ಧ್ರುವ ಸರ್ಜಾ ಜೊತೆ ಕೈ ಜೋಡಿಸಿದರೇ 'ಯುಐ' ನಿರ್ಮಾಪಕ; ದುನಿಯಾ ವಿಜಯ್ ಸಿನಿಮಾ ಯಾವಾಗ?
ಸ್ಯಾಂಡಲ್‌ವುಡ್ ಅಂದ್ಮೇಲೆ ಸುದ್ದಿಗಳಿಗೇನು ಭರವೇ. ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಒಂದೊಂದೆ ಸುದ್ದಿ ಓಡಾಡುತ್ತಲೇ ಇರುತ್ತೆ. ಪ್ರತಿ ದಿನ ಒಬ್ಬರಲ್ಲ ಒಬ್ಬ ನಿರ್ಮಾಪಕರು ಹೊಸ ಸಿನಿಮಾಗೆ ಸ್ಕೆಚ್ ಹಾಕುತ್ತಿದ್ದಾರೆ. ಸ್ಟಾರ್ ಹೀರೋಗಳ ಹಿಂದೆ ಬೀಳುತ್ತಿದ್ದಾರೆ. ಈಗ ಇಂತಹದ್ದೇ ಒಂದು ಸ್ಥಿತಿ ಓಡುತ್ತಿದೆ. 'ಯುಐ' ನಿರ್ಮಾಣ ಮಾಡಿದ್ದ ಕನ್ನಡದ ನಿರ್ಮಾಪಕ ಕೆಪಿ ಶ್ರೀಕಾಂತ್ ಮತ್ತೆ ಎರಡು ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದ್ದಾರೆ.
'ಮಾರ್ಟಿನ್' ಬಳಿಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವರ್ಷಕ್ಕೆ ಎರಡು ಸಿನಿಮಾ ಮಾಡುತ್ತೇನೆ ಅಂತ ಹೇಳಿದ್ದರು. ಅಂದಂತೆ ಕಥೆಗಳನ್ನು ಓಕೆ ಮಾಡಿದ್ದಾರೆ. ನಿರ್ಮಾಪಕರು ಕೂಡ ಕ್ಯೂನಲ್ಲಿ ನಿಂತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಸದ್ಯ ಧ್ರುವ ಸರ್ಜಾ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಸ್ಯಾಂಡಲ್‌ವುಡ್ ನಿರ್ಮಾಪಕ ಕೆ ಪಿ ಶ್ರೀಕಾಂತ್ ಓಡಾಡುತ್ತಿದ್ದಾರೆ ಅನ್ನೋದು ಸುದ್ದಿ.

'ಯುಐ' ಸಿನಿಮಾಗೆ ಸಹ ನಿರ್ಮಾಪಕರಾಗಿದ್ದ ಕೆಪಿ ಶ್ರೀಕಾಂತ್ ಈಗಾಗಲೇ ದುನಿಯಾ ವಿಜಯ್ ಜೊತೆನೂ ಹೊಸ ಸಿನಿಮಾವನನ್ನು ಅನೌನ್ಸ್ ಮಾಡಿದ್ದಾರೆ. ಈ ಬೆನ್ನಲ್ಲೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದ್ದಾರೆ. ಹಾಗಿದ್ದರೆ ಆ ಸಿನಿಮಾ ಯಾವುದು? ಧ್ರುವ ಸರ್ಜಾಗೆ ಕಥೆ ಒಪ್ಪಿಸಿದ ಆ ನಿರ್ದೇಶಕ ಯಾರು? ಅನ್ನೋದನ್ನು ನೋಡೋಣ.
ಕೆಪಿ ಶ್ರೀಕಾಂತ್ ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ಮಾಪಕರಲ್ಲಿ ಇಬ್ಬರು. ಈಗಾಗಲೇ ಸಾಕಷ್ಟು ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 'ಸಲಗ', 'ಯುಐ' ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿ ಗೆದ್ದಿದ್ದಾರೆ. 'ಯುಐ' ಅವರು ಅಂದುಕೊಂಡಂತೆ ನಿರೀಕ್ಷಿತ ಮಟ್ಟಕ್ಕೆ ಹೋಗಲಿಲ್ಲ. ಹೀಗಾಗಿ ಮುಂದೆ ಸಿನಿಮಾ ನಿರ್ಮಾಣ ನಿಧಾನ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ತಕ್ಷಣಕ್ಕೆ ಎರಡು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ ಅನ್ನೋದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ.
ಅಷ್ಟಕ್ಕೂ ಸುದ್ದಿ ಏನಪ್ಪಾ ಅಂದ್ರೆ, ಈಗಾಗಲೇ ಧ್ರುವ ಸರ್ಜಾ ಹಾಗೂ ಕೆ ಪಿ ಶ್ರೀಕಾಂತ್ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆಯಂತೆ. ಕೆಪಿ ಶ್ರೀಕಾಂತ್‌ಗೆ ಧ್ರುವ ಸರ್ಜಾನೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಏಪ್ರಿಲ್‌ನಿಂದ ಧ್ರುವ ಸರ್ಜಾ ಸಿನಿಮಾದ ಶೂಟಿಂಗ್ ಶುರು ಮಾಡುವ ತರಾತುರಿಯಲ್ಲಿ ಕೆಪಿ ಶ್ರೀಕಾಂತ್ ಇದ್ದಾರಂತೆ.

