ಉಪ್ಪಿ 'UI' ಪವಾಡ.. 'ಅವತಾರ್ 2' ತಂತ್ರಜ್ಞಾನ.. ಬಜೆಟ್ ₹20-30 ಕೋಟಿ ಅಲ್ಲ: ಮೂರಂಕಿ ಗಡಿ ದಾಟೇಬಿಡ್ತಾ?
ರಿಯಲ್‌ಸ್ಟಾರ್ ಉಪೇಂದ್ರ 8 ವರ್ಷದ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು ಗೊತ್ತೇ ಇದೆ. ಉಪ್ಪಿ ನಿರ್ದೇಶನ ಅಂದರೆ, ಆ ಸಿನಿಮಾ ಬಗ್ಗೆ ಎಲ್ಲಿಲ್ಲದ ಕುತೂಹಲವಿರುತ್ತೆ. ಆದರೆ, ಐದು ವರ್ಷಕ್ಕೊಮ್ಮೆ, 8 ವರ್ಷಕ್ಕೊಮ್ಮೆ ರಿಯಲ್ ಸ್ಟಾರ್ ಆಕ್ಷನ್ ಕಟ್ ಹೇಳುತ್ತಾರೆ.
'ಕಬ್ಜ' ಸಿನಿಮಾ ಬಳಿಕ ರಿಯಲ್‌ಸ್ಟಾರ್ ಉಪೇಂದ್ರ ಮತ್ತೊಂದು ಸಿನಿಮಾ 'UI' ಬಿಡುಗಡೆಯಾಗಲಿದೆ. ಇವರೇ ನಿರ್ದೇಶನದ ಜೊತೆ ನಟನೆ ಕೂಡ ಮಾಡುತ್ತಿರುವುದರಿಂದ ಸಿನಿಪ್ರಿಯರಲ್ಲಿ ಕುತೂಹಲವೇನು ಕಮ್ಮಿಯಿಲ್ಲ. ಅದರಲ್ಲೂ ಈ ಬಾರಿಗೆ ವಿಶೇಷ ತಂತ್ರಜ್ಞಾನವನ್ನು ಬಳಸಿ ನಿರ್ದೇಶನಕ್ಕೆ ಕೈ ಹಾಕಿರುವುದರಿಂದ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

'UI' ಸಿನಿಮಾ ಏಪ್ರಿಲ್, ಮೇನಲ್ಲಿ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ರೆಡಿಯಿದೆ ಅನ್ನೋ ಮಾತು ಹರಿದಾಡಿತ್ತು. ಒಂದ್ಕಡೆ ಚುನಾವಣೆ, ಐಸಿಎಲ್.. ಇನ್ನೊಂದ್ಕಡೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಬಿಡುಗಡೆಯಾಗಬೇಕಿತ್ತು. ಹೀಗಾಗಿ ಬಿಡುಗಡೆಯನ್ನು ಮುಂದೂಡಲಾಗಿತ್ತು. ಸದ್ಯಕ್ಕೀಗ 'UI' ಸಿನಿಮಾದ ಬಜೆಟ್, ರಿಲೀಸ್ ಬಗ್ಗೆ ಗಾಂಧಿನಗರದಲ್ಲಿ ಟಾಕ್ ಶುರುವಾಗಿದೆ.
ಉಪ್ಪಿಯ 'UI' ರಿಲೀಸ್ ಯಾವಾಗ?
'UI' ಕೇವಲ ಕಂಟೆಂಟ್ ಇರುವ ಸಿನಿಮಾ ಅಷ್ಟೇ ಅಲ್ಲ. ಈ ಬಾರಿ ಉಪೇಂದ್ರ ತಂತ್ರಜ್ಞಾನದ ಕಡೆಗೂ ಹೆಚ್ಚು ಗಮನ ಹರಿಸಿದ್ದಾರೆ. ಹಾಲಿವುಡ್ ಮಂದಿ ಬಳಸುವ ಟೆಕ್ನಾಲಜಿಯನ್ನು ಬಳಸಿ 'UI' ನಿರ್ಮಾಣ ಮಾಡುತ್ತಿದ್ದಾರೆ. 3ಡಿ ಬಾಡಿ ಸ್ಕ್ಯಾನ್ ಬಳಸಿ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದ್ದು, ಇದು ಏಷ್ಯಾದಲ್ಲಿಯೇ ಮೊದಲು ಎಂದು ಹೇಳಲಾಗುತ್ತಿದೆ.
ಇದು 'UI' ಸಿನಿಮಾದ ಒಂದು ಝಲಕ್ ಅಷ್ಟೇ. ಹೀಗಾಗಿ ಉಪ್ಪಿಯ ಈ ಮಾಸ್ಟರ್ ಪೀಸ್ ಸಿನಿಮಾವನ್ನು ನೋಡುವುದಕ್ಕೆ ರಿಯಲ್ ಸ್ಟಾರ್ ಅಭಿಮಾನಿಗಳಷ್ಟೇ ಅಲ್ಲ, ಸಿನಿಪ್ರಿಯರು ಕೂಡ ಕಾದು ಕೂತಿದ್ದಾರೆ. ನಿರ್ಮಾಪಕ ಕೆ ಪಿ ಶ್ರೀಕಾಂತ್ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಮಾಹಿತಿ ಪ್ರಕಾರ, ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

