ಶ್ರೀನಗರ ಕಿಟ್ಟಿ ರಚಿತಾ ರಾಮ್ ಸಿನಿಮಾಗೆ ಸಂಕಷ್ಟ; 'ಸಂಜು ವೆಡ್ಸ್ ಗೀತಾ 2' ರಿಲೀಸ್ ಆಗೋದು ಡೌಟ್!?
ಸಂಕ್ರಾಂತಿ ಹಬ್ಬಕ್ಕೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳೂ ಅಲರ್ಟ್ ಆಗಿವೆ. ಕನ್ನಡವೂ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳು ಕೂಡ ಇದೇ ಹಬ್ಬಕ್ಕೆ ಪೈಪೋಟಿಗೆ ಬಿದ್ದು ಬಿಡುಗಡೆಯಾಗುತ್ತಿವೆ. ಅದರಲ್ಲಿ ಕನ್ನಡದ ಎರಡು ಸಿನಿಮಾಗಳು ಕೂಡ ಸೇರಿಕೊಂಡಿವೆ. ಶರಣ್ ನಟನೆಯ 'ಛೂ ಮಂತರ್'. ಇನ್ನೊಂದು ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಸಿನಿಮಾ 'ಸಂಜು ವೆಡ್ಸ್ ಗೀತಾ 2'.
ಒಂದು ಕಡೆ ಕರ್ನಾಟಕದಲ್ಲಿಯೇ ಪರಭಾಷೆಯ ಸಿನಿಮಾಗಳ ಹಾವಳಿಗೆ ಕನ್ನಡ ಸಿನಿಮಾಗಳೂ ತತ್ತರಿಸಿ ಹೋಗಿವೆ. ಥಿಯೇಟರ್ ಸಿಗುತ್ತಿಲ್ಲ ಅಂತ ಕನ್ನಡ ಸಿನಿಮಾ ಮಂದಿ ಕಣ್ಣೀರು ಹಾಕುತ್ತಿದ್ದಾರೆ. ಈ ಮಧ್ಯೆ ಇನ್ನೇನು ಬಿಡುಗಡೆ ಹೊಸ್ತಿಲಲ್ಲಿ ಇರುವ 'ಸಂಜು ವೆಡ್ಸ್ ಗೀತಾ 2' ಬಿಡುಗಡೆ ಆಗೋದು ಅನುಮಾನ ಅನ್ನೋ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ.

ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಸಿನಿಮಾ 'ಸಂಜು ವೆಡ್ಸ್ ಗೀತಾ 2' ಜನವರಿ 10 ರಂದು ರಿಲೀಸ್ ಆಗಬೇಕು. ಈಗಾಗಲೇ ಇಡೀ ತಂಡ ಸಿನಿಮಾದ ಪ್ರಚಾರವನ್ನು ಭರ್ಜರಿಯಾಗಿ ಮಾಡಿದೆ. ಆದರೆ, ಇನ್ನೇನು ಒಂದು ದಿನ ಬಾಕಿ ಉಳಿದಿದೆ ಎನ್ನುವಾಗಲೇ ಸಿನಿಮಾ ರಿಲೀಸ್ ಆಗೋದು ಅನುಮಾನ ಅನ್ನೋದು ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಇತ್ತ ನಾಗಶೇಖರ್ ಹಾಗೂ ತಂಡದ ಪ್ರಮುಖ ಹೈದರಾಬಾದ್‌ಗೆ ಪಯಣ ಬೆಳೆಸಿದ್ದಾರಂತೆ. ಅತ್ತ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡುವುದಕ್ಕೆ ಆಗುತ್ತಿಲ್ಲ. ಅಸಲಿಗೆ ಏನಿದು? ಸಿನಿಮಾ ರಿಲೀಸ್ ಆಗುವುದು ಅನುಮಾನ ಯಾಕೆ? ತಿಳಿಯಲು ಮುಂದೆ ಓದಿ.
'ಸಂಜು ವೆಡ್ಸ್ ಗೀತಾ 2' ಈಗಾಗಲೇ ಜನವರಿ 10ಕ್ಕೆ ರಿಲೀಸ್ ಆಗುತ್ತೆ ಅಂತ ತಂಡ ಅನೌನ್ಸ್ ಮಾಡಿದೆ. ರಿಲೀಸ್‌ಗೆ ಇನ್ನೊಂದು ದಿನ ಬಾಕಿ ಇದೆ ಅನ್ನುವಾಗಲೇ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ. ಸುಮಾರು 4.5 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಬಿಡುಗಡೆ ಹೊಸ್ತಿಲಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಇನ್ನು 'ಸಂಜು ವೆಡ್ಸ್ ಗೀತಾ 2' ಸಿನಿಮಾ ಟಿಕೆಟ್ ಬುಕ್ ಮಾಡುವುದಕ್ಕೆ ಹೋದರೂ ಬುಕ್ ಮೈ ಶೋನಲ್ಲಿ ಸಾಧ್ಯವಾಗುತ್ತಿಲ್ಲ. ಇದನ್ನು ಗಮನಿಸಿದರೆ, ತಂಡ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದೆ ಅನ್ನು ಸಿನಿಮಾ ಮಂದಿಯ ಮಾತು ನಿಜ ಎನಿಸುತ್ತಿದೆ. 'ಸಂಜು ವೆಡ್ಸ್ ಗೀತಾ 2' ಸಿನಿಮಾ ರಿಲೀಸ್‌ಗೆ ಫೈನಾನ್ಷಿಯರ್ ಕಡೆಯಿಂದ ಇನ್ನೂ ಕ್ಲಿಯರೆನ್ಸ್ ಸಿಕ್ಕಿಲ್ಲ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ.

