ರಜನಿಕಾಂತ್ ಹಾಗೂ ಕಮಲ್ ಹಾಸನ್‌ಗೆ ಕೈಕೊಟ್ಟ ಮತ್ತೊಬ್ಬ ನಿರ್ದೇಶಕ?
ಸ್ಟಾರ್ ನಟರ ಜೊತೆ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ನಟನ ಇಮೇಜ್ ಗಮನದಲ್ಲಿಟ್ಟುಕೊಂಡು ಕಥೆ ಮಾಡಬೇಕು, ಅಭಿಮಾನಿಗಳನ್ನು ರಂಜಿಸುವ ಕಮರ್ಷಿಯಲ್ ಅಂಶಗಳನ್ನು ಸೇರಿಸಬೇಕು. ಕೊಂಚ ಎಡವಟ್ಟು ಆದರೂ ನೂರಾರು ಕೋಟಿ ರೂಪಾಯಿ ನಷ್ಟವಾಗುವ ಆತಂಕ ಇರುತ್ತದೆ. ಇದೇ ಕಾರಣಕ್ಕೆ ಸ್ಟಾರ್‌ಗಳ ಜೊತೆ ಸಿನಿಮಾ ಅಂದ್ರೆ ಫಿಲ್ಮ್ ಮೇಕರ್ಸ್‌ಗೆ ಕತ್ತಿಯ ಅಲಗಿನ ಮೇಲೆ ನಡೆಯುವುದು ನಡೆಯುವಂತಾಗುತ್ತದೆ.
ಸೂಪರ್ ಸ್ಟಾರ್ ರಜನಿಕಾಂತ್ ಶೀಘ್ರದಲ್ಲೇ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ ಎನ್ನುವ ಚರ್ಚೆ ಪದೇ ಪದೆ ಕೇಳಿಬರುತ್ತಲೇ ಇರುತ್ತದೆ. ಅದಕ್ಕೂ ಮುನ್ನ ಸಾಧ್ಯವಾದಷ್ಟು ಬೇಗ ಕೆಲ ಸಿನಿಮಾಗಳಲ್ಲಿ ನಟಿಸೋಕೆ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಹೀರೊ ಆಗಿಯೇ ಕೊನೆಯವರೆಗೂ ರಜನಿಕಾಂತ್ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ. ಆದರೆ ಅದಕ್ಕೆ ವಯಸ್ಸು ಸಾಥ್ ಕೊಡ್ತಿಲ್ಲ. ಇದೇ ಕಾರಣಕ್ಕೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುವ ಸಾಹಸ ಮಾಡುತ್ತಿದ್ದಾರೆ.

