'ಮ್ಯಾಕ್ಸ್','ಯುಐ', 'ಬೈರತಿ ರಣಗಲ್' ಭರ್ಜರಿ ಮೊತ್ತಕ್ಕೆ ಟಿವಿ ರೈಟ್ಸ್ ಮಾರಾಟ? ಚಿತ್ರರಂಗದಲ್ಲೇನಿಗೆ ಟಾಕ್?
ಕನ್ನಡ ಚಿತ್ರರಂಗದ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿರುವುದು ಹೊಸ ವಿಷಯವೇನಲ್ಲ. ಕಳೆದ ಎರಡು-ಮೂರು ವರ್ಷಗಳಿಂದ ಸ್ಯಾಂಡಲ್‌ವುಡ್ ನಿರ್ಮಾಪಕರು ತಮ್ಮ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೂ ಆಗದೆ. ಇತ್ತ ಇಟ್ಟುಕೊಳ್ಳುವುದಕ್ಕೂ ಆಗದೆ ಪರದಾಡಿದ ದಿನಗಳೂ ಇವೆ. ಕನ್ನಡದ ಸೂಪರ್ ಸ್ಟಾರ್ ಸಿನಿಮಾಗಳು ವರ್ಷಕ್ಕೆ ಎರಡು ಸಿನಿಮಾ ಮಾಡದೇ ಇರುವುದೇ ಕಾರಣ ಅನ್ನೋ ಆರೋಪ ಕೂಡ ಕೇಳಿ ಬಂದಿತ್ತು.
ಓಟಿಟಿ ಫ್ಲಾಟ್‌ಫಾರ್ಮ್‌ಗಳು ಕನ್ನಡ ಸಿನಿಮಾ ಖರೀದಿ ಮಾಡುವುದನ್ನು ನಿಲ್ಲಿಸಿದ್ದವು. ಇನ್ನೊಂದು ಕಡೆ ಸ್ಯಾಟಲೈಟ್ ರೈಟ್ಸ್ ಕೂಡ ಖರೀದಿ ಮಾಡುತ್ತಿರಲಿಲ್ಲ. ಈ ಕಾರಣಕ್ಕೆ ಕನ್ನಡ ಸಿನಿಮಾಗಳ ನಿರ್ಮಾಪಕರು ಅತಂತ್ರಕ್ಕೆ ಸಿಲುಕಿದ್ದರು. ಸಿನಿಮಾಗಳನ್ನು ಬಿಡುಗಡೆ ಮಾಡದೇ ಹಾಗೇ ಉಳಿಸಿಕೊಂಡವರೂ ಇದ್ದಾರೆ. ಸದ್ಯ ಕನ್ನಡ ಮನರಂಜನಾ ವಾಹಿನಿಗಳು ಸಿನಿಮಾಗಳನ್ನು ಖರೀದಿ ಮಾಡುವುದಕ್ಕೆ ಶುರು ಮಾಡಿವೆ ಅನ್ನೋ ಸುದ್ದಿ ಚಿತ್ರರಂಗದಲ್ಲಿ ಓಡಾಡುತ್ತಿದೆ.

