ಹೊಸ ರಿಲೀಸ್ ಡೇಟ್ ಮೇಲೆ 'ಕಾಟೇರ' ತಂಡದ ಕಣ್ಣು? ರಾಕ್‌ಲೈನ್ ಪ್ರಯತ್ನ ಕೈ ಹಿಡಿಯದಿದ್ರೆ ಪ್ಲ್ಯಾನ್ ಬಿ ಏನು?
ಈ ವರ್ಷದ ಕೊನೆಯಲ್ಲಿ 'ಕಾಟೇರ' ರಿಲೀಸ್ ಆಗುತ್ತೆ ಅಂತ ದರ್ಶನ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಈಗಾಗಲೇ ತಂಡ ಘೋಷಣೆ ಮಾಡಿರುವಂತೆ ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಆಗಬೇಕು. ಆದರೆ, ಸೆನ್ಸಾರ್ ಮಂಡಳಿಯಲ್ಲಿ ಆಗಿರೋ ಅವಾಂತರ ಚಿತ್ರತಂಡ ಹಾಗೂ ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳಿದೆ.
ರಾಕ್‌ಲೈನ್ ವೆಂಕಟೇಶ್ ಹಾಗೂ ತರುಣ್ ಸುಧೀರ್ ತಂಡ 'ಕಾಟೇರ' ರಿಲೀಸ್‌ಗೆ ಮಸ್ತ್ ಪ್ಲ್ಯಾನ್ ಮಾಡಿತ್ತು. ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಮಾಡಿದರೆ, ಹೊಸ ವರ್ಷ ಸಂಭ್ರಮ ಹಾಗೂ ಸಂಕ್ರಾಂತಿ ಹಬ್ಬ ಎರಡೂ ಸಿಕ್ಕಂತಾಗುತ್ತೆ ಎಂದು ಲೆಕ್ಕಚಾರ ಹಾಕಿದ್ದರು. ಆದ್ರೀಗ ಅವರ ಲೆಕ್ಕವೆಲ್ಲ ತಲೆ ಕೆಳಗಾಗುವ ಹಾಗೆ ಕಾಣಿಸುತ್ತಿದೆ.

ಬೆಂಗಳೂರಿನಲ್ಲಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿ ಸಿನಿಮಾಗಳಿಗೆ ಸರ್ಟಿಫಿಕೇಟ್ ನೀಡುವುದಕ್ಕೆ ಲಂಚ ಪಡೆಯುತ್ತಿರೋ ಆರೋಪದ ಮೇಲೆ ಮೂವರು ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಹೀಗಾಗಿ ಹೊಸ ಸಿನಿಮಾಗಳನ್ನು ನೋಡಿ ಸೆನ್ಸಾರ್ ಮಾಡುವ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಕನ್ನಡದ ಸುಮಾರು 130ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆ ಸಜ್ಜಾಗಿ ನಿಂತಿವೆ. ಆದರೆ, ಸೆನ್ಸಾರ್ ಮಾಡೋರೆ ಇಲ್ಲ. ಹೀಗಾಗಿ ಈ 130 ಸಿನಿಮಾಗಳಲ್ಲಿ 'ಕಾಟೇರ' ಎಷ್ಟನೆಯದ್ದು ಅನ್ನೋದು ಗೊತ್ತಿಲ್ಲ. ಒಂದು ವೇಳೆ ಹೊಸ ಸೆನ್ಸಾರ್ ಅಧಿಕಾರಿಗಳು ನೇಮಕವಾದರೆ, 'ಕಾಟೇರ' ಸಿನಿಮಾವನ್ನು ಸೆನ್ಸಾರ್ ಮಾಡಲು ಸಾಧ್ಯವಾಗುತ್ತಾ? ಅಂದುಕೊಂಡಂತೆ ಡಿಸೆಂಬರ್ 29ಕ್ಕೆ ಸಿನಿಮಾ ಮಾಡಬಹುದೇ? ಈ ಪ್ರಶ್ನೆಗಳಿಗೆ ಸದ್ಯಕ್ಕೆ ಚಿತ್ರತಂಡದ ಬಳಿಯೂ ಉತ್ತರವಿಲ್ಲ.

ಸಿನಿಮಾ ಮಂದಿಯ ಪ್ರಕಾರ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೆನ್ಸಾರ್‌ಗಾಗಿ ಟ್ರಿಬ್ಯೂನಲ್ ಮೆಟ್ಟಿಲೇರುವ ಸಾಧ್ಯತೆಯಿದೆ ಎಂದು ಹೇಳುತ್ತಿದ್ದಾರೆ. ಆದರೆ, ಪ್ರಾದೇಶಿಕ ಸೆನ್ಸಾರ್ ಮಂಡಳಿ ಇದ್ದೂ, ಅಲ್ಲಿಗೆ ಹೋಗಿ ಸೆನ್ಸಾರ್ ಮಾಡಿಸಿಕೊಂಡು ಬರಲು ಅವಕಾಶವಿದೆಯೇ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಒಂದ್ವೇಳೆ ಅದೂ ಸಾಧ್ಯವಾಗದೇ ಹೋದರೆ ಹೊಸ ರಿಲೀಸ್ ಡೇಟ್ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ತೆಲುಗು ಸಿನಿಮಾ ಮಂದಿಗೆ ಸಂಕ್ರಾಂತಿ ಹಬ್ಬ ಅದೃಷ್ಟ. ಈ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಕಾದು ಕೂತಿರುತ್ತಾರೆ. ಆದರೆ, ಇದು ಕನ್ನಡ ಸಿನಿಮಾಗಳ ಮಟ್ಟಿಗೆ ವರ್ಕ್ ಔಟ್ ಆಗುವುದಿಲ್ಲ. ಈ ಕಾರಣಕ್ಕಾಗಿ ಸಂಕ್ರಾಂತಿ ದಿನ ಹೆಚ್ಚಾಗಿ ಕನ್ನಡ ಸಿನಿಮಾ ರಿಲೀಸ್ ಆಗೋದು ವಿರಳ. ಹೀಗಾಗಿ 'ಕಾಟೇರ' ತಂಡ ಡಿಸೆಂಬರ್ ರಿಲೀಸ್ ಸಾಧ್ಯವಾಗದೇ ಹೋದರೆ, ಜನವರಿ 25 ಅಥವಾ 26 ಈ ಎರಡು ದಿನಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಸುದ್ದಿ ಹಬ್ಬಿದೆ.
ಇನ್ನೊಂದು ಕಡೆ ಈಗಾಗಲೇ ಕಾಟೇರ ತಂಡ ಪ್ರಚಾರವನ್ನೂ ಆರಂಭಿಸಿದೆ. ಹಾಡು, ಪೋಸ್ಟರ್‌ಗಳನ್ನು ರಿಲೀಸ್ ಮಾಡಿ, ಪ್ರಚಾರಕ್ಕೆ ಧುಮುಕಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, ರಾಕ್‌ಲೈನ್ ವೆಂಕಟೇಶ್ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಇನ್ನು ಎರಡು ದಿನಗಳಲ್ಲಿ ಸೆನ್ಸಾರ್‌ಗೆ ಸ್ಪಷ್ಟತೆ ಸಿಗದೇ ಹೋದರೆ, ಬಹುಶ: ಗಣರಾಜ್ಯೋತ್ಸವಕ್ಕೆ ಪೋಸ್ಟ್ ಪೋನ್ ಆದರೂ ಅಚ್ಚರಿ ಪಡಬೇಕಿಲ್ಲ.


Click it and Unblock the Notifications











