ಶಾರುಖ್, ನಯನತಾರಾ ಜೋಡಿಯ 'ಜವಾನ್' ಬಜೆಟ್ ಎಷ್ಟು? ಬಾಕ್ಸಾಫೀಸ್‌ನಲ್ಲಿ ಮತ್ತೆ 'ಕಿಂಗ್' ಆಗ್ತಾರಾ ಖಾನ್?
ಇನ್ನೇನು ಶಾರುಖ್ ಖಾನ್ ಕೆರಿಯರ್ ಮುಗಿದೇ ಹೋಯ್ತು. ಇನ್ನು ಬಾಲಿವುಡ್‌ನಲ್ಲಿ ಶಾರುಖ್ ಖಾನ್ ಕಿಂಗ್ ಆಗಿ ಮೆರೆಯೋಕೆ ಆಗಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಕಾರಣಕ್ಕೆ ನಾಲ್ಕು ವರ್ಷ ಗ್ಯಾಪ್ ಕೊಟ್ಟು 'ಪಠಾಣ್' ಅವತಾರವೆತ್ತಿ ಬಂದಿದ್ದರು.
'ಪಠಾಣ್' ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದೇ ಇಟ್ಟಿದ್ದು, ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಇದ್ದ ಎಲ್ಲಾ ದಾಖಲೆಗಳನ್ನು ಹೊಡೆದು ಹಾಕಿತ್ತು. ಕಿಂಗ್ ಖಾನ್ ಮತ್ತೆ ಬಾಲಿವುಡ್‌ನಲ್ಲಿ ರಾರಾಜಿಸೋಕೆ ಶುರು ಮಾಡಿದ್ದಾರೆ. ಈಗ ಶಾರುಖ್ ಖಾನ್ ಮತ್ತೊಂದು ಸಿನಿಮಾ 'ಜವಾನ್' ಬಗ್ಗೆ ಎಲ್ಲರ ಕಣ್ಣು ಇಟ್ಟಿದ್ದಾರೆ.

ಕಮ್ ಬ್ಯಾಕ್ ಮಾಡಿ ಬಾಕ್ಸಾಫೀಸ್ ದಾಖಲೆಯನ್ನು ಧೂಳೀಪಟ ಮಾಡಿದ್ದ ಶಾರುಖ್ 'ಜವಾನ್'ಗಾಗಿ ಎದುರು ನೋಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಶಾರುಖ್ ಹಾಗೂ ನಯನತಾರಾ ಇದೇ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿರೋದು ಇಷ್ಟೆಲ್ಲ ಕುತೂಹಲಕ್ಕೆ ಕಾರಣ. ಈ ಬೆನ್ನಲ್ಲೇ 'ಜವಾನ್' ಸಿನಿಮಾದ ಬಜೆಟ್ ಬಗ್ಗೆ ಬಾಲಿವುಡ್‌ನಲ್ಲಿ ಜೋರಾಗಿಯೇ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ದುಬಾರಿ ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದ ಬಜೆಟ್ ಎಷ್ಟು? ತಿಳಿಯಲು ಮುಂದೆ ಓದಿ.
'ಜವಾನ್' ಸಿನಿಮಾ ಬಜೆಟ್ ಎಷ್ಟು?
ಒಂದು ಸಿನಿಮಾದಲ್ಲಿ ಸೂಪರ್‌ಸ್ಟಾರ್‌ಗಳು ಇದ್ಮೇಲೆ ಬಜೆಟ್ ಚಿಕ್ಕದಂತೂ ಆಗಿರೋಕೆ ಸಾಧ್ಯವೇ ಇಲ್ಲ. ಅದರಲ್ಲೂ ಶಾರುಖ್ ಖಾನ್ ಸಿನಿಮಾ ಬಜೆಟ್ 100 ಕೋಟಿ ಎಲ್ಲ ಸಾಕಾಗೋದೇ ಇಲ್ಲ. ಅದರಲ್ಲೂ 'ಜವಾನ್' ಹೇಳಿ ಕೇಳಿ ಆಕ್ಷನ್ ಸಿನಿಮಾ ಆಗಿರೋದ್ರಿಂದ ಬಜೆಟ್ ಬಗ್ಗೆ ಕುತೂಹಲ ಮೂಡೋದು ಸಹಜ.
