ನಾಯಕಿ ಆಗ್ತಾಳಂತೆ ನಟಿ ರೋಜಾ ಪುತ್ರಿ: ಸ್ಟಾರ್ ನಟನ ಪುತ್ರನೇ ಹೀರೊ ಅಂತಿದೆ ಟಾಲಿವುಡ್!
ಒಂದು ಜಮಾನದಲ್ಲಿ 'ರೋಜಾ' ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ತೆಲುಗು, ತಮಿಳು, ಕನ್ನಡ ಅಂತ ಎಲ್ಲಾ ಭಾಷೆಯಲ್ಲೂ ನಟಿಸಿದ್ದರು. ಹೀಗಾಗಿ ಕನ್ನಡ ಸಿನಿಪ್ರಿಯರು ನಟಿ ರೋಜಾರನ್ನು ಮರೆಯೋದಿಲ್ಲ. ಅದರಲ್ಲೂ ರವಿಚಂದ್ರನ್ ಅಭಿಮಾನಿಗಳಿಗೆ ರೋಜಾ ಫೇವರಿಟ್ ನಟಿ.
ಕೆಲವು ವರ್ಷಗಳಿಂದ ರೋಜಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ರಾಜಕೀಯದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಟಾಲಿವುಡ್‌ನಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ರೋಜಾ ಪುತ್ರಿ ಹೀರೊಯಿನ್ ಆಗಿ ಎಂಟ್ರಿ ಕೊಡಲಿದ್ದಾರೆ ಅನ್ನೋ ಸುದ್ದಿ ಹಬ್ಬಿದೆ. ಅಸಲಿಗೆ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯೇನು? ತಿಳಿಯೋಕೆ ಮುಂದೆ ಓದಿ.

ಟಾಪ್ ಹೀರೊಗಳ ನಾಯಕಿ ರೋಜಾ
ರೋಜಾ ಒಂದು ಕಾಲದ ಟಾಪ್ ಹೀರೊಯಿನ್. ಟಾಪ್ ಹೀರೊಗಳಿಗೆ ರೋಜಾ ನಾಯಕಿಯಾಗಿ ನಟಿಸಲೇಬೇಕಿತ್ತು. ಆ ಮಟ್ಟಿಗೆ ಬೇಡಿಕೆ ಗಿಟ್ಟಿಸಿಕೊಂಡಿದ್ದ ನಟಿ ರೋಜಾ. ತನ್ನ ಸಿನಿ ಕರಿಯರ್‌ನಲ್ಲಿ ವಿಶಿಷ್ಟವಾದ ಸ್ಟಾರ್ ಇಮೇಜ್ ಗಳಿಸಿದ್ದ ರೋಜಾ ಅಭಿನಯ ಅಷ್ಟೇ ಸೂಪರ್. ರೋಜಾ ತೆಲುಗಿನ ಬಹುತೇಕ ಎಲ್ಲಾ ಟಾಪ್ ಹೀರೊಗಳ ಜೊತೆನೂ ಸಿನಿಮಾ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಟಾಪ್ ಹೀರೊಗಳ ಜೊತೆ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ.

ರೋಜಾ ಪುಲ್ ಬ್ಯುಸಿ
ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ ಬಳಿಕ ರಾಜಕೀಯಕ್ಕೆ ಕಾಲಿಟಿದ್ದಾರೆ. ರಾಜಕೀಯದಲ್ಲೂ ಹಲವು ಬಾರಿ ಸೋಲುಂಡ ಬಳಿಕ ಯಶಸ್ಸು ಅವರ ಕೈ ಹಿಡಿದಿದೆ. ಈಗ ಸಚಿವರಾಗಿದ್ದು, ರಾಜಕೀಯದ ಅಸಲಿ ಪಯಣವನ್ನು ಶುರು ಮಾಡಿದ್ದಾರೆ.

ರೋಜಾ ಪುತ್ರಿ ಫೇಮಸ್
ಟಾಲಿವುಡ್‌ನಲ್ಲೀಗ ರೋಜಾ ಪುತ್ರಿ ಅನ್ಷು ಮಲಿಕಾ ಬಗ್ಗೆ ಸುದ್ದಿಯಾಗುತ್ತಿದೆ. ರೋಜಾ ಕೆಲವು ದಿನಗಳ ಹಿಂದೆ ರಿಯಾಲಿಟಿ ಶೋಗಳಿಗೆ ಅವರ ಪುತ್ರಿ ಜೊತೆ ಬಂದಿದ್ದರು. ಆಗಲೂ ರೋಜಾ ಪುತ್ರಿ ಬಗ್ಗೆನೆ ಚರ್ಚೆಯಾಗಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಅನ್ಷು ಮಲಿಕಾ ಫೋಟೊಗಳನ್ನು ಶೇರ್ ಮಾಡಿದಾಗಲೂ ಸದ್ದಾಗುತ್ತಿತ್ತು. ಈಗ ಮತ್ತೆ ರೋಜಾ ಮಗಳ ಹೆಸರು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ಸೂಪರ್ ಸ್ಟುಡೆಂಟ್
ರೋಜಾ ತಮ್ಮ ಮಗಳ ಬಗ್ಗೆ ಹಲವು ಬಾರಿ ಹೇಳಿಕೆ ಕೊಟ್ಟಿದ್ದಾರೆ. ಅನ್ಷು ಮಲಿಕಾಗೆ ಈಗಾಗಲೇ ಹಲವು ಪ್ರಶಸ್ತಿಗಳು ಸಂದಿವೆ. ಲೇಖಕಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಡ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಹಲವು ಬಾರಿ ಅನ್ಷು ಮಲಿಕಾ ಅತ್ಯುತ್ತಮ ವಿದ್ಯಾರ್ಥಿ. ಶಿಸ್ತಿನಲ್ಲೂ ಉತ್ತಮ ಎಂದು ಹಲವು ಬಾರಿ ಹೇಳಿದ್ದೂ ಇದೆ. ಇವರೇ ಈಗ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

ರೋಜಾ ಪುತ್ರಿ ಟಾಲಿವುಡ್ ಎಂಟ್ರಿ
ಅನ್ಷು ಮಲಿಕಾ ಟಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾಗೆ ಎಂಟ್ರಿ ಕೊಡುವುದಕ್ಕೆಂದೇ ಪೂರ್ವಾಭ್ಯಾಸ ನಡೆಸುತ್ತಿದ್ದಾರೆ. ಸದ್ಯದಲ್ಲಿಯೇ ಮೊದಲ ಸಿನಿಮಾದಲ್ಲಿ ಕಾಣಿಸಿಕೊಳ್ಳಿದ್ದಾರೆ ಅನ್ನೋ ಸುದ್ದಿ ಹಬ್ಬಿದೆ. ಅಲ್ಲದೆ ವಿಶೇಷ ತರಬೇತಿಗಾಗಿ ಅಮೆರಿಕಾಗೆ ತೆರಳಿದ್ದಾರೆಂಬ ಸುದ್ದಿ ಹಬ್ಬಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಟಾಲಿವುಡ್ ಸ್ಟಾರ್ ನಟನ ಪುತ್ರನೊಂದಿಗೆ ಟಾಲಿವುಡ್‌ಗೆ ಎಂಟ್ರಿ ಕೊಡ್ತಾರೆ ಅನ್ನೋದು ಕೂತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ,ಈ ಸುದ್ದಿ ಇನ್ನೂ ಅಧಿಕೃತವಾಗಿ ಅನೌನ್ಸ್ ಆಗಬೇಕಿದೆ.


Click it and Unblock the Notifications











