ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ 'ಡ್ರ್ಯಾಗನ್' ಯಶ್ 'ಕೆಜಿಎಫ್', ಪ್ರಭಾಸ್ 'ಸಲಾರ್'ಗಿಂತ ದೊಡ್ಡದೇ?
RRR ಬಳಿಕ ಜೂನಿಯರ್ ಎನ್‌ಟಿಆರ್‌ಗೆ ಸಿನಿಮಾ ಕೈ ಹಿಡಿದಿಲ್ಲ. ಗ್ಲೋಬಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದರೂ 'ದೇವರ' ಹಾಗೂ 'ವಾರ್ 2' ಸಿನಿಮಾ ನಿರೀಕ್ಷೆ ಮಾಡಿದಷ್ಟು ಸದ್ದು ಮಾಡಲಿಲ್ಲ. ಹಾಗಂತ ಜೂ.ಎನ್‌ಟಿಆರ್ ಜನಪ್ರಿಯತೆ ಏನೂ ಕಮ್ಮಿಯಾಗಿಲ್ಲ. ಅವರ ಅಭಿಮಾನಿಗಳು ಮತ್ತೊಂದು ಸಿನಿಮಾಗಾಗಿ ಕಾಯುತ್ತಿದ್ದಾರೆ. ಇದು ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡುತ್ತೆ ಎಂದು ಅಚಲ ಭರವಸೆಯನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ.
'ವಾರ್ 2' ಸಿನಿಮಾ ಸೋತರೂ ಬಾಲಿವುಡ್ ಮಂದಿಗೆ ಜೂ.ಎನ್‌ಟಿಆರ್ ಇಷ್ಟ ಆಗಿದ್ದಾರೆ. ಹೀಗಾಗಿ ಜೂನಿಯರ್ ಎನ್‌ಟಿಆರ್‌ಗಾಗಿ ಯಶ್ ರಾಜ್ ಫಿಲ್ಮ್ಸ್ ಮತ್ತೊಂದು ಸಿನಿಮಾ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ. ತಮ್ಮ ಬಹುಮುಖ ಪ್ರತಿಭೆ ಸಿನಿಮಾ ಮಂದಿಗೆ ಇಷ್ಟ ಆಗಿದೆ. ನಟನೆ, ಡ್ಯಾನ್ಸ್, ಆಕ್ಷನ್ ಎಲ್ಲದಕ್ಕೂ ಜೂ.ಎನ್‌ಟಿಆರ್ ಸೈ. ಹೀಗಾಗಿ ನಿರ್ದೇಶಕರುಗಳಿಗೆ ಯಂಗ್ ಟೈಗರ್ ಸಿಕ್ಕಾಪಟ್ಟೆ ಇಷ್ಟ.

ಬಾಲಿವುಡ್ ಸಿನಿಮಾ 'ವಾರ್ 2' ಏನಾದರೂ ಹಿಟ್ ಆಗಿದ್ದರೆ, ಜೂ.ಎನ್‌ಟಿಆರ್ ವೃತ್ತಿ ಬದುಕು ಮತ್ತೊಂದು ಲೆವೆಲ್‌ಗೆ ಹೋಗುತ್ತಿತ್ತು. ಆದರೂ, ಅಭಿಮಾನಿಗಳೇನು ನಿರಾಸೆ ಮಾಡಿಕೊಂಡಿಲ್ಲ. ಯಾಕಂದ್ರೆ, ಜೂ.ಎನ್‌ಟಿಆರ್ ಮತ್ತೊಂದು ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ. ಅದುವೇ ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್'. ಈ ಸಿನಿಮಾ ಪ್ರಶಾಂತ್ ನೀಲ್ ಅವರೇ ಇದೂವರೆಗೂ ನಿರ್ದೇಶಿಸಿದ ಎಲ್ಲಾ ಚಿತ್ರಗಳಿಗಿಂತಲೂ ಬಿಗ್ ಪ್ರಾಜೆಕ್ಟ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ 'ಕೆಜಿಎಫ್' ಹಾಗೂ 'ಸಲಾರ್'ನಂತಹ ಬ್ಲಾಕ್‌ಬಸ್ಟರ್ ಸಿನಿಮಗಳನ್ನು ಕೊಟ್ಟಿರುವ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಜೂ. ಎನ್‌ಟಿಆರ್ ಕೈ ಜೋಡಿಸುತ್ತಿದ್ದಾರೆ. ಈಗಾಗಲೇ 'ಡ್ರ್ಯಾಗನ್' ಎಂಬ ಟೈಟಲ್ ಅಭಿಮಾನಿಗಳ ಬಾಯಲ್ಲಿ ಹರಿದಾಡುತ್ತಿದೆ. ಆದರೆ, ಚಿತ್ರತಂಡ ಇನ್ನೂ ಅಧಿಕೃತವಾಗಿ ಟೈಟಲ್ ಅನ್ನು ಅನೌನ್ಸ್ ಮಾಡಿಲ್ಲ. ಪ್ರಶಾಂತ್ ನೀಲ್ ಈಗಾಗಲೇ ಸಿನಿಮಾದ ಚಿತ್ರೀಕರಣವನ್ನು ಅನೌನ್ಸ್ ಮಾಡಿದ್ದಾರೆ.
ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಇದು ಪ್ರಶಾಂತ್ ನೀಲ್ ಇದುವರೆಗೂ ನಿರ್ದೇಶಿಸಿದ ಅತ್ಯಂತ ದುಬಾರಿ ಸಿನಿಮಾ ಆಗಲಿದೆ. ಜೂ.ಎನ್‌ಟಿಆರ್‌ಗಾಗಿ ಪ್ರಶಾಂತ್ ನೀಲ್ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ. ಚಿತ್ರತಂಡದ ಆಪ್ತ ಮೂಲಗಳ ಪ್ರಕಾರ, ಪ್ರಶಾಂತ್ ನೀಲ್ ಹಾಗೂ ಜೂ. ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ ಇಡೀ ದೇಶವೇ ತಿರುಗಿ ನೋಡುವಂತೆ ಮಾಡುತ್ತೆ. ಪ್ರಶಾಂತ್ ನೀಲ್ ಈ ಹಿಂದೆ ನಿರ್ದೇಶಿಸಿದ 'ಕೆಜಿಎಫ್' ಹಾಗೂ 'ಸಲಾರ್'ನಂತಹ ಪ್ಯಾನ್-ಇಂಡಿಯಾ ಬ್ಲಾಕ್‌ಬಸ್ಟರ್‌ಗಳ ಬಜೆಟ್ ಅನ್ನೂ ಮೀರಿಸುತ್ತೆ ಎನ್ನಲಾಗಿದೆ.
ಪ್ರಶಾಂತ್ ನೀಲ್ ಈ ಸಿನಿಮಾ ಶುರು ಮಾಡಿದ ದಿನದಿಂದಲೂ ದೊಡ್ಡದಾಗಿ ನಿರ್ಮಾಣ ಮಾಡಬೇಕು ಎಂದು ಕನಸು ಕಂಡಿದ್ದರು. ನಿರ್ಮಾಣ ಸಂಸ್ಥೆ ಕೂಡ ಬಜೆಟ್ ಮೇಲೆ ನಿರ್ಬಂಧಗಳು ಹಾಕದೇ ಇರುವುದರಿಂದ ತಮ್ಮ ನೆಚ್ಚಿನ ನಟ ಎನ್.ಟಿ.ಆರ್.ಗಾಗಿ ಮೆಗಾ ಬಜೆಟ್‌ನಲ್ಲಿ ಸಿನಿಮಾ ನೀಡುವುದಕ್ಕೆ ಹೊರಟಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಶುರುವಾಗಿದ್ದು, ಇದೂವರೆಗೂ ಚಿತ್ರೀಕರಣ ಆಗಿದ್ದು ಪ್ರಶಾಂತ್ ನೀಲ್‌ಗೆ ಸಿಕ್ಕಾಪಟ್ಟೆ ಖುಷಿಕೊಟ್ಟಿದೆಯಂತೆ.
ಅಂದ್ಹಾಗೆ ಈ ಮೆಗಾ ಕಾಂಬಿನೇಷನ್ ಸಿನಿಮಾ 2026ರ ಜೂನ್ 25ಕ್ಕೆ ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಇನ್ನು ಈ ಸಿನಿಮಾದ ಫಸ್ಟ್ ಲುಕ್ ಅನ್ನು ಈಗಾಗಲೇ ರಿಲೀಸ್ ಮಾಡಬೇಕಿತ್ತು. ಆದರೆ, 'ವಾರ್ 2' ಸಿನಿಮಾ ರಿಲೀಸ್ ಆಗುತ್ತಿದ್ದರಿಂದ ಫಸ್ಟ್ ಲುಕ್ ಅನ್ನು ಮುಂದೂಡಲಾಗಿತ್ತು. ಈ ಸಿನಿಮಾ ಕೂಡ ಟಿಪಿಕಲ್ ಪ್ರಶಾಂತ್ ನೀಲ್ ಶೈಲಿಯಲ್ಲಿ ಇರುತ್ತೆ ಎಂದು ಹೇಳಲಾಗುತ್ತಿದೆ. ಇನ್ನು ಜೂನಿಯರ್ ಎನ್‌ಟಿಆರ್ ಮಾಸ್ ಟ್ರೀಟ್ಮೆಂಟ್ ಕೂಡ ಇರುತ್ತೆ. ಹೀಗಾಗಿ ಅಭಿಮಾನಿಗಳಿಗೆ ಡಬಲ್ ಧಮಾಕಾ ಗ್ಯಾರಂಟಿ. ಆದರೆ, ಇನ್ನೂ ಒಂದು ವರ್ಷ ಕಾಯಲೇಬೇಕು ಅನ್ನೋದು ಅಷ್ಟೇ ಸತ್ಯ.


Click it and Unblock the Notifications











