ರಜನಿಕಾಂತ್ ಹಾಗೂ ಕಮಲ್ ಹಾಸನ್ ಚಿತ್ರಕ್ಕೆ ನಿರ್ದೇಶಕ ಶಂಕರ್ ವಿಲನ್?
'ಜೈಲರ್'-2 ಸಿನಿಮಾ ಚಿತ್ರೀಕರಣ ಮುಗಿಸಿ ನಟ ರಜನಿಕಾಂತ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಈಗಾಗಲೇ ಮತ್ತೆರಡು ಸಿನಿಮಾಗಳನ್ನು ತಲೈವಾ ಒಪ್ಪಿಕೊಂಡಿರುವುದು ಗೊತ್ತೇಯಿದೆ. ಕಮಲ್ ಹಾಸನ್ ನಿರ್ಮಾಣದ ಚಿತ್ರದಲ್ಲಿ ರಜನಿ ನಟಿಸಬೇಕಿದೆ. ಆದರೆ ಸಿನಿಮಾ ನಿರ್ದೇಶಕರು ಯಾರು? ಎನ್ನುವುದು ಗೊಂದಲದ ಗೂಡಾಗಿದೆ. ಇನ್ನು ಕಮಲ್ ಹಾಸನ್ ಜೊತೆ ಸೂಪರ್ ಸ್ಟಾರ್ ನಟಿಸುವ ಚಿತ್ರಕ್ಕೆ ನೆಲ್ಸನ್ ಆಕ್ಷನ್ ಕಟ್ ಹೇಳಲಿದ್ದಾರೆ.
ತಲೈವಾ 173 ಚಿತ್ರವನ್ನು ಸುಂದರ್ ಸಿ ನಿರ್ದೇಶನ ಮಾಡಬೇಕಿತ್ತು. ಕಮಲ್ ಹಾಸನ್ ಅವರ ರಾಜ್‌ಕಮಲ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಬೇಕಿದೆ. ಆದರೆ ಸಿನಿಮಾ ಘೋಷಣೆಯಾದ ಒಂದೇ ವಾರದಲ್ಲಿ ಸುಂದರ್ ಭಿನ್ನಾಭಿಪ್ರಾಯಗಳಿಂದ ಹೊರ ಬಂದಿದ್ದರು. ಬಳಿಕ ಯುವ ನಿರ್ದೇಶಕ ಸಿಬಿ ಚಕ್ರವರ್ತಿಗೆ ಆ ಅವಕಾಶ ಸಿಕ್ಕಿತ್ತು. ಆದರೆ ಅವರು ಕೂಡ ಸಿನಿಮಾ ನಿರ್ದೇಶನ ಮಾಡುವ ಅನುಮಾನ ಎನ್ನುವಂತಾಗಿದೆ. ಇದೆಲ್ಲದ ನಡುವೆ ತಲೈವಾ 173 ಚಿತ್ರಕ್ಕೆ ನಿರ್ದೇಶಕ ಶಂಕರ್ ಎಂಟ್ರಿ ಕೊಡುವ ಸುದ್ದಿ ಬಂದಿದೆ.

ಸಿಬಿ ಚಕ್ರವರ್ತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದು ಪಕ್ಕಾ ಆದ್ರೆ ನಿರ್ದೇಶಕ ಶಂಕರ್ ವಿಲನ್ ಆಗಿ ನಟಿಸ್ತಾರೆ ಎನ್ನಲಾಗ್ತಿದೆ. ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ ಶಂಕರ್ ಸಕ್ಸಸ್ ಕಂಡಿದ್ದಾರೆ. ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರಿಗೂ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದರು. ಆದರೆ ಬಣ್ಣ ಹಚ್ಚಿ ತೆರೆಮೇಲೆ ಈವರೆಗೆ ನಟಿಸಿಲ್ಲ. ಅದರಲ್ಲೂ ತಲೈವಾ ಎದುರು ವಿಲನ್ ಆಗಿ ಅಬ್ಬರಿಸ್ತಾರಾ? ಎಂದು ಕೆಲವರು ಹುಬ್ಬೇರಿಸಿದ್ದಾರೆ.
ಇತ್ತೀಚೆಗೆ ಶಂಕರ್ ನಿರ್ದೇಶನದ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. 'ಇಂಡಿಯನ್- 2' ಬಳಿಕ ಬಂದ 'ಗೇಮ್ ಚೇಂಜರ್' ಸಿನಿಮಾ ಹೀನಾಯವಾಗಿ ಸೋತಿತ್ತು. ಆ ಬಳಿಕ ಹೊಸ ಸಿನಿಮಾ ಘೋಷಣೆ ಮಾಡುವ ಧೈರ್ಯ ಕೂಡ ಮಾಡಲಿಲ್ಲ ಶಂಕರ್. ಇನ್ನು ಕಮಲ್ ಹಾಸನ್ ನಟನೆಯ 'ಇಂಡಿಯನ್- 3' ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಬಹುತೇಕ ಸಿನಿಮಾ ಕಂಪ್ಲೀಟ್ ಆಗಿದ್ದರೂ ಯಾರು ರಿಲೀಸ್ ಮಾಡುವ ಧೈರ್ಯ ಮಾಡ್ತಿಲ್ಲ.