'ಸಂಜು ವೆಡ್ಸ್ ಗೀತಾ 2' ತಂಡ ಕರ್ನಾಟಕದ ಫೈನಾನ್ಷಿಯರ್‌ಗೆ 2.5 ಕೋಟಿ ರೂಪಾಯಿ ಕೊಡಬೇಕಿದೆ. ಆದರೆ, ಅದನ್ನು ತಂಡ ಇನ್ನೂ ಅಷ್ಟು ಹಣವನ್ನು ನೀಡಿಲ್ಲ. ಹೀಗಾಗಿ ಅವರ ಕಡೆಯಿಂದ ಇನ್ನೂ ಕ್ಲಿಯರೆನ್ಸ್ ಸಿಕ್ಕಿಲ್ಲ. ಮೂಲಗಳ ಪ್ರಕಾರ, ಫೈನಾನ್ಷಿಯರ್ ಬಿಡುಗಡೆಗೂ ಮುನ್ನ 75 ಲಕ್ಷ ರೂಪಾಯಿ ಪಾವತಿಸುವಂತೆ ಹೇಳಿಕೊಂಡಿದ್ದಾರೆ. ಅದನ್ನೂ ಚಿತ್ರತಂಡ ನೀಡಿಲ್ಲ. ಈ ಕಾರಣಕ್ಕೆ ಫೈನಾನ್ಷಿಯರ್ ಇನ್ನೂ ರಿಲೀಸ್‌ಗೆ ಅನುಮತಿಯನ್ನು ನೀಡಿಲ್ಲ ಎನ್ನಲಾಗಿದೆ.
ಈ ಸಂಕಷ್ಟದಲ್ಲಿ ಇರುವಾಗಲೇ 'ಸಂಜು ವೆಡ್ಸ್ ಗೀತಾ 2' ಚಿತ್ರತಂಡಕ್ಕೆ ಮತ್ತೊಂದು ಸಮಸ್ಯೆ ಎದುರಾಗಿದೆ. ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಈ ಸಿನಿಮಾ ರಿಲೀಸ್ ಮಾಡದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿರ್ದೇಶಕ ನಾಗಶೇಖರ್ ಅವರ ತಂಡ ಹೈದರಾಬಾದ್‌ಗೆ ದೌಡಾಯಿಸಿದೆ ಅಂತಾನೂ ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಆರ್ಥಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಸಿನಿಮಾ ನಾಳೆ (ಜನವರಿ 10) ರಿಲೀಸ್ ಆಗುತ್ತಾ? ಇಲ್ಲವಾ? ಅನ್ನೋ ಅನುಮಾನವಂತೂ ಮೂಡಿದೆ. ಒಂದು ವೇಳೆ ರಿಲೀಸ್ ಆಗದೇ ಹೋದರೇ ಶಿವರಾತ್ರಿಗೆ ಸಿನಿಮಾ ಬಿಡುಗಡೆಯಾಗಬಹುದು ಎಂದು ನಿರೀಕ್ಷೆ ಹೇಳುತ್ತಿದ್ದಾರೆ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಈ ವಿಚಾರದ ಬಗ್ಗೆ ಇನ್ನೂ ಚಿತ್ರತಂಡ ಪ್ರತಿಕ್ರಿಯೆ ನೀಡಬೇಕಿದೆ.


Click it and Unblock the Notifications











