ಮುಂದಿನ ಚಿತ್ರಕ್ಕೆ ರಾಜಮೌಳಿ ಸಂಭಾವನೆ ₹100 ಕೋಟಿನಾ? ಹೊಸಾ ಚಿತ್ರದ ಹೊಚ್ಚ ಹೊಸಾ ಡೀಟೆಲ್ಸ್ ಇಲ್ಲಿದೆ
RRR ವಿಜಯಯಾತ್ರೆ ಮುಗಿಸಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಮುಂದಿನ ಚಿತ್ರಕ್ಕೆ ಆಗ್ಲೇ ರೆಡಿಯಾಗ್ತಿದ್ದಾರೆ. ಹೊಸಾ ಚಿತ್ರಕ್ಕೆ ನಾಯಕನಾಗಿ ನಟ ಮಹೇಶ್ ಬಾಬು ಫಿಕ್ಸ್ ಆಗಿರೋದು ಈಗಾಗ್ಲೇ ಗೊತ್ತಿರೋ ವಿಚಾರವೇ. ಈಗ ಚರ್ಚೆಯಾಗ್ತಿರೋ ವಿಚಾರ ದುಡ್ಡಿನದ್ದು. ರಾಜಮೌಳಿ ಸಿನಿಮಾ ಅಂದ್ಮೇಲೆ ಅದು ಭಾರೀ ಬಜೆಟ್‌ನದ್ದು ಅನ್ನೋ ಬಗ್ಗೆ ಎರಡು ಮಾತಿಲ್ಲ. ಆದರೆ, ಯಾರಿಗೆಲ್ಲ ಎಷ್ಟೆಷ್ಟು ಸಂಭಾವನೆ ಅನ್ನೋದೇ ಸದ್ಯದ ಹಾಟ್ ಟಾಪಿಕ್.
ಮಹೇಶ್ ಬಾಬು ಲೇಟೆಸ್ಟ್ ಸಂಭಾವನೆ ಅಂದರೆ, ಅವರು ಪ್ರತೀ ಚಿತ್ರಕ್ಕೆ 50 ರಿಂದ 60 ಕೋಟಿ ರೂಪಾಯಿ ಎನ್ನಲಾಗಿದೆ. ಆದರೆ, ರಾಜಮೌಳಿ ಚಿತ್ರಕ್ಕೆ ಮಹೇಶ್ ಬಾಬು ತಮ್ಮ ಸಂಭಾವನೆಯನ್ನು 100 ಕೋಟಿ ರೂಪಾಯಿಗೆ ಏರಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈಗಾಗ್ಲೇ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಿ 100 ಕೋಟಿ ರೂಪಾಯಿ ಸಂಭಾವನೆ ಪಡೀತಾ ಇದ್ದಾರೆ. ಹಾಗೇ ಈ ಚಿತ್ರವೂ ಪ್ಯಾನ್ ಇಂಡಿಯಾ ಜೊತೆಗೆ ಖಂಡಿತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗೋ ಎಲ್ಲಾ ಕೆಪಾಸಿಟಿ ಇರೋ ಸಿನಿಮಾ ಆಗೋದ್ರಿಂದ ಮಹೇಶ್ ಬಾಬು ತಮ್ಮ ಮಾಮೂಲಿ ಸಂಭಾವನೆಯನ್ನು ಶೇಕಡಾ 30ರಷ್ಟು ಹೆಚ್ಚಿಸಿಕೊಂಡಿದ್ದು, ಇದಕ್ಕೆ 100 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ನಿರ್ದೇಶಕ ಎಸ್ ಎಸ್ ರಾಜಮೌಳಿ ವಿಚಾರ. ರಾಜಮೌಳಿ ತಮ್ಮ ಚಿತ್ರಗಳಿಗೆ ಕೆಲಸ ಮಾಡುವ ಪರಿಯನ್ನು ಎಲ್ರೂ ನೋಡಿದ್ದಾರೆ. ಚಿತ್ರದ ಪ್ಲಾನಿಂಗ್ ನಿಂದ ಶುರುವಾಗಿ ಮೇಕಿಂಗ್, ತಾರಾಗಣದ ಆಯ್ಕೆ, ಬಿಡುಗಡೆ, ಹಂಚಿಕೆ ಮಾತ್ರವಲ್ಲದೇ ಅದರ ಪ್ರೊಮೋಶನ್ ಕೊನೆಗೆ ಆಸ್ಕರ್ ಬಾಗಿಲು ತಟ್ಟುವ ತನಕ ರಾಜಮೌಳಿ ತಮ್ಮನ್ನು ತೊಡಗಿಸಿಕೊಳ್ತಾರೆ. ಒಟ್ಟಾರೆಯಾಗಿ ಇಡೀ ಚಿತ್ರವನ್ನು ಅದ್ಭುತವಾಗಿ ಗೆಲ್ಲಿಸೋ ನಿರ್ದೇಶಕ ಅಂತ ರಾಜಮೌಳಿ ಹೆಸರುವಾಸಿ.