'UI' ಸಿನಿಮಾದ ಬಜೆಟ್ ಎಷ್ಟು?
ಸ್ಯಾಂಡಲ್‌ವುಡ್‌ನಲ್ಲಿ 'UI' ಸಿನಿಮಾ ಬಜೆಟ್ ಬಗ್ಗೆ ಚರ್ಚೆಯಾಗುತ್ತಿದೆ. ಇದು ಉಪೇಂದ್ರ ಅವರ ಬಿಗ್ ಬಜೆಟ್ ಸಿನಿಮಾ ಎಂದು ಹೇಳಲಾಗುತ್ತಿದೆ. ಅಂದ್ಹಾಗೆ ಗಾಂಧಿನಗರದ ಪ್ರಕಾರ, 'UI' ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಯಾಗಿದೆ. ಒಂದೊಂದು ದೃಶ್ಯವನ್ನೂ ದುಬಾರಿ ತಂತ್ರಜ್ಞಾನವನ್ನು ಬಳಿಸಿ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಶೇ.90ರಷ್ಟು ಚಿತ್ರೀಕರಣ ಮುಗಿಸಿದ್ದು, ಸಿನಿಮಾ ಬಜೆಟ್ ಬಗ್ಗೆ ನಿರ್ಮಾಪಕ ಕೆಪಿ ಶ್ರೀಕಾಂತ್ ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಕನ್ನಡದ ನಿರ್ಮಾಣ ಆಗುತ್ತಿರುವ ದುಬಾರಿ ಸಿನಿಮಾಗಳಲ್ಲಿ ಇದೂ ಒಂದು. ಉಪೇಂದ್ರ ಅವರ ಕನಸು ಏನಿದೆ ಅದನ್ನು ಈ ಬಾರಿ ದೊಡ್ಡ ಮಟ್ಟದಲ್ಲಿಯೇ ಮಾಡುತ್ತಿದ್ದಾರ. ಚಿತ್ರಮಂದಿರದಲ್ಲಿ ಬಂದು ನೋಡಿದರೆ, ಆ ವೈಭವ ಕಾಣಿಸೋದು" ಎಂದು ನಿರ್ಮಾಪಕ ಕೆ ಪಿ ಶ್ರೀಕಾಂತ್ ಹೇಳಿದ್ದಾರೆ.
ಉಪ್ಪಿ ನಿರ್ದೇಶನಕ್ಕೆ ಫ್ಯಾನ್
90ರ ದಶಕದಲ್ಲಿ ನಿರ್ದೇಶಕ-ಬರಹಗಾರನಾಗಿ ವೃತ್ತಿ ಆರಂಭಿಸಿದ್ದರು. ಅಲ್ಲಿಂದ ಶೇ. 80ರಷ್ಟು ಸಕ್ಸಸ್ ಕಂಡಿದ್ದಾರೆ. 'ಶ್', 'ಓಂ', 'ಎ', 'ಉಪೇಂದ್ರ', 'ಸೂಪರ್' ಅಂತ ಸಿನಿಮಾಗಳು ಸಿನಿಪ್ರಿಯರಿಗೆ ಇಷ್ಟ ಆಗಿದ್ದವು. 'ಉಪ್ಪಿ 2' ಕೂಡ ರಿಯಲ್ ಸ್ಟಾರ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿತ್ತು.
'ಸ್ವಸ್ತಿಕ್' ಹಾಗೂ 'ಆಪರೇಷನ್ ಅಂತ' ಅಂತಹ ಸಿನಿಮಾಗಳು ಆ ಮಟ್ಟಿಗೆ ಸಕ್ಸಸ್ ತಂದುಕೊಡದೇ ಹೋದರೂ, ಉಪ್ಪಿಯ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಿತ್ತು. ಈಗ ಮತ್ತೊಂದು ವಿಭಿನ್ನ ಸಾಹಸಕ್ಕೆ ಉಪೇಂದ್ರ ಕೈ ಹಾಕಿದ್ದಾರೆ. 'UI' ಸಿನಿಮಾ ಈ ವರ್ಷ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತೆ ಅನ್ನೋ ನಿರೀಕ್ಷೆಯಲ್ಲಿ ಇಡೀ ಚಿತ್ರತಂಡವಿದೆ.


Click it and Unblock the Notifications











