ಜೈಲ್‌ನಿಂದ ಹೊರಬಂದ ರಕ್ಷಿತ್ ಶೆಟ್ಟಿ: 15 ಕೆಜಿ ತೂಕ ಹೆಚ್ಚಿಸಿಕೊಳ್ಳುತ್ತಿರವುದು ಏಕೆ?
ಕಳೆದ ಕೆಲವು ದಿನಗಳಿಂದ ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಬಗ್ಗೆನೇ ಚರ್ಚೆಯಾಗುತ್ತಿದೆ. ಈ ಸಿನಿಮಾಗಾಗಿ ರಕ್ಷಿತ್ ಶೆಟ್ಟಿ 15 ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ ಅಂತ ನಿರ್ದೇಶಕ ಹೇಮಂತ್ ರಾವ್ ಕೂಡ ಸಂದರ್ಶನ ನೀಡಿದ್ದಾರೆ. ಅಷ್ಟಕ್ಕೂ 15 ಕೆಜಿ ತೂಕ ಯಾಕೆ ಹೆಚ್ಚಿಸಿಕೊಳ್ಳಬೇಕು? ಮೇಲ್ನೋಟಕ್ಕೆ ಇದು ಲವ್ ಸ್ಟೋರಿಯ ಹಿನ್ನಲೆ ಇರಬಹುದು ಅಂತ ಊಹಿಸಿದ್ದರೂ ತೂಕ ಯಾಕೆ ಹೆಚ್ಚಿಸಿಕೊಳ್ಳಬೇಕು ಅನ್ನುವ ಕುತೂಹಲ ಕಾಡುತ್ತಿದೆ.
ರಕ್ಷಿತ್ ಶೆಟ್ಟಿ ಇತ್ತೀಚೆಗೆ 'ಸಪ್ತಸಾಗರದಾಚೆ ಎಲ್ಲೋ' ಚಿತ್ರದ ಮೊದಲಾರ್ಧದ ಶೂಟಿಂಗ್ ಮುಗಿಸಿದ್ದಾರೆ. ಅವರೇ ಇತ್ತೀಚೆಗೆ ಕೆಲವು ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮಧ್ಯೆ ರಕ್ಷಿತ್ ಶೆಟ್ಟಿ 15 ತೂಕ ಹೆಚ್ಚಿಸಿಕೊಳ್ಳುತ್ತಿರುವ ಬಗ್ಗೆನೂ ಸುದ್ದಿಯಾಗಿದೆ. ಅಷ್ಟಕ್ಕೂ ರಕ್ಷಿತ್ ಸಿನಿಮಾ ತೂಕ ಹೆಚ್ಚಿಸಿಕೊಳ್ಳುತ್ತಿರುವುದು ಯಾಕೆ? ಅನ್ನುವ ಬಗ್ಗೆ ಗಾಂಧಿನಗರದ ಗಲ್ಲಿಯಲ್ಲಿ ಸುದ್ದಿಗಳು ಓಡಾಡುತ್ತಿವೆ.

15 ಕೆಜಿ ತೂಕ ಹೆಚ್ಚಿಸಿಕೊಳ್ಳುತ್ತಿರುವುದು ಏಕೆ?
ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆಯಲ್ಲೋ ಸಿನಿಮಾ ಮೂಲಕ ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಒಂದು ಸಿನಿಮಾಗಾಗಿ ತೂಕ ಹೆಚ್ಚಿಸಿಕೊಳ್ಳುವುದು, ಕಡಿಮೆ ಮಾಡಿಕೊಳ್ಳುವುದು ಈಗ ಹೊಸದೇನಲ್ಲ. ಬಾಲಿವುಡ್ ತಾರೆಯರು ಪಾತ್ರಕ್ಕಾಗಿ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕುತ್ತಾರೆ. ಈಗ ರಕ್ಷಿತ್ ಶೆಟ್ಟಿ ತೂಕ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಎರಡನೇ ಹಂತದ ಚಿತ್ರೀಕರಣ. ಇಲ್ಲಿವರೆಗೂ ಚಿತ್ರತಂಡ ಜೈಲಿನಲ್ಲಿ ಶೂಟಿಂಗ್ ಮಾಡಿದೆ. ಈ ವೇಳೆ ರಕ್ಷಿತ್ ಶೆಟ್ಟಿ ತೂಕ ಇಳಿಸಿಕೊಳ್ಳಬೇಕಿತ್ತಂತೆ. ಯಾವುದೋ ಕಾರಣಕ್ಕೆ ರಕ್ಷಿತ್ ಜೈಲು ಸೇರುವ ಸಂದರ್ಭ. ಈ ವೇಳೆ ಜೈಲಿನಲ್ಲಿ ರಕ್ಷಿತ್ ಸಣ್ಣಗೆ ಕಾಣಬೇಕಿದ್ದು, 10 ರಿಂದ 15 ಕೆಜಿ ತೂಕ ಇಳಿಸಿಕೊಂಡಿದ್ದರಂತೆ.

