ರಜನಿಕಾಂತ್- ಕಮಲ್ ಚಿತ್ರಕ್ಕೆ ಕೊನೆಗೂ ಸಿಕ್ಕ ನಿರ್ದೇಶಕ; ಶೀಘ್ರದಲ್ಲೇ ಸಿನಿಮಾ ಅಧಿಕೃತ ಘೋಷಣೆ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 173ನೇ ಸಿನಿಮಾ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದೆ. ಕಾರಣ ಚಿತ್ರಕ್ಕೆ ಆಯ್ಕೆ ಆಗಿದ್ದ ನಿರ್ದೇಶಕ ಹೊಸ ಬಂದಿದ್ದು. ಹೌದು ಕಮಲ್ ಹಾಸನ್ ನಿರ್ಮಾಣದ ಈ ಚಿತ್ರಕ್ಕೆ ಸುಂದರ್ ಸಿ ಆಕ್ಷನ್ ಕಟ್ ಹೇಳಬೇಕಿತ್ತು. ಸಿನಿಮಾ ಘೋಷಣೆಯಾದ ವಾರಕ್ಕೆ ಶಾಕ್ ಕಾದಿತ್ತು.
ದಶಕಗಳ ಒಟ್ಟೊಟ್ಟಿಗೆ ಕಮಲ್ ಹಾಗೂ ರಜನಿಕಾಂತ್ ಚಿತ್ರರಂಗ ಪ್ರವೇಶಿಸಿದ್ದರು. ಇಬ್ಬರೂ ಒಟ್ಟಿಗೆ ನಟಿಸಿದ್ದ ಸಿನಿಮಾಗಳು ಗೆದ್ದಿತ್ತು. ಆದರೆ ಇದ್ದಕ್ಕಿದಂತೆ ಇಬ್ಬರೂ ಒಟ್ಟಿಗೆ ನಟಿಸದಿರಲು ತೀರ್ಮಾನಿಸಿದ್ದರು. 4 ದಶಕಗಳ ಬಳಿಕ ಇಬ್ಬರೂ ಕೈ ಜೋಡಿಸಿದ್ದಾರೆ. ಒಟ್ಟಿಗೆ ನಟಿಸುವುದಕ್ಕೆ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಕ್ಕೂ ಮುನ್ನ ಕಮಲ್ ನಿರ್ಮಾಣದ ಚಿತ್ರದಲ್ಲಿ ತಲೈವಾ ಬಣ್ಣ ಹಚ್ಚಲಿದ್ದಾರೆ.

'ಕೂಲಿ' ಬಳಿಕ 'ಜೈಲರ್-2' ಚಿತ್ರದಲ್ಲಿ ಸೂಪರ್ ಸ್ಟಾರ್ ಬ್ಯುಸಿಯಾಗಿದ್ದಾರೆ. ಬಳಿಕ ತಮ್ಮ 173ನೇ ಚಿತ್ರದಲ್ಲಿ ನಟಿಸಬೇಕಿದೆ. ಕಮಲ್ ಹಾಸನ್ ತಮ್ಮ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ನಟಿ ಖುಷ್ಬೂ ಪತಿ ಸುಂದರ್ ಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಸಿನಿಮಾ ಘೋಷಣೆಯಾದ ವಾರದ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಅವರು ಹೊರ ಬಂದಿದ್ದರು. ಈ ಬಗ್ಗೆ ಸುದೀರ್ಘ ಪತ್ರ ಬರೆದಿದ್ದರು. ಕಾರಣ ಮಾತ್ರ ಗೊತ್ತಾಗಲಿಲ್ಲ.
ಸುಂದರ್ ಸಿ ನಾನು ತಲವಾ 173ನೇ ಚಿತ್ರ ನಿರ್ದೇಶನ ಮಾಡಲ್ಲ ಎಂಬ ಬಳಿಕ ಸಾಕಷ್ಟು ಜನ ಕಥೆ ಹೇಳಿದ್ದರು. ಕಾರ್ತಿಕ್ ಸುಬ್ಬರಾಜ್, ಕೆ. ಎಸ್ ರವಿಕುಮಾರ್ ಸೇರಿ ಹಲವರು ಈ ಲಿಸ್ಟ್‌ನಲ್ಲಿದ್ದಾರೆ. ಅವರನ್ನೆಲ್ಲಾ ಬಿಟ್ಟು 'ಪಾರ್ಕಿಗ್' ಸಿನಿಮಾ ಖ್ಯಾತಿಯ ರಾಮ್‌ಕುಮಾರ್ ಬಾಲಕೃಷ್ಣನ್ ಇದೀಗ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಅವರು ಹೇಳಿರುವ ಕಥೆ ಕಮಲ್ ಹಾಗೂ ರಜನಿಗೆ ಇಷ್ಟವಾಗಿದೆ ಎಂದು ಗುಲ್ಲಾಗಿದೆ. ಸೂಪರ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಧಿಕೃತವಾಗಿ ಸಿನಿಮಾ ಘೋಷಣೆಯಾಗುವ ನಿರೀಕ್ಷೆಯಿದೆ.