'ಜವಾನ್' ಸಿನಿಮಾ ಕೇವಲ ಸ್ಟಾರ್ ಕಾಸ್ಟ್‌ನಿಂದಷ್ಟೇ ಚರ್ಚೆಯಾಗುತ್ತಿಲ್ಲ. ಸಿನಿಮಾದ ಬಜೆಟ್ ಬಗ್ಗೆ ಕೂಡ ಅಷ್ಟೇ ಚರ್ಚೆಯಾಗುತ್ತಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರೋದ್ರಿಂದ ಆಟ್ಲಿ ಹೆವೀ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿರುವ ಪ್ರಕಾರ, 'ಜವಾನ್' ಬಜೆಟ್ 220 ಕೋಟಿ ರೂ. ಎನ್ನಲಾಗಿದೆ.

ಯಾಕೀಷ್ಟು ಬಜೆಟ್?
'ಜವಾನ್' ಸಿನಿಮಾಗಾಗಿ ಯಾಕಿಷ್ಟು ಬಜೆಟ್? ಅನ್ನೋ ಪ್ರಶ್ನೆ ಮೂಡುವುದು ಸಹಜ. ಆಟ್ಲೀ ಹೇಳಿ ಕೇಳಿ ಮಾಸ್ ಸಿನಿಮಾ ಮಾಡುವುದರಲ್ಲಿ ಎಕ್ಸ್‌ಪರ್ಟ್. ಈ ಸಿನಿಮಾದಲ್ಲೂ ಮಾಸ್ ಆಕ್ಷನ್ ಸೀನ್‌ಗಳಿವೆ. ಈಗಾಗಲೇ ರಿಲೀಸ್ ಆಗಿರೋ ಒಂದು ಝಲಕ್ ಇದಕ್ಕೆ ಸಾಕ್ಷಿ. ಜೊತೆಗೆ ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.
ಅಟ್ಲೀ ಈ ಸಿನಿಮಾವನ್ನು ದುಬಾರಿ ಲೋಕೇಶ್‌ಗಳಲ್ಲಿ ಶೂಟಿಂಗ್ ಮಾಡುತ್ತಿದ್ದಾರಂತೆ. ಹಾಗೇ ಈ ಸಿನಿಮಾದಲ್ಲಿ ಹೆಚ್ಚು ವಿಎಫ್‌ಎಕ್ಸ್ ಇರುವುದರಿಂದ ಹೆಚ್ಚು ಖರ್ಚು ಆಗುತ್ತಿದೆ ಎನ್ನಲಾಗಿದೆ. ಇದರೊಂದಿಗೆ ಹೈವೋಲ್ಟೆಜ್ ಆಕ್ಷನ್ ಸೀಕ್ವೆನ್ಸ್ ಕೂಡ ಈ ಸಿನಿಮಾದಲ್ಲಿರುವುದರಿಂದ ಬಜೆಟ್ 220 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಬಾಕ್ಸಾಫೀಸ್ ದಾಖಲೆ ಮುರಿಯುತ್ತಾ?
ಅಟ್ಲೀ ನಿರ್ದೇಶಿಸೋ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತವೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ದಳಪತಿ ವಿಜಯ್ ಹಾಗೂ ಸಂಜಯ್ ದತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತೆ ಎಂದೇ ನಿರೀಕ್ಷೆ ಮಾಡಲಾಗಿದೆ.
ಇನ್ನೊಂದು ಕಡೆ ಅಟ್ಲೀ ನಿರ್ದೇಶಿಸಿದ ಸಿನಿಮಾಗಳು ಇದೂವರೆಗೂ ಸೋತಿಲ್ಲ. 'ರಾಜಾ ರಾಣಿ', 'ತೇರಿ', 'ಮರ್ಸೆಲ್', 'ಬಿಗಿಲ್' ಅಂತ ಸಿನಿಮಾಗಳು ಬಾಕ್ಸಾಫೀಸ್ ಅನ್ನೇ ಕೊಳ್ಳೆ ಹೊಡೆದಿವೆ. ಇನ್ನು 'ಜವಾನ್' ಪ್ಯಾನ್ ಇಂಡಿಯಾ ಆಗಿರೋದ್ರಿಂದ ಹಿಂದಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications











