊತೆ ಅಲ್ಲು ಅರ್ಜುನ್ ಸೇರುತ್ತಿಲ್ಲ. ಈ ವಿಷಯ ಅಭಿಮಾನಿಗಳವರೆಗೂ ಬಂದು ನಿಂತಿದೆ.
ಇತ್ತೀಚೆಗೆ ರಾಮ್ ಚರಣ್ ನಟನೆಯ ಸಿನಿಮಾ 'ಗೇಮ್ ಚೇಂಜರ್' ಕಾರ್ಯಕ್ರಮದ ವೇಳೆ ಮೆಗಾ ಫ್ಯಾನ್ಸ್ ಪರೋಕ್ಷವಾಗಿ ಅಲ್ಲು ಅರ್ಜುನ್‌ಗೆ ಟಾಂಗ್ ಕೊಟ್ಟಿದ್ದರು. ಅಲ್ಲಿಂದ ಎರಡೂ ಕುಟುಂಬಗಳ ನಡುವೆ ಏನೂ ಸರಿಯಿಲ್ಲ. ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಅರ್ಜುನ್ ನಡುವಿನ ಪರಿಸ್ಥಿತಿ ಬಿಗಡಾಯಿಸಿದೆ ಅನ್ನೋದು ಗೊತ್ತಾಗಿತ್ತು. ಈಗ ಇಬ್ಬರ ಅಭಿಮಾನಿಗಳು ಅಖಾಡಕ್ಕೆ ಇಳಿದಿರುವುದರಿಂದ 'ಪುಷ್ಪ 2'ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮೆಗಾ ಫ್ಯಾಮಿಲಿ ಜೊತೆಯಲ್ಲಿದ್ದ ಅಲ್ಲು ಅರ್ಜುನ್‌ಗೆ ಆ ಹೀರೊಗಳ ಬೆಂಬಲ ಕೂಡ ಸಿಗುತ್ತಿತ್ತು. ಯಾವುದೇ ಸಿನಿಮಾ ರಿಲೀಸ್ ಆದರೂ, ಮೆಗಾ ಫ್ಯಾನ್ಸ್ ಕೂಡ ಥಿಯೇಟರ್‌ನಲ್ಲಿ ಹಾಜರಾಗುತ್ತಿದ್ದರು. ಆದರೆ, ಈ ಬಾರಿ ತೆಲುಗು ರಾಜ್ಯಗಳಲ್ಲಿ ಪರಿಸ್ಥಿತಿ ಬೇರೆನೇ ಇದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳನ್ನು ಅರ್ಮಿ ಎಂದು ಕರೆದಿದ್ದರು. ಅದು ಮೆಗಾ ಫ್ಯಾಮಿಲಿಯ ಅಭಿಮಾನಿಗಳಿಗೆ ಹಿಡಿಸಿಲ್ಲ ಎನ್ನಲಾಗಿದೆ. ಹೀಗಾಗಿ ಪುಷ್ಪ ಸಿನಿಮಾವನ್ನು ನೋಡದೇ ಇರಲಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
'ಪುಷ್ಪ 2' ರಿಲೀಸ್ ಹತ್ತಿರ ಆಗುತ್ತಿದ್ದಂತೆ ಅಲ್ಲು ಅರ್ಜುನ್ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಇತ್ತ ನಿರ್ಮಾಪಕ ಬೆನಿಫಿಟ್ ಶೋಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ಶೋಗಳಲ್ಲಿ ತೆಲುಗು ರಾಜ್ಯಗಳಲ್ಲಿ ಡಿಮ್ಯಾಂಡ್ ಇಲ್ಲ ಅನ್ನೋ ಮಾತು ಹೇಳಿ ಬರುತ್ತಿದೆ. ಮೆಗಾ ಫ್ಯಾನ್ಸ್ ಬೆಂಬಲ ನೀಡದೇ ಹೋದರೆ, ಅಲ್ಲು ಅರ್ಜುನ್‌ಗೆ ಬೆನಿಫಿಶ್ ಶೋಗೆ ರೆಸ್ಪಾನ್ಸ್ ಸಿಗೋದಿಲ್ಲ ಅನ್ನೋ ಕಾಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಸದ್ಯ ಇದು ದೊಡ್ಡ ಚರ್ಚೆ ಎಡೆ ಮಾಡಿಕೊಟ್ಟಿದೆ.
ಆಂಧ್ರ ಹಾಗೂ ತೆಲಂಗಾಣದಲ್ಲಿ ಎರಡೂ ರಾಜ್ಯಗಳಲ್ಲಿ 'ಪುಷ್ಪ 2' ರಿಲೀಸ್ ವೇಳೆ ಹೈ ಡ್ರಾಮ ನಡೆಯುತ್ತಿದೆ. ಅಲ್ಲು ಅರ್ಜುನ್ ಸಿನಿಮಾವನ್ನು ಮೆಗಾ ಕುಟುಂಬದ ಅಭಿಮಾನಿಗಳು ನೋಡುತ್ತಾರೋ ಇಲ್ಲವೋ ಅನ್ನೋದು ಸದ್ಯದ ಚರ್ಚೆ. ಇನ್ನು ಈಗಷ್ಟೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಟಿಕೆಟ್ ಬೆಲೆಯನ್ನು ಗಗನಕ್ಕೆ ಏರಿಸಲಾಗಿದೆ. ಇದರ ವಿರುದ್ಧವೂ ಕೂಡ ಸಿನಿಪ್ರಿಯರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.


Click it and Unblock the Notifications