ಐತಿಹಾಸಿಕ ಕಥಾಹಂದರದ 'ವೇಲ್ಪಾರಿ' ಚಿತ್ರವನ್ನು ಶಂಕರ್ ತೆರೆಗೆ ತರಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಆದರೆ ಸದ್ಯಕ್ಕೆ ಯಾವುದೇ ಅಪ್‌ಡೇಟ್ ಇಲ್ಲ. ಇದೆಲ್ಲದರ ನಡುವೆ ನಿರ್ದೇಶನ ಬಿಟ್ಟು ಶಂಕರ್ ನಟಿಸುತ್ತಾರೆ ಎನ್ನುವ ವಿಚಾರ ಕುತೂಹಲ ಮೂಡಿಸಿದೆ. ಅದರಲ್ಲೂ ರಜನಿಕಾಂತ್ ಎದುರು ವಿಲನ್ ಆಗಿ ಶಂಕರ್ ಅವರನ್ನು ಅಖಾಡಕ್ಕೆ ಇಳಿಸುತ್ತಾರಾ? ಎನ್ನುವ ವಿಚಾರ ಸದ್ದು ಮಾಡ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.
ತಲೈವಾಗಾಗಿ ಸಿಬಿ ಚಕ್ರವರ್ತಿ ಮಾಡಿಕೊಂಡಿರುವ ಕಥೆಯಲ್ಲಿ ವಿಲನ್ ಆಗಿ ಶಂಕರ್ ಅವರನ್ನು ಊಹಿಸಿಕೊಂಡಿದ್ದಾರಂತೆ. ಅದೇ ರೀತಿ ಸಿಮ್ರನ್ ಹಾಗೂ ಶೋಭನಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಇಲ್ಲೆದರ ನಡುವೆ ನಿಜಕ್ಕೂ ತಲೈವಾ 173 ಚಿತ್ರಕ್ಕೆ ಸಿಬಿ ಆಕ್ಷನ್ ಕಟ್ ಹೇಳ್ತಾರಾ? ಎನ್ನುವ ಅನುಮಾನ ಕಾಡುತ್ತಿದೆ. ಸಿಬಿಗೆ ಆ ಅವಕಾಶ ಸಿಗದೇ ಇದ್ದರೆ ಅಶ್ವಥ್ ಮಾರಿಮುತ್ತು ಅದೃಷ್ಟ ಕುಲಾಯಿಸಬಹುದು ಎನ್ನಲಾಗ್ತಿದೆ. ಅದೇ ನಿಜವಾದರೆ ರಜನಿಕಾಂತ್ ಎದುರು ಶಂಕರ್ ನಟಿಸುವುದಿಲ್ಲ ಎನ್ನುವ ವಾದವೂ ಇದೆ.
ಆರಂಭದ ದಿನಗಳಲ್ಲಿ ಕಮಲ್ ಹಾಸನ್ ಹಾಗೂ ರಜನಿಕಾಂತ್ ಒಟ್ಟೊಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದರು. ಆ ಬಳಿಕ ಇಬ್ಬರೂ ದೂರಾಗಿದ್ದರು. ಇತ್ತೀಚೆಗೆ ಮತ್ತೆ ಒಟ್ಟಿಗೆ ಕೆಲಸ ಮಾಡಲು ಮನಸ್ಸು ಮಾಡಿದ್ದಾರೆ. ನೆಲ್ಸನ್ ನಿರ್ದೇಶನದಲ್ಲಿ ಮಲ್ಟಿಸ್ಟಾರರ್ ಸಿನಿಮಾ ನಿರ್ಮಾಣವಾಗಲಿದೆ. ಅದಕ್ಕೂ ಮುನ್ನ ಕಮಲ್ ನಿರ್ಮಾಣದ ಚಿತ್ರದಲ್ಲಿ ರಜನಿಕಾಂತ್ ನಟಿಸಬೇಕಿದೆ.


Click it and Unblock the Notifications