ಇದೆಲ್ಲಾ ಗೊತ್ತಿರೋದ್ರಿಂದಲೇ ನಿರ್ಮಾಪಕ ಕೆ ಎಲ್ ನಾರಾಯಣ ಒಂಚೂರೂ ಚೌಕಾಸಿ ಮಾಡದೇ ಮಹೇಶ್ ಬಾಬು ಕೇಳಿದಷ್ಟು ಸಂಭಾವನೆ ಕೊಡೋಕೆ ರೆಡಿಯಾಗಿದ್ದಾರಂತೆ. ಇನ್ನು ನಿರ್ದೇಶಕ ರಾಜಮೌಳಿ ಸಾಮಾನ್ಯವಾಗಿ ತಮ್ಮ ಸಂಭಾವನೆಯಾಗಿ ಹಣದ ಜೊತೆ ಚಿತ್ರದ ಒಟ್ಟಾರೆ ಲಾಭದ ಒಂದಿಷ್ಟು ಭಾಗವನ್ನೂ ಪಡೆಯುತ್ತಾರೆ. ಈ ಬಾರಿ ನಿರ್ಮಾಪಕರ ಜೊತೆ ಈ ಬಗ್ಗೆ ಸಂಪೂರ್ಣ ಮಾತುಕತೆ ಆಗಿಲ್ಲ. ಆದ್ರೆ ರಾಜಮೌಳಿ ಕೂಡಾ 100 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಡಿಮ್ಯಾಂಡ್ ಮಾಡಿದ್ದಾರೆ ಮತ್ತು ಅದಕ್ಕೆ ಪ್ರೊಡ್ಯೂಸರ್ ಕೆ ಎಲ್ ನಾರಾಯಣ ಒಪ್ಪಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಅಂದ್ಹಾಗೆ, ಈ ಹೊಸಾ ಚಿತ್ರದ ಬಗ್ಗೆ ನಿರ್ಮಾಪಕ ಕೆ ಎಲ್ ನಾರಾಯಣ್ ಮತ್ತು ರಾಜಮೌಳಿ ನಡುವೆ RRR ಸಿನಿಮಾಗಿಂತಲೂ ಅನೇಕ ವರ್ಷಗಳ ಮುಂಚೆಯೇ ಮಾತುಕತೆ ನಡೆದು ಒಪ್ಪಿಗೆ ಆಗಿತ್ತಂತೆ. ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಶನ್ ಚಿತ್ರ ಮೊದಲೇ ಡಿಸೈಡ್ ಆಗಿದ್ದು, ಈಗ ಕೊನೆಗೂ ಆರಂಭವಾಗ್ತಿದೆ. ಈ ಕಾಂಬಿನೇಶನ್ ಮೇಲೆ ಹಾಕಿದ ದುಡ್ಡಿಗೆ ಖಂಡಿತಾ ಮೋಸವಿಲ್ಲ, ಅನೇಕ ಪಟ್ಟು ಹೆಚ್ಚೇ ಲಾಭ ತಂದುಕೊಡುವ ಪ್ರಾಜೆಕ್ಟ್ ಇದು ಎನ್ನುವುದು ಖುದ್ದು ನಿರ್ಮಾಪಕರಿಗೂ ಗೊತ್ತಿದೆ. ಹಾಗಾಗಿ ಅವರೂ ಏನೂ ಚರ್ಚೆಯಿಲ್ಲದೇ ಈ ಭಾರೀ ಮೊತ್ತದ ಸಂಭಾವನೆಗೆ ಒಕೆ ಎಂದಿದ್ದಾರೆ ಎನ್ನುವ ಮಾತುಗಳು ಟಾಲಿವುಡ್ ಅಂಗಳದಿಂದ ಕೇಳಿಬರ್ತಿದೆ.


Click it and Unblock the Notifications











