ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರಾ ಪುನೀತ್ ರಾಜ್ ಕುಮಾರ್-ಯಶ್?
ಪರಭಾಷೆಗಳಲ್ಲಿ ನಡೆಯುವಂತೆ ಕನ್ನಡದಲ್ಲಿಯೂ ಪ್ರಮುಖ ನಟರು ಸೇರಿ ಸಿನಿಮಾಗಳನ್ನು ಮಾಡಬೇಕು ಎನ್ನುವುದು ಅಭಿಮಾನಿಗಳ ಬೇಡಿ. ಹಾಗೆ ನೋಡಿದರೆ ಕನ್ನಡದಲ್ಲಿ ಬಹುತಾರಾಬಳಗದ ಸಿನಿಮಾಗಳು ಕಡಿಮೆ. ಅದರಲ್ಲಿಯೂ ತಾರಾ ನಟರು ತೆರೆ ಹಂಚಿಕೊಳ್ಳುವುದು ತೀರಾ ಕಡಿಮೆ. ಇತ್ತೀಚೆಗೆ 'ವಿಲನ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಜತೆಯಾಗಿ ನಟಿಸಿದ್ದರು.
ಸ್ಟಾರ್ ನಟರು ತಮ್ಮ ವೈಯಕ್ತಿಕ ವರ್ಚಸ್ಸು ಪ್ರದರ್ಶಿಸುವ ಸಿನಿಮಾಗಳಲ್ಲಿಯೇ ಕಾಣಿಸಿಕೊಳ್ಳಲು ಬಯಸುತ್ತಾರೆ ಎಂಬ ಮಾತಿದೆ. ಇವರು ಜತೆಯಾಗಿ ಸಿನಿಮಾ ಮಾಡಿದರೆ ಚಿತ್ರರಂಗದ ಬೆಳವಣಿಗೆಯಾಗುತ್ತದೆ ಹಾಗೆಯೇ ಅಭಿಮಾನಿಗಳ ಮಧ್ಯೆಯೂ ಒಗ್ಗಟ್ಟು ಮೂಡುತ್ತದೆ ಎನ್ನುವುದು ಹಲವರ ಅಭಿಪ್ರಾಯ. ನಟರಾದ ಪುನೀತ್ ರಾಜ್ ಕುಮಾರ್ ಮತ್ತು ಯಶ್ ಬಹುತಾರಾಗಣದ ಚಿತ್ರಗಳಲ್ಲಿ ನಟಿಸಿದ್ದರೂ ಇಬ್ಬರೂ ಜತೆಯಾಗಿ ನಟಿಸಿಲ್ಲ. ಅಭಿಮಾನಿಗಳ ಈ ಬಯಕೆ ಈಡೇರಲಿದೆಯೇ? ಇದರ ಸುಳಿವು ಸಿಕ್ಕಿದೆ. ಮುಂದೆ ಓದಿ.

ಒಟ್ಟಿಗೆ ತೆರೆಯ ಮೇಲೆ ನೋಡಬೇಕು
ಪವರ್ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್ ಇಬ್ಬರನ್ನೂ ಒಟ್ಟಿಗೆ ದೊಡ್ಡ ಪರದೆಯ ನೋಡಲು ಕಾತರದಿಂದ ಕಾದಿರುವುದಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ್ದಾರೆ. ಇದರಿಂದ ಪುನೀತ್ ಮತ್ತು ಯಶ್ ಅವರನ್ನು ಸೇರಿಸಿ ಅವರು ಸಿನಿಮಾ ಮಾಡಲಿದ್ದಾರೆ ಎಂಬ ನಿರೀಕ್ಷೆ ಮೂಡಿದೆ.

ನಾಂದಿ ಹಾಡಿದ ದಿನ
ತಾವು ನಿರ್ದೇಶಕರಾಗುವ ಪ್ರಯತ್ನಕ್ಕೆ ಮೊದಲ ಹೆಜ್ಜೆ ಇರಿಸಿದ ದಿನವನ್ನು ಸಂತೋಷ್ ಆನಂದ್ ರಾಮ್ ನೆನಪಿಸಿಕೊಂಡಿದ್ದರು. 2013ರ ಜುಲೈ 23ರಂದು 'ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ' ಚಿತ್ರದ ಕಥೆಯನ್ನು ರಾಕಿಂಗ್ ಸ್ಟಾರ್ ಕೇಳುವ ಮೂಲಕ ನಿರ್ದೇಶಕನಾಗಿ ನಾಂದಿ ಹಾಡಿದ ದಿನ ಎಂದು ಅವರು ಸ್ಮರಿಸಿದ್ದಾರೆ.

ಹೆಮ್ಮೆ ಪಡುವ ನಿರ್ದೇಶಕ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯಶ್, ಸಂತೋಷ್ ಆನಂದ್‌ರಾಮ್‌ಗೆ ಧನ್ಯವಾದ ಹೇಳಿದ್ದಾರೆ. ಈ ವಿಶೇಷ ಸಿನಿಮಾ 'ಮಿ. ಆಂಡ್ ಮಿಸೆಸ್ ರಾಮಾಚಾರಿ ಮಾಡುವ ನನ್ನ ನಿರ್ಧಾರದ ಬಗ್ಗೆ ಖುಷಿಯಾಗುತ್ತದೆ. ಏಕೆಂದರೆ ನೀವು ನನ್ನ ನಿರೀಕ್ಷೆ ಹುಸಿಗೊಳಿಸಲಿಲ್ಲ. ಹಾಗೆಯೇ ನಾವೆಲ್ಲರೂ ಹೆಮ್ಮೆ ಪಡುವಂತಹ ನಿರ್ದೇಶಕ ನಮ್ಮ ಚಿತ್ರರಂಗಕ್ಕೆ ಇದರಿಂದ ಸಿಕ್ಕಿದ್ದಾರೆ ಎಂದಿದ್ದಾರೆ.

ಬ್ಲಾಕ್ ಬಸ್ಟರ್ ಬರುವ ಸೂಚನೆ
ಹಾಗೆಯೇ, ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ 'ಯುವರತ್ನ' ಚಿತ್ರದ ಬಗ್ಗೆಯೂ ಯಶ್ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ನೀವು ನನಗೆ ತೋರಿಸಿರುವ ಯುವರತ್ನದ ಹಾಡುಗಳು ಮತ್ತು ತುಣುಕುಗಳು ಬ್ಲಾಕ್ ಬಸ್ಟರ್ ಒಂದು ಬರುತ್ತಿದೆ ಎಂಬುದರ ಸೂಚನೆ ನೀಡಿದೆ. ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಯಶ್ ಹೇಳಿದ್ದಾರೆ.


Click it and Unblock the Notifications