ಇನ್ನು ಧ್ರುವ ಸರ್ಜಾ ಈಗಾಗಲೇ ನಿರ್ದೇಶಕರೊಬ್ಬರ ಕತೆಯನ್ನೂ ಓಕೆ ಮಾಡಿದ್ದಾರಂತೆ. ಈ ಹಿಂದೆ ದರ್ಶನ್‌ಗೆ ಆಕ್ಷನ್ ಕಟ್ ಹೇಳಿದ್ದ ಜಗ್ಗುದಾದ ಸಿನಿಮಾದ ನಿರ್ದೇಶಕ ರಾಘವೇಂದ್ರ ಹೆಗಡೆ ಕಥೆಯನ್ನು ಓಕೆ ಮಾಡಿದ್ದಾರಂತೆ. 'ಜಗ್ಗುದಾದ' ಬಳಿಕ ರಾಘವೇಂದ್ರ ಹೆಗೆಡೆ ಇನ್ನೊಂದು ಸಿನಿಮಾವನ್ನು ದರ್ಶನ್‌ಗೆ ಆಕ್ಷನ್ ಕಟ್ ಹೇಳುತ್ತಾರೆ ಅನ್ನೋ ಮಾತಿತ್ತು. ಆದ್ರೀಗ ರಾಘವೇಂದ್ರ ಹೆಗಡೆ ಹೆಸರು ಧ್ರುವ ಸರ್ಜಾ ಜೊತೆ ಕೇಳಿ ಬರುತ್ತಿದೆ.
ಇನ್ನೊಂದು ಕಡೆ ಕೆಪಿ ಶ್ರೀಕಾಂತ್ ಈಗಾಗಲೇ ದುನಿಯಾ ವಿಜಯ್ ಜೊತೆ ಸಿನಿಮಾ ಅನೌನ್ಸ್ ಮಾಡಿದ್ದಾರೆ. 'ಸಲಗ' ಸಿನಿಮಾ ಯಶಸ್ಸಿನ ಬಳಿಕ ಇನ್ನೊಂದು ಸಿನಿಮಾಗೆ ಕೈ ಹಾಕಿರಲಿಲ್ಲ. ಅಲ್ಲದೆ 'ಭೀಮ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಹೀಗಾಗಿ ದುನಿಯಾ ವಿಜಯ್‌ಗೆ ಬೇಡಿಕೆ ಹೆಚ್ಚಾಗಿದ್ದು, ದುನಿಯಾ ವಿಜಯ್‌ಗೂ ಒಂದು ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಈ ಎರಡು ಸಿನಿಮಾಗಳಲ್ಲಿ ಕೆಪಿ ಶ್ರೀಕಾಂತ್ ಯಾವುದನ್ನು ಮೊದಲು ಆರಂಭ ಮಾಡುತ್ತಾರೆ ಅನ್ನೋದು ಸದ್ಯಕ್ಕೆ ಕುತೂಹಲ. ಇದು ಕೇವಲ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ. ನಿರ್ಮಾಪಕರು ಇನ್ನೂ ಅಧಿಕೃತ ಮಾಹಿತಿ ಕೊಡಬೇಕಿದೆ.


Click it and Unblock the Notifications