ಜೈಲ್‌ನಿಂದ ಹೊರ ಬಂದ ರಕ್ಷಿತ್ ಶೆಟ್ಟಿ
'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದ ಚಿತ್ರೀಕರಣಕ್ಕಾಗಿ ನಿರ್ದೇಶಕ ಹೇಮಂತ್ ರಾವ್ ಶಿವಮೊಗ್ಗದಲ್ಲಿ ಬೀಡುಬಿಟ್ಟಿದ್ದರು. ಶಿವಮೊಗ್ಗದ ಜೈಲಿನಲ್ಲಿ ಕೆಲವು ದಿನಗಳ ಕಾಲ ರಕ್ಷಿತ್ ಶೆಟ್ಟಿ ಸಿನಿಮಾದ ಚಿತ್ರೀಕರಣ ನಡೆದಿತ್ತು. ಈ ದೃಶ್ಯಗಳ ಮೂಲಕವೇ ಮೊದಲಾರ್ಧ ಚಿತ್ರೀಕರಣವನ್ನು ಹೇಮಂತ್ ಮುಗಿಸಿದ್ದಾರೆ ಎನ್ನಲಾಗಿದೆ. ಸದ್ಯ ಹೀರೋ ಜೈಲಿನಿಂದ ಹೊರಬಂದಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ಹಳೆಯ ಲುಕ್‌ನಲ್ಲಿ ಕಾಣಿಸಿಕೊಳ್ಳಬೇಕಿದೆ. ಹೀಗಾಗಿ ಮತ್ತೆ 15 ಕೆಜಿ ತೂಕವನ್ನು ಹೆಚ್ಚಿಸಿಕೊಳ್ಳಬೇಕಿದೆ ಅನ್ನುವುದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ.

40 ದಿನಗಳಲ್ಲಿ 90 ಕೆಜಿಗೆ ಏರಬೇಕು ತೂಕ
ರಕ್ಷಿತ್ ಶೆಟ್ಟಿ ಇನ್ನು ಒಂದೂವರೆ ತಿಂಗಳಲ್ಲಿ 15 ಕೆಜಿ ತೂಕವನ್ನು ಹೆಚ್ಚಿಸಿಕೊಳ್ಳಬೇಕಿದೆ. ಎರಡನೇ ಹಂತದ ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತನ್ನ ದೇಹದ ತೂಕವನ್ನು 90 ಕೆಜಿಗೆ ಏರಿಸಿಕೊಳ್ಳಬೇಕಿದೆ. ಸದ್ಯ ರಕ್ಷಿತ್ ಶೆಟ್ಟಿ ತೂಕ ಹೆಚ್ಚಿಸಿಕೊಳ್ಳುವ ಟಾಸ್ಕ್‌ನಲ್ಲಿದ್ದಾರೆ ಎನ್ನಲಾಗಿದೆ. ಇಲ್ಲಿವರೆಗೂ ಸದ್ದಿಲ್ಲದೆ ನಡೆದಿದ್ದ ಶೂಟಿಂಗ್ ಫಸ್ಟ್ ಹಾಫ್ ಶೂಟಿಂಗ್ ಮುಗಿಯುತ್ತಿದ್ದಂತೆ ಬೇಜಾನ್ ಸೌಂಡ್ ಮಾಡುವುದಕ್ಕೆ ಶುರು ಮಾಡಿದೆ. ಈ ಮೂಲಕ ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ಎರಡು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕುತೂಹಲ ಕೆರಳಿಸಿದ ಗೋಧಿ ಬಣ್ಣ ಜೋಡಿ
ನಿರ್ದೇಶಕ ಹೇಮಂತ್ ರಾವ್ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಿದು. ಈ ಜೋಡಿಯ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ರಕ್ಷಿತ್ ಶೆಟ್ಟಿ ವೃತ್ತಿ ಬದುಕಿಗೆ ಈ ಸಿನಿಮಾ ಹೊಸ ತಿರುವನ್ನೇ ನೀಡಿತ್ತು. ಈಗ ಮತ್ತೊಮ್ಮೆ ಈ ಜೋಡಿ ಒಂದಾಗಿದ್ದು, 'ಸಪ್ತಸಾಗರದಾಚೆ ಎಲ್ಲೋ' ಕತೆಯೊಂದು ಹೇಳಲು ಹೊರಟಿದೆ. ಈ ಕಾರಣಕ್ಕೆ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲವನ್ನು ಹೆಚ್ಚಿಸಿಕೊಳ್ಳುತ್ತಿದೆ.


Click it and Unblock the Notifications











