ವಿವಾಹ ವಾರ್ಷಿಕೋತ್ಸವ ಹಿನ್ನೆಲೆ ಪತ್ನಿ ಜೊತೆ ಸುದೀಪ್ ಆಸ್ಟ್ರೇಲಿಯಾ ಪ್ರವಾಸ: 'ಗಂಧದ ಗುಡಿ' ಈವೆಂಟ್‌ಗೆ ಬರಲ್ವಾ?
ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ಸೆಲೆಬ್ರೆಷನ್ ಮೂಡ್‌ನಲ್ಲಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ರಿಲೀಸ್ ಆಗಿರೋ 'ವಿಕ್ರಾಂತ್ ರೋಣ' ಒಂದೆಡೆಯಾದರೆ, ಇನ್ನೊಂದು ಕಡೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುಮಾರು 21 ವರ್ಷಗಳಾಗಿವೆ.
ಇದೇ ಅಕ್ಟೋಬರ್ 18 ರಂದು ಕಿಚ್ಚ ಸುದೀಪ್ ಹಾಗೂ ಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟು 21 ವರ್ಷಗಳಾಗಿವೆ. ಸದ್ಯ ಇದೇ ಮೂಡ್‌ನಲ್ಲಿರೋ ಸುದೀಪ್ ದಂಪತಿ ವಿದೇಶ ಪ್ರಯಾಣಕ್ಕೆ ಸಜ್ಜಾಗುತ್ತಿರೋ ಸುದ್ದಿ ಹರಿದಾಡುತ್ತಿದೆ.
ಇನ್ನೊಂದು ಕಡೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸು 'ಗಂಧದ ಗುಡಿ'ಯ ಪ್ರಿ-ರಿಲೀಸ್ ಈವೆಂಟ್‌ಗೆ ಅತಿಥಿಯಾಗಿ ಆಗಮಿಸುತ್ತಿದ್ದಾರೆ ಅಂತಾನೂ ಗುಲ್ಲೆದ್ದಿದೆ. ಕಿಚ್ಚ ಸುದೀಪ್ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿರೋದು ನಿಜವೇ? 'ಗಂಧದ ಗುಡಿ' ಈವೆಂಟ್‌ಗೆ ಹಾಜರಾಗುವುದಿಲ್ಲ. ಅಸಲಿಗೆ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮ್ಯಾಟರ್ ಏನು? ಅಂತ ತಿಳಿಯಲು ಮುಂದೆ ಓದಿ.

ಸುದೀಪ್-ಪ್ರಿಯಾಗೆ 21ನೇ ವಾರ್ಷಿಕೋತ್ಸವ
ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ಇಬ್ಬರೂ 21ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 2001 ಅಕ್ಟೋಬರ್ 18ರಂದು ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2000ನೇ ಇಸವಿಯಂದು ಪ್ರಿಯಾ ಹಾಗೂ ಕಿಚ್ಚ ಸುದೀಪ್ ಭೇಟಿಯಾಗಿತ್ತು. ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೂ ಯಶಸ್ವಿಯಾಗಿ ವೈವಾಹಿಕ ಜೀವನವನ್ನು ನಡೆಸಿದ್ದಾರೆ. ಪತ್ನಿ ಹಾಗೂ ಪುತ್ರಿ ಜೊತೆ ಸಮಯ ಕಳೆಯೋ ಸುದೀಪ್ ಈ ಬಾರಿಯ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದಾರೆ ಅನ್ನೋ ಮಾತಿದೆ.

ಸುದೀಪ್ ದಂಪತಿ ಆಸ್ಟ್ರೇಲಿಯಾ ಪ್ರವಾಸ
ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲು ಸುದೀಪ್ ಹಾಗೂ ಪ್ರಿಯಾ ಇಬ್ಬರೂ ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದಾರೆ. ಅಕ್ಟೋಬರ್ 23ರಂದು ಭಾರತ ಹಾಗೂ ಪಾಕಿಸ್ತಾನ್ ನಡುವಿನ ವಿಶ್ವಕಪ್ ಪಂದ್ಯವನ್ನು ವೀಕ್ಷಣೆ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ. 'ವಿಕ್ರಾಂತ್ ರೋಣ' ಬಳಿಕ ಬಿಡುವು ಪಡೆದುಕೊಂಡು ಪತ್ನಿಯೊಂದಿಗೆ ವಿದೇಶಿ ಪ್ರವಾಸ ಮಾಡಲಿದ್ದಾರೆ ಅನ್ನೋ ಸುದ್ದಿ ಗುಲ್ಲೆದ್ದಿದೆ. ಆದರೆ, ಇದನ್ನು ಅಧಿಕೃತವಾಗಿ ಸುದೀಪ್ ಟೀಮ್ ಸ್ಪಷ್ಟಪಡಿಸಿಲ್ಲ.

'ಗಂಧದ ಗುಡಿ' ಕಾರ್ಯಕ್ರಮಕ್ಕೆ ಬರೋಲ್ವಾ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸು 'ಗಂಧದ ಗುಡಿ' ಬಿಡುಗಡೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ 'ಗಂಧದ ಗುಡಿ' ಬಿಡುಗಡೆಗೂ ಮುನ್ನ 'ಪುನೀತ್ ಪರ್ವ' ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಇಡೀ ಸ್ಯಾಂಡಲ್‌ವುಡ್ ಸೇರಿದಂತೆ ದಕ್ಷಿಣ ಭಾರತದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ಇದಕ್ಕೆ ಕಿಚ್ಚ ಸುದೀಪ್ ಕೂಡ ಆಗಮಿಸುತ್ತಿದ್ದಾರೆ ಅಂತ ಅಪ್ಪು ಅಭಿಮಾನಿಗಳು ಹೇಳಿದ್ದರು. ಆದ್ರೀಗ ಸುದೀಪ್ ಆಸ್ಟ್ರೇಲಿಯಾ ಪ್ರವಾಸ ನಿಗದಿಯಾಗಿದ್ದರಿಂದ ಈ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ.

'ವಿಕ್ರಾಂತ್ ರೋಣ' ಸಕ್ಸಸ್ ಖುಷಿ
ಈ ವರ್ಷ ತೆರೆಕಂಡ ಕನ್ನಡ ಸಿನಿಮಾಗಳ ಪೈಕಿ ಬ್ಲಾಕ್‌ಬಸ್ಟರ್ ಹಿಟ್ ಆಗಿರೋ ಸಿನಿಮಾ 'ವಿಕ್ರಾಂತ್ ರೋಣ'. ಕಿಚ್ಚನಿಗೆ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಯಶಸ್ಸು ತಂದುಕೊಟ್ಟಿದೆ. ಹೀಗಾಗಿ ಈ ಸಿನಿಮಾದ ಖುಷಿಯ ಸಂಭ್ರಮದಲ್ಲಿ ಸುದೀಪ್ ತೇಲಾಡುತ್ತಿದ್ದಾರೆ. ಇನ್ನೊಂದು ಕಡೆ ವಿವಾಹ ವಾರ್ಷಿಕೋತ್ಸವ ಬೇರೆ. ಹೀಗಾಗಿ ಎರಡರ ಸಂಭ್ರಮವನ್ನು ಆಸ್ಟ್ರೇಲಿಯಾದಲ್ಲಿ ಭಾರತ ಹಾಗೂ ಪಾಕಿಸ್ತಾನ್ ಪಂದ್ಯ ವೀಕ್ಷಿಸುವ ಮೂಲಕ ಆಚರಣೆ ಮಾಡುತ್ತಿದ್ದಾರೆ.


Click it and Unblock the Notifications