2 ವರ್ಷದ ಹಿಂದೆ ಬಂದಿದ್ದ 'ಪಾರ್ಕಿಂಗ್' ಸಿನಿಮಾ ಕಲ್ಟ್ ಹಿಟ್ ಆಗಿತ್ತು. ಸಿಂಪಲ್ ಕಥೆಯ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರು ಸಿನಿಮಾ ನೋಡಿ ಫಿದಾ ಆಗಿದ್ದರು. ಓಟಿಟಿಗೆ ಬಂದ ಬಳಿಕ ಹೆಚ್ಚಿನ ಜನರನ್ನು ತಲುಪಿತ್ತು. ಈ ಸಿನಿಮಾ ನೋಡಿ ತಲೈವಾ ಕೂಡ ಪ್ರಶಂಸಿದ್ದರು. ಇದೀಗ ರಜನಿಕಾಂತ್ ಅವರನ್ನು ನಿರ್ದೇಶಿಸುವ ಅವಕಾಶ ರಾಮ್‌ಕುಮಾರ್ ಅವರಿಗೆ ಸಿಕ್ಕಿದೆ ಎಂದು ಹೇಳಲಾಗ್ತಿದೆ.
ಸದ್ಯ ಕಮಲ್ ನಿರ್ಮಾಣದಲ್ಲಿ ರಜನಿಕಾಂತ್ ನಟಿಸುವ ಸಿನಿಮಾ ಬಗ್ಗೆ ಮಾತ್ರ ಚರ್ಚೆ ನಡೀತಿದೆ. ಇಬ್ಬರೂ ಒಟ್ಟಿಗೆ ನಟಿಸುವ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ದಿಗ್ಗಜ ನಟರಿಬ್ಬರು ತೆರೆಹಂಚಿಕೊಳ್ಳಲು ಒಪ್ಪಿದ್ದಾರೆ. ಆದರೆ ಅದಕ್ಕೆ ಸರಿಯಾದ ಕಥೆ, ನಿರ್ದೇಶಕ ಬೇಕಿದೆ. ಇಂತಹ ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವುದು ಅಷ್ಟು ಸುಲಭ ಅಲ್ಲ. ಅದೇ ಕಾರಣಕ್ಕೆ ಈ ಸಾಹಸಕ್ಕೆ ಕೈ ಹಾಕಲು ಎಲ್ಲರೂ ಹೆದರುವಂತಾಗಿದೆ.
'ಅಪೂರ್ವ ರಾಗಂಗಳ್' ಚಿತ್ರದಲ್ಲಿ ರಜನಿಕಾಂತ್ ಹಾಗೂ ಕಮಲ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಬಳಿಕ 'ಮೂಂಡ್ರು ಮುಡಿಚ್ಚು', 'ಅವರ್‌ಗಳ್', 'ಪದಿನಾರು ವಯದಿನಿಲೆ', 'ಇಲಮೈ ಊಂಜಲ್ ಆಡುಕಿರತು', 'ತಪ್ಪು ತಾಳಂಗಳ್', ಅವಳ್ ಅಪ್ಪಡಿತಾನ್ ಹಾಗೂ 'ಅಲ್ಲಾವುದ್ದಿನ್ ಅತ್ಬುತ ವಿಲಕಂ' ಚಿತ್ರಗಳಲ್ಲಿ ಇಬ್ಬರೂ ತೆರೆ ಹಂಚಿಕೊಂಡಿದ್ದರು. ಡಿಸೆಂಬರ್ 12ರಂದು ರಜನಿಕಾಂತ್ ಹುಟ್ಟುಹಬ್ಬಕ್ಕೆ 'ಜೈಲರ್- 2' ಟೀಸರ್ ಕೂಡ ಉಡುಗೊರೆಯಾಗಿ ಸಿಗಲಿದೆ.


Click it and Unblock the Notifications