'ಕೂಲಿ' ಬಳಿಕ 'ಜೈಲರ್'-2 ಸಿನಿಮಾ ಮುಗಿಸುತ್ತಿದ್ದಾರೆ ರಜನಿಕಾಂತ್. ಇನ್ನೊಂದು ವಾರ ಚಿತ್ರೀಕರಣ ಮಾಡಿದರೆ ಕಂಪ್ಲೀಟ್ ಆಗುತ್ತದೆ. ಆ ಬಳಿಕ ಕಮಲ್ ಹಾಸನ್ ಜೊತೆ ತಲೈವಾ ನಟಿಸುವ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ನೆಲ್ಸನ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದಾರೆ. ಇನ್ನು ಕಮಲ್ ಹಾಸನ್ ನಿರ್ಮಾಣದ ಚಿತ್ರವೊಂದರಲ್ಲಿ ರಜನಿಕಾಂತ್ ನಟಿಸಬೇಕಿದೆ. ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿದೆ. ಸುಂದರ್ ಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ಹೊರ ಬಂದಿದ್ದಾರೆ. ಸುಂದರ್ ಸಿ ಬದಲು ರಜನಿಕಾಂತ್ ನಟನೆಯ 173ನೇ ಚಿತ್ರವನ್ನು ಸಿಬಿ ಚಕ್ರವರ್ತಿ ಎಂಬುವವರು ನಿರ್ದೇಶನ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಈಗ ಸಿಬಿ ಕೂಡ ಚಿತ್ರ ನಿರ್ದೇಶನಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಗುಲ್ಲಾಗಿದೆ.
ತಲೈವಾ 173 ಸಿನಿಮಾ ಘೋಷಣೆಯಾದ ಒಂದೇ ವಾರಕ್ಕೆ ಭಿನ್ನಾಭಿಪ್ರಾಯಗಳಿಂದ ನಿರ್ದೇಶಕ ಸುಂದರ್ ಸಿ ಹೊರ ಬಂದಿದ್ದರು. ಅದಕ್ಕೆ ಸರಿಯಾದ ಕಾರಣ ಏನು ಎನ್ನುವುದು ಗೊತ್ತಾಗಲೇ ಇಲ್ಲ. ಸುಂದರ್ ಹೇಳಿದ ಕಥೆಯಲ್ಲಿ ಬದಲಾವಣೆ ಮಾಡಬೇಕು ಎಂದು ಹೇಳಿದ್ದಕ್ಕೆ ಅವರು ಒಪ್ಪದೇ ರಜನಿಕಾಂತ್ ಸಿನಿಮಾ ಸಹವಾಸವೇ ಬೇಡ ಎಂದು ಹೊರ ನಡೆದಿದ್ದಾಗಿ ಹೇಳಲಾಯಿತು. ಆ ಬಳಿಕ ಯುವ ನಿರ್ದೇಶಕ ಸಿಬಿ ಚಕ್ರವರ್ತಿಗೆ ಅವಕಾಶ ಸಿಕ್ಕಿತ್ತು. ಕಮಲ್ ಹಾಸನ್ ನಿರ್ಮಾಣ ಸಂಸ್ಥೆ, ರಜನಿಕಾಂತ್ ಹೀರೊ, ನೂರಾರು ಕೋಟಿ ಬಂಡವಾಳ.. ಅದಕ್ಕಿಂತ ಬೇರೆ ಏನು ಬೇಕು. ರಜನಿಕಾಂತ್ ಸಿನಿಮಾ ನಿರ್ದೇಶನದ ಅವಕಾಶ ಸಿಕ್ಕಿದ್ದಕ್ಕೆ ಸಿಬಿ ಸಂತಸಗೊಂಡಿದ್ದರು.

ಇದೀಗ ಸಿಬಿ ಚಕ್ರವರ್ತಿ ಕೂಡ ತಲೈವಾ 173 ಸಿನಿಮಾದಿಂದ ಹೊರ ಬರುವ ಬಗ್ಗೆ ಚರ್ಚೆ ಜೋರಾಗಿದೆ ಹಾಗಾಗಿ ಸಿಬಿ ಬದಲು ಅಶ್ವಥ್ ಮಾರಿಮುತ್ತು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಓ ಮೈ ಕಡವುಲೆ, ಓರಿ ದೇವುಡಾ ಹಾಗೂ ಡ್ರ್ಯಾಗನ್ ಎಂಬ ಸಿನಿಮಾಗಳನ್ನು ಅಶ್ವಥ್ ನಿರ್ದೇಶಿಸಿ ಗೆದ್ದಿದ್ದಾರೆ. ಈಗ ರಜನಿಕಾಂತ್ ನಟನೆಯ ಚಿತ್ರದ ಸಾರಥ್ಯ ವಹಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಹೊರಬರಬೇಕಿದೆ.
ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಟ್ಟೊಟ್ಟಿಗೆ ಚಿತ್ರರಂಗದಲ್ಲಿ ಬೆಳೆದು ಬಂದವರು. ಆರಂಭದಲ್ಲಿ ಒಟ್ಟಿಗೆ ಒಂದಷ್ಟು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. ಆದರೆ ಬಳಿಕ ದಿಢೀರನೆ ಒಟ್ಟಿಗೆ ನಟಿಸುವುದು ಬಿಟ್ಟಿದ್ದರು. ದಶಕಗಳ ಬಳಿಕ ಮತ್ತೆ ದಿಗ್ಗಜ ನಟರಿಬ್ಬರು ಒಟ್ಟಿಗೆ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ. ಒಟ್ಟಿಗೆ ನಟಿಸುವ ಮುನ್ನ ಕಮಲ್ ನಿರ್ಮಾಣದ ಚಿತ್ರವೊಂದರಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಆ ಬಳಿಕ ನೆಲ್ಸನ್ ನಿರ್ದೇಶನದಲ್ಲಿ ಇಬ್ಬರೂ ಒಟ್ಟಿಗೆ ಕಮಾಲ್ ಮಾಡಲಿದ್ದಾರೆ.


Click it and Unblock the Notifications











