20 ದೇಶದಲ್ಲಿ ಶೂಟಿಂಗ್.. ರಾಜಮೌಳಿ- ಮಹೇಶ್ ಬಾಬು ಅಡ್ವೆಂಚರ್; ಸಿನಿಮಾ ಯಾವಾಗ ಶುರು?
RRR ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ರಾಜಮೌಳಿ ಗುರಿನೂ ಅದೇ ಮಟ್ಟದಲ್ಲಿದೆ. ಇದೂವರೆಗೂ ಪ್ಯಾನ್ ಇಂಡಿಯಾ ಸಿನಿಮಾ ಅಂತಿದ್ದ ರಾಜಮೌಳಿ ಪ್ಯಾನ್ ವರ್ಲ್ಡ್ ಸಿನಿಮಾ ಮಾಡುವತ್ತ ಹೆಜ್ಜೆ ಹಾಕುತ್ತಿದ್ದಾರಾ? ಇಂತಹದ್ದೊಂದು ಪ್ರಶ್ನೆ ಪೂರಕ ಎನಿಸುವಂತಹ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಅದು ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳುವುದಕ್ಕೆ ರಾಜಮೌಳಿ ಮಾಡಿಕೊಳ್ಳುತ್ತಿರುವ ತಯಾರಿ.
ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಆರಂಭಕ್ಕೂ ಮುನ್ನವೇ ಸದ್ದು ಮಾಡುತ್ತಿದೆ. ದಿನಕ್ಕೊಂದು ಸುದ್ದಿ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಹೇಳಿ ಕೇಳಿ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿರೋ ಸಿನಿಮಾ, ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ನಟಿಸುತ್ತಿರೋ ಸಿನಿಮಾ ಅಂದ್ಮೇಲೆ ಈ ಕ್ರೇಜಿ ಅನ್ನು ಸಿನಿ ಪ್ರಿಯರ ನಿರೀಕ್ಷೆ ಮಾಡಿದ್ದರು.

ಸದ್ಯ ಟಾಲಿವುಡ್‌ನಲ್ಲಿ ರಾಜಮೌಳಿ-ಮಹೇಶ್ ಬಾಬು ಕಾಂಬಿನೇಷನ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ರಾಜಮೌಳಿ ಈ ಸಿನಿಮಾ ವಿಶ್ವದ ಸುಮಾರು 20 ದೇಶಗಳಲ್ಲಿ ಚಿತ್ರೀಕರಣ ಮಾಡುತ್ತಾರೆಂಬ ಸುದ್ದಿ ಓಡಾಡುತ್ತಿದೆ. ಈಗಾಗಲೇ ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣಕ್ಕೆ ಬೇಕಿರೋ ಸಕಲ ತಯಾರಿಗಳನ್ನೂ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ರಾಜಮೌಳಿಯ RRR ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ ಬಳಿಕ ಮುಂದಿನ ಸಿನಿಮಾ ಬಜೆಟ್ ಲಿಮಿಟೇಷನ್ ಇರಲ್ಲ. ಈಗಾಗಲೇ ಈ ಕ್ರೇಜಿ ಕಾಂಬಿನೇಷನ್ ಸಿನಿಮಾ ಬಜೆಟ್ ಸುಮಾರು 1000 ಕೋಟಿ ರೂಪಾಯಿ ಎಂದು ಕೆಲವು ದಿನಗಳ ಹಿಂದಷ್ಟೇ ಗುಲ್ಲೆದ್ದಿತ್ತು. ಇದೊಂದು ಆಕ್ಷನ್ ಅಡ್ವೆಂಚರ್ ಸಿನಿಮಾ ಆಗಿರುವುದರಿಂದ ರಾಜಮೌಳಿಯ ಕಲ್ಪನೆ ಹೇಗಿರುತ್ತೆ ಅನ್ನೋದು ಊಹಿಸಿಕೊಳ್ಳುವುದೇ ಕಷ್ಟವಾಗಿದೆ.

ರಾಜಮೌಳಿ ಈಗಾಗಲೇ ಹಲವು ದೇಶಗಳನ್ನು ಸುತ್ತಿ ಬಂದಿದ್ದಾರಂತೆ. ಕೆಲವು ದೇಶದ ಪ್ರಮುಖ ಸ್ಥಳಗಳನ್ನು ಫೈನಲ್ ಮಾಡಿದ್ದಾರೆಂಬ ಮಾತು ಕೇಳಿ ಬರುತ್ತಿವೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, ಸುಮಾರು 20ಕ್ಕೂ ಅಧಿಕ ದೇಶಗಳಲ್ಲಿ ರಾಜಮೌಳಿ ಈ ಸಿನಿಮಾವನ್ನು ಶೂಟ್ ಮಾಡಲಿದ್ದಾರಂತೆ. ಲೋಕೇಶನ್ ಹುಡುಕುವ ಮಧ್ಯೆನೇ ಪ್ರೀ ಪ್ರೊಡಕ್ಷನ್ ಕಡೆಗೂ ರಾಜಮೌಳಿ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ರಾಜಮೌಳಿ ಸೂಪರ್‌ಸ್ಟಾರ್ ಮಹೇಶ್ ಬಾಬು ಲುಕ್ ಬಗ್ಗೆನೂ ಹೆಚ್ಚು ತಲೆಕೆಡಿಸಿಕೊಂಡಿದ್ದಾರಂತೆ. ಈಗಾಗಲೇ ಸಾಕಷ್ಟು ಲುಕ್ ಟೆಸ್ಟ್‌ಗಳನ್ನೂ ರಾಜಮೌಳಿ ಮಾಡಿದ್ದಾರಂತೆ. ಇಷ್ಟೇ ಅಲ್ಲದೆ ಸಿನಿಮಾ ಟೇಕಾಫ್ ಆಗುವುದಕ್ಕೂ ಮುನ್ನ ರಾಜಮೌಳಿ ದೊಡ್ಡ ಮಟ್ಟದಲ್ಲಿ ಎರಡು ವರ್ಕ್ ಶಾಪ್‌ಗಳನ್ನು ಮಾಡುವುದಕ್ಕೂ ಆಲೋಚನೆ ಮಾಡಿದ್ದಾರಂತೆ. ಈ ಹಿಂದೆ ರಾಜಮೌಳಿ ಏಪ್ರಿಲ್‌ನಲ್ಲಿ ಸಿನಿಮಾ ಶೂಟಿಂಗ್ ಶುರು ಮಾಡುತ್ತಾರೆ ಅಂತ ಪುಕಾರು ಹಬ್ಬಿತ್ತು. ಆದ್ರೀಗ ಜೂನ್‌ಗೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
ಇತ್ತ ಮಹೇಶ್ ಬಾಬು ಕೂಡ ರಾಜಮೌಳಿ ಸಿನಿಮಾಗಾಗಿ ಸಿಕ್ಕಾಪಟ್ಟೆ ವರ್ಕ್‌ಔಟ್ ಮಾಡುತ್ತಿದ್ದಾರಂತೆ. ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇನ್ನೊಂದು ಕಡೆ ಮಹೇಶ್ ಬಾಬು ಈ ಸಿನಿಮಾ ಉದ್ದ ಕೂದಲು ಬಿಡಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಇಷ್ಟು ಮಾಹಿತಿ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ರಾಜಮೌಳಿ ಹಾಗೂ ಮಹೇಶ್ ಬಾಬು ಮಾಹಿತಿ ನೀಡಬೇಕಿದೆ.


Click it and Unblock the Notifications











