ದಳಪತಿ ವಿಜಯ್ ಕೊನೆಯ ಸಿನಿಮಾಗೆ ದಾಖಲೆ ಸಂಭಾವನೆ? RRR ನಿರ್ಮಾಪಕ ಗ್ರೀನ್ ಸಿಗ್ನಲ್.. ಕೇಳಿದ್ದೆಷ್ಟು?
ತಮಿಳು ಚಿತ್ರರಂಗ ಜನಪ್ರಿಯ ನಟ ದಳಪತಿ ವಿಜಯ್ ರಾಜಕೀಯಕ್ಕೆ ಧುಮುಕಿದ್ದು ಗೊತ್ತೇ ಇದೆ. ಬಹಳ ದಿನಗಳಿಂದ ದಳಪತಿ ವಿಜಯ್ ರಾಜಕೀಯ ಪಕ್ಷಕ್ಕೆ ಬರುತ್ತಾರೆಂಬ ಸುದ್ದಿ ಓಡಾಡುತ್ತಲೇ ಇತ್ತು. ಲೋಕಸಭಾ ಚುನಾವಣೆ ಸಮೀಪವಾಗುತ್ತಿದ್ದ ಬೆನ್ನಲ್ಲೇ ವಿಜಯ್ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. ಇದು ವಿಜಯ್ ಅಭಿಮಾನಿಗಳಿಗೆ ಒಂದ್ಕಡೆ ಖುಷಿ ಆದರೆ, ಇನ್ನೊಂದು ಕಡೆ ನಿರಾಸೆ ಹುಟ್ಟಿಸಿದೆ.
ಇತ್ತೀಚೆಗಷ್ಟೇ ದಳಪತಿ ವಿಜಯ್ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. ವಿಜಯ್ ತಮ್ಮ ಪಕ್ಷದ ಹೆಸರನ್ನು 'ತಮಿಳಗ ವೆಟ್ರಿ ಕಳಂ' ಎಂದು ಅನೌನ್ಸ್ ಮಾಡುತ್ತಿದ್ದಂತೆ ಅಭಿಮಾನಿಗಳ ಹರ್ಷ ವ್ಯಕ್ತಪಡಿಸಿದ್ದರು. ಆದರೆ, ಎರಡು ಸಿನಿಮಾಗಳ ಬಳಿಕ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತೇನೆ ಎಂದಾಗ ವಿಜಯ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿತ್ತು. ಆದ್ರೀಗ ಕಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ.

ದಳಪತಿ ವಿಜಯ್ 69ನೇ ಸಿನಿಮಾವೇ ಕೊನೆಯದ್ದು. ಆಮೇಲೆ ವಿಜಯ್ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಜನರೊಂದಿಗೆ ಬೆರೆತು ರಾಜಕೀಯ ಪಕ್ಷ ಕಟ್ಟಲು ಮುಂದಾಗುವುದಾಗಿ ಹೇಳಿದ್ದಾರೆ. ಈ ಮಧ್ಯೆ ದಳಪತಿ ವಿಜಯ್ ಕೊನೆಯ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಕೆಲ ಸಂಸ್ಥೆಗಳು ಮುಗಿಬಿದ್ದಿವೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, ವಿಜಯ್ ಕೊನೆಯ ಸಿನಿಮಾ ಡಿವಿವಿ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
RRR ಸಿನಿಮಾದ ನಿರ್ಮಾಪಕ ಡಿವಿವಿ ದಾನಯ್ಯ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ, ಈ ಸಿನಿಮಾಗೆ ವಿಜಯ್ ಅತೀ ಹೆಚ್ಚು ಸಂಭಾವನೆಯನ್ನು ಡಿಮ್ಯಾಂಡ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ. ಕಾಲಿವುಡ್‌ನಲ್ಲಿ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ ಕೊನೆಯ ಸಿನಿಮಾ ವಿಜಯ್ ಕೇಳಿದ ಸಂಭಾವನೆ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ವೆಂಕಟ್ ಪ್ರಭು ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ದಳಪತಿ ವಿಜಯ್ ನಟಿಸುತ್ತಿದ್ದಾರೆ. ಈಗಾಗಲೇ ವಿಜಯ್ 69ನೇ ಸಿನಿಮಾಗೂ ಕಮಿಟ್ ಆಗಿದ್ದು, ಕೊನೆಯ ಸಿನಿಮಾಗೆ ಬರೋಬ್ಬರಿ 200 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಇಷ್ಟು ದೊಡ್ಡ ಸಂಭಾವನೆಯನ್ನು ನೀಡುವುದಕ್ಕೆ ಡಿವಿವಿ ಸಂಸ್ಥೆ ಕೂಡ ಒಪ್ಪಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಈಗ ನಿರ್ಮಾಣ ಸಂಸ್ಥೆ ನಿರ್ದೇಶಕರನ್ನು ಹುಡುಕುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಸದ್ಯಕ್ಕೆ ಓಡಾಡುತ್ತಿರುವ ಮಾಹಿತಿ ಪ್ರಕಾರ, ತಮಿಳಿನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್ ಆಕ್ಷನ್ ಕಟ್ ಹೇಳುತ್ತಾರೆ ಅನ್ನೋ ಮಾತು ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇವರೊಂದಿಗೆ ಕಾರ್ತಿಕ್ ಸುಬ್ಬರಾಜು ಅವರ ಹೆಸರು ಕೂಡ ಓಡಾಡುತ್ತಿದೆ. ನಿರ್ದೇಶಕರು ಯಾರೇ ಇದ್ದರೂ, ಕೊನೆಯ ಸಿನಿಮಾವನ್ನು ಎಲ್ಲಾ ಸಿನಿಪ್ರಿಯರು ಮುಗಿಬಿದ್ದು ನೋಡುತ್ತಾರೆ ಅನ್ನೋ ಅಚಲವಾದ ನಂಬಿಕೆ ಮೇಲೆ 200 ಕೋಟಿ ರೂಪಾಯಿಯನ್ನು ಸಂಭಾವನೆ ರೂಪದಲ್ಲಿ ನೀಡುವುದಕ್ಕೆ ರೆಡಿಯಾಗಿದ್ದಾರೆ ಅನ್ನೋದು ಸುದ್ದಿ.
ಈ ಹಿಂದೆ ದಿಲ್ ರಾಜು ನಿರ್ಮಾಣ ಮಾಡಿದ್ದ 'ವಾರಿಸು' ಸಿನಿಮಾಗೆ ಸುಮಾರು 120 ಕೋಟಿ ರೂಪಾಯಿ ಸಂಭಾವನೆಯನ್ನು ದಳಪತಿ ವಿಜಯ್‌ಗೆ ಕೊಟ್ಟಿದ್ದಾರೆಂಬ ಸುದ್ದಿ ಓಡಾಡಿತ್ತು. ಸದ್ಯ ದಳಪತಿ ವಿಜಯ್ 'ಗೋಟ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ವಿಜಯ್ ಸುಮಾರು 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಸಿನಿಮಾವನ್ನು ವೆಂಕಟ್ ಪ್ರಭು ನಿರ್ದೇಶನ ಮಾಡಿದ್ದು, ಎಜಿಎಸ್ ಎಂಟರ್‌ಟೈನ್ಮೆಂಟ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.


Click it and Unblock the Notifications