ಈಗಾಗಲೇ ಕನ್ನಡದ ಮೂರು ಎಕ್ಸ್‌ಪೆಕ್ಟೆಡ್ ಸಿನಿಮಾಗಳನ್ನು ಖರೀದಿಗೆ ಒಪ್ಪಿಗೆ ಸೂಚಿದೆ ಅನ್ನೋ ಸುದ್ದಿ ಸದ್ಯ ಹರಿದಾಡುತ್ತಿದೆ. ಅದರಲ್ಲಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷೆಯ ಸಿನಿಮಾ 'ಮ್ಯಾಕ್ಸ್', ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ 'ಯುಐ' ಹಾಗೂ ಶಿವರಾಜ್‌ಕುಮಾರ್ ನಟನೆಯ 'ಬೈರತಿ ರಣಗಲ್' ಸಿನಿಮಾಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿವೆ ಎನ್ನಲಾಗಿದೆ. ಹಾಗಿದ್ದರೆ, ಈ ಮೂರು ಸಿನಿಮಾಗಳು ಎಷ್ಟು ಮೊತ್ತಕ್ಕೆ ಸೇಲ್ ಆಗಿವೆ? ಖರೀದಿ ಮಾಡಿದ್ದು ಯಾರು? ತಿಳಿಯುವುದಕ್ಕೆ ಮುಂದೆ ಓದಿ.
ಕಿಚ್ಚ ಸುದೀಪ್ 'ಮ್ಯಾಕ್ಸ್'
'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಗ್ಯಾಪ್ ಕೊಟ್ಟಿದ್ದರು. ಒಳ್ಳೆಯ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳಲು ಸಮಯ ತೆಗೆದುಕೊಂಡಿದ್ದರು. ಈ ಗ್ಯಾಪ್‌ನಲ್ಲಿ ಪಕ್ಕಾ ಮಾಸ್ ಸಿನಿಮಾ 'ಮ್ಯಾಕ್ಸ್' ಶೂಟಿಂಗ್ ಮುಗಿದು ಬಿಡುಗಡೆ ಸಜ್ಜಾಗುತ್ತಿದೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ರಿಲೀಸ್ ಆಗಿರುವುದರಿಂದ ರಿಲೀಸ್‌ಗೆ ಸಮಯ ಹಿಡಿಯುತ್ತಿದೆ. ಆದರೆ, ಇದೇ ವರ್ಷ ರಿಲೀಸ್ ಆಗಬಹುದು ಅನ್ನೋ ನಿರೀಕ್ಷೆಯಲ್ಲಿ ಫ್ಯಾನ್ಸ್ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ.
ಸಿನಿಮಾ ಮಂದಿಯ ಪ್ರಕಾರ, 'ಮ್ಯಾಕ್ಸ್' ಸಿನಿಮಾದ ಸ್ಯಾಟಲೈಟ್ ಹಕ್ಕು ಮಾರಾಟ ಆಗಿದೆ. ಸದ್ಯ ಕನ್ನಡದ ಅವತರಣಿಕೆಯನ್ನು ಜೀ ಕನ್ನಡ ಖರೀದಿ ಮಾಡಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಸುಮಾರು 10.8 ಕೋಟಿ ರೂಪಾಯಿಗೆ ಜೀ ಕನ್ನಡ ಖರೀದಿ ಮಾಡಿದೆ ಅನ್ನೋದು ಸದ್ಯ ಚಿತ್ರರಂಗದಲ್ಲಿ ಓಡಾಡುತ್ತಿರುವ ಸುದ್ದಿ. ಆದರೆ, ಈ ಬಗ್ಗೆ ಜೀ ಕನ್ನಡ ಇನ್ನೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ಉಪೇಂದ್ರ 'ಯುಐ'
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ 'ಯುಐ' ಕನ್ನಡದ ಮತ್ತೊಂದು ಎಕ್ಸ್‌ಪೆಕ್ಟೆಡ್ ಸಿನಿಮಾ. ಉಪ್ಪಿ ಈ ಪ್ಯಾನ್ ಇಂಡಿಯಾ ಸಿನಿಮಾಗೆ ದಕ್ಷಿಣ ಭಾರತದಲ್ಲಿ ಈಗಾಗಲೇ ಕ್ರೇಜ್ ಹೆಚ್ಚಾಗಿದೆ. ಆದರೆ, ಈ ಸಿನಿಮಾ ಇದೇ ವರ್ಷ ರಿಲೀಸ್ ಆಗುತ್ತಾ? ಅನ್ನೋ ಬಗ್ಗೆ ಗೊಂದಲವಿದೆ. ಈ ಸಿನಿಮಾವನ್ನೂ ಜೀ ಕನ್ನಡವೇ ಖರೀದಿ ಮಾಡಿರುವ ಬಗ್ಗೆ ಸುದ್ದಿ ಓಡಾಡುತ್ತಿದೆ. ಉಪ್ಪಿಯ ಸಿನಿಮಾ ಸುಮಾರು 8.1 ಕೋಟಿ ರೂಪಾಯಿಗೆ ಕೇವಲ ಕನ್ನಡ ವರ್ಷನ್ ಸೇಲ್ ಆಗಿದೆ ಎನ್ನಲಾಗಿದೆ.

ಶಿವಣ್ಣನ 'ಬೈರತಿ ರಣಗಲ್'
ಶಿವರಾಜ್‌ಕುಮಾರ್ ಸಿನಿಮಾ ಕನ್ನಡದ ಮತ್ತೊಂದು ಎಕ್ಸ್‌ಪೆಕ್ಟೆಡ್ ಸಿನಿಮಾ. 'ಮಫ್ತಿ' ನಿರ್ದೇಶಿಸಿದ್ದ ನರ್ತನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಬೈರತಿ ರಣಗಲ್' ಕೂಡ ಬಿಡುಗಡೆ ಸಜ್ಜಾಗಿದ್ದು, ಕನ್ನಡದ ವರ್ಷನ್ ಅನ್ನು ಜೀ ಕನ್ನಡವೇ 9 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಸಿನಿಮಾ ತಂಡ ಆಗಲಿ, ಇಲ್ಲವೇ ಜೀ ಕನ್ನಡ ಆಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ಸೂಚನೆ: ಈ ಮೂರು ಸಿನಿಮಾಗಳ ಸ್ಯಾಟಲೈಟ್ ಹಕ್ಕುಗಳ ಬಗ್ಗೆ ಮಾಹಿತಿಯನ್ನು ಚಿತ್ರರಂಗದ ಬೇರೆ ಬೇರೆ ಮೂಲಗಳಿಂದ ಬಂದಿದ್ದು, ಅಧಿಕೃತವಾಗಿರುವುದಿಲ್ಲ. ಸಿನಿಮಾ ವಲಯದಲ್ಲಿ ಚರ್ಚೆಯಾಗುತ್ತಿರುವ ಅಂಕಿ ಸಂಖ್ಯೆಗಳು ಅಷ್ಟೇ.


Click it and Unblock the Notifications